ಮೇಡ್‌ ಇನ್‌ ಇಂಡಿಯಾ ನಿರ್ಭಯಾ ಕ್ಷಿಪಣಿ ಪಾಸ್

By Web DeskFirst Published Apr 16, 2019, 11:24 AM IST
Highlights

ಮೊದಲ ಮೇಡ್‌ ಇನ್‌ ಇಂಡಿಯಾ| ಅಣ್ವಸ್ತ್ರ ಸಿಡಿತಲೆ ಕ್ಷಿಪಣಿ ಪರೀಕ್ಷೆ ಯಶಸ್ವಿ| ಅಂತಿಮ ಪರೀಕ್ಷೆಯಲ್ಲಿ ನಿರ್ಭಯಾ ಕ್ಷಿಪಣಿ ಪಾಸ್‌

ನವದೆಹಲಿ[ಏ.16]: ದೇಶದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ‘ನಿರ್ಭಯಾ’ ಕ್ರೂಸ್‌ ಕ್ಷಿಪಣಿಯ ಅಂತಿಮ ಪರೀಕ್ಷೆ ಯಶಸ್ವಿಯಾಗಿದೆ. ಇದರೊಂದಿಗೆ ನಮ್ಮ ದೇಶದಲ್ಲೇ ವಿನ್ಯಾಸಗೊಂಡ ಹಾಗೂ ನಮ್ಮ ದೇಶದಲ್ಲೇ ಉತ್ಪಾದನೆಯಾದ ಮೊದಲ ಅಣ್ವಸ್ತ್ರ ಕ್ಷಿಪಣಿಯು ಸೇನೆಗೆ ಸೇರಲು ಸಿದ್ಧವಾದಂತಾಗಿದೆ.

ಒಡಿಶಾದ ಅಬ್ದುಲ್‌ ಕಲಾಂ ದ್ವೀಪದಲ್ಲಿರುವ ಇಂಟಿಗ್ರೇಟೆಡ್‌ ಟೆಸ್ಟ್‌ ರೇಂಜ್‌ನಲ್ಲಿ ಸೋಮವಾರ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಭಯಾ ಕ್ಷಿಪಣಿಯ ಪರೀಕ್ಷೆ ನಡೆಸಿತು. ಅದು ಯಶಸ್ವಿಯಾಗಿದೆ ಎಂದು ಏರೋನಾಟಿಕಲ್‌ ಡೆವಲೆಪ್‌ಮೆಂಟ್‌ ಎಸ್ಟಾಬ್ಲಿಶ್‌ಮೆಂಟ್‌ (ಎಡಿಇ) ತಿಳಿಸಿದೆ.

300 ಕೆ.ಜಿ. ತೂಕದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಗಂಟೆಗೆ 0.7 ಮ್ಯಾಕ್‌ ವೇಗದಲ್ಲಿ 1000 ಕಿ.ಮೀ.ವರೆಗೆ ಚಲಿಸಿ ದಾಳಿ ನಡೆಸುವ ಸಾಮರ್ಥ್ಯವನ್ನು ನಿರ್ಭಯಾ ಕ್ಷಿಪಣಿ ಹೊಂದಿದೆ. 2013ರಿಂದ ಇಲ್ಲಿಯವರೆಗೆ ಈ ಕ್ಷಿಪಣಿಯ ನಾಲ್ಕು ಪರೀಕ್ಷೆಗಳನ್ನು ನಡೆಸಲಾಗಿದ್ದು, 2016 ಹಾಗೂ 2018ರಲ್ಲಿ ನಡೆಸಿದ ಪರೀಕ್ಷೆಗಳು ವಿಫಲಗೊಂಡಿದ್ದವು. ಈಗ ನಡೆಸಿದ ಅಂತಿಮ ಪರೀಕ್ಷೆ ಯಶಸ್ವಿಯಾಗಿದೆ.

ಟರ್ಬೋಜೆಟ್‌ ಎಂಜಿನ್‌ನ ನೆರವಿನಿಂದ ಚಲಿಸುವ ಈ ಕ್ಷಿಪಣಿಯು ಅತ್ಯುನ್ನತ ತಂತ್ರಜ್ಞಾನದ ನೇವಿಗೇಶನ್‌ ವ್ಯವಸ್ಥೆಯನ್ನು ಹೊಂದಿದೆ. ಹೀಗಾಗಿ ಕರಾರುವಾಕ್ಕಾಗಿ ಗುರಿಯ ಮೇಲೆ ದಾಳಿ ನಡೆಸುತ್ತದೆ. ದೆಹಲಿಯಲ್ಲಿ 2012ರಲ್ಲಿ ‘ನಿರ್ಭಯಾ’ ಮೇಲೆ ಭೀಕರ ಅತ್ಯಾಚಾರ ನಡೆದ ನಂತರ ಆಗಷ್ಟೇ ಅಭಿವೃದ್ಧಿಯ ಹಂತದಲ್ಲಿದ್ದ ಈ ಕ್ಷಿಪಣಿಗೆ ನಿರ್ಭಯಾ ಹೆಸರನ್ನೇ ಇಡಲಾಗಿದೆ.

ಏನಿದರ ವಿಶೇಷತೆ?

ನಿರ್ಭಯಾ ಕ್ಷಿಪಣಿ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಮೇಡ್‌ ಇನ್‌ ಇಂಡಿಯಾ ಕ್ಷಿಪಣಿಯಾಗಿದೆ. 6 ಮೀಟರ್‌ ಉದ್ದ, 0.52 ಮೀಟರ್‌ ಅಗಲವಿರುವ ಈ ಕ್ಷಿಪಣಿಯ ರೆಕ್ಕೆಗಳು 2.7 ಮೀಟರ್‌ ಅಗಲವಿವೆ. 200ರಿಂದ 300 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತು 0.6ರಿಂದ 0.7 ಮ್ಯಾಕ್‌ ವೇಗದಲ್ಲಿ ಇವು ಚಲಿಸಬಲ್ಲವು. ಸಿಡಿತಲೆಗಳನ್ನು ಹೊತ್ತಾಗ ಈ ಕ್ಷಿಪಣಿಯ ತೂಕ 1500 ಕೆ.ಜಿ.ಯಷ್ಟಾಗುತ್ತದೆ. 1000 ಕಿ.ಮೀ. ದೂರ ಸಾಗಿ ಇದು ದಾಳಿ ನಡೆಸಬಲ್ಲದು. ಅಂದರೆ ಮುಂಬೈ ಕಡಲ ತೀರದಿಂದ ಪಾಕಿಸ್ತಾನದ ಕರಾಚಿ ಮೇಲೆ ಅಥವಾ ರಾಜಸ್ಥಾನದಿಂದ ಇಸ್ಲಾಮಾಬಾದ್‌ ಮೇಲೆ ದಾಳಿ ನಡೆಸಬಹುದು.

click me!