ಫೇಸ್‌ಬುಕ್ ಸಿಇಒ ತೆಗೆದುಕೊಂಡ ಸಂಬಳ ಬರೀ 70 ರು. ಎಂಬ ವಿಚಾರ ಬಯಲಾದ ಬೆನ್ನಲ್ಲೇ ಜುಕರ್‌ಬರ್ಗ್ ಸುರಕ್ಷತೆಗೆ ಖರ್ಚಾದ ಮೊತ್ತವೂ ಬಹಿರಂಗಗೊಂಡಿದೆ. ಸಿಇಒ ವೇತನ ಹಾಗೂ ಜುಕರ್‌ಬರ್ಗ್ ಸುರಕ್ಷತೆಗೆ ವ್ಯಯಿಸಿದ ಮೊತ್ತದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.
ಕ್ಯಾಲಿಫೋರ್ನಿಯಾ[ಏ.14]: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಾರ್ಕ್ ಜುಕರ್‌ಬರ್ಗ್ 2018ರಲ್ಲಿ ತಮ್ಮ ಭದ್ರತೆಗೆ ಸುಮಾರು 140 ಕೋಟಿ ರು. ವೆಚ್ಚ ಮಾಡಿದ್ದಾರೆ. ಅದಕ್ಕೂ ಹಿಂದಿನ ವರ್ಷ ತಮ್ಮ ಹಾಗೂ ಕುಟುಂಬದ ಭದ್ರತೆಗೆ ಕೇವಲ 63 ಕೋಟಿ ರು. ವೆಚ್ಚ ಮಾಡಿದ್ದ ಅವರು, ಕಳೆದ ವರ್ಷ ಅದನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ.
ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್ ಕಂಪನಿಯಿಂದ ವರ್ಷಕ್ಕೆ ಕೇವಲ 1 ಡಾಲರ್ ಸಂಬಳ ಪಡೆದುಕೊಳ್ಳುತ್ತಾರೆ. ಕಳೆದ ಮೂರು ವರ್ಷಗಳಿಂದ ಅವರು ಇಷ್ಟೇ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಇತರ ವೆಚ್ಚಗಳಿಗಾಗಿ ಅವರಿಗೆ ಕಂಪನಿಯು ಸುಮಾರು 160 ಕೋಟಿ ರು. ಖರ್ಚು ಮಾಡುತ್ತದೆ. ಅದರಲ್ಲಿ 140 ಕೋಟಿ ರು.ಗಳನ್ನು ಭದ್ರತೆಗೇ ವ್ಯಯಿಸಲಾಗುತ್ತದೆ ಎಂದು ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ಕಂಪನಿ ತಿಳಿಸಿದೆ.
ಫೇಸ್‌ಬುಕ್ ಕಂಪನಿಯ ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಶೆರಿಲ್ ಸ್ಯಾಂಡ್‌ಬರ್ಗ್ ಅವರು 2018ರಲ್ಲಿ 165 ಕೋಟಿ ರು. ವೇತನ ಹಾಗೂ ಭತ್ಯೆಗಳನ್ನು ಪಡೆದಿದ್ದಾರೆ.