
ಬೆಂಗಳೂರು(ನ.19): ಕೋವಿಡ್-19 ಸವಾಲಿನ ನಡುವೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಆನ್‌ಲೈನ್ ಮೂಲಕ ನಡೆಸಲು ಉದ್ಯಾನ ನಗರಿ ಸರ್ವ ಸನ್ನದ್ಧವಾಗಿದ್ದು, ವಿಶ್ವದ ಗಮನ ಸೆಳೆಯುವ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಲಿದ್ದಾರೆ.
"
ಗುರುವಾರ ಬೆಳಗ್ಗೆ 10 ಗಂಟೆಗೆ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು 3 ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗ-2020ಯನ್ನು ಉದ್ಘಾಟಿಸಲಿದ್ದಾರೆ. ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ವಿಡಿಯೋ ಕಾನ್ಫರೆನ್ಸ್‌ಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಸಂಜೆ ಹೋಟೆಲ್‌ಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ತಾಂತ್ರಿಕ ನಾವೀನ್ಯತೆ ಮತ್ತು ಆವಿಷ್ಕಾರಕ್ಕೆ ಪೂರಕವಾಗಿ ಸಮ್ಮೇಳನ ನಡೆಯಲಿದೆ.
ಬೆಂಗಳೂರು ಟೆಕ್ ಸಮ್ಮಿಟ್‌ಗೆ ಭರ್ಜರಿ ಸಿದ್ಧತೆ: ಮೇಳದ ವಿಶೇಷಗಳು ಇಲ್ಲಿವೆ...!
ಆಸ್ಪ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಸ್ವಿಸ್ ಗಣರಾಜ್ಯದ ಉಪರಾಷ್ಟಾ್ರಧ್ಯಕ್ಷ ಗೈ ಪೆರ್ಮಲಿನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವ ಜಗದೀಶ್ ಶೆಟ್ಟರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಬೆಂಗಳೂರು ತಂತ್ರಜ್ಞಾನ ಸಮ್ಮೇಳನದ 23ನೇ ಆವೃತ್ತಿ ಇದಾಗಿದೆ. ಇದಕ್ಕೂ ಮುನ್ನ 22 ಶೃಂಗಸಭೆಗಳು ಭೌತಿಕ ಪಾಲ್ಗೊಳ್ಳುವಿಕೆಯಿಂದ ನಡೆದು ವಿಶ್ವದ ಗಮನ ಸೆಳೆದಿದ್ದವು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ವರ್ಚುವಲ್ ಆಗಿ ಶೃಂಗಸಭೆ ನಡೆಯಲಿದೆ. ವರ್ಚುವಲ್ ಆಗಿ ನಡೆಯುತ್ತಿರುವ ಸಮ್ಮೇಳನಕ್ಕೆ ದೇಶ-ವಿದೇಶದಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗುತ್ತಿದೆ.
ಫಿನ್ಲೆಂಡ್, ಇಸ್ರೇಲ್, ನೆದರ್‌ಲೆಂಡ್, ಇಂಗ್ಲೆಂಡ್, ಕೆನಡಾ, ಆಸ್ಪ್ರೇಲಿಯಾ, ಜರ್ಮನಿ, ಫಾನ್ಸ್, ಆಸ್ಪ್ರೇಲಿಯಾ, ಜರ್ಮನಿ, ಸ್ವೀಡನ್, ಸ್ವಿಜರ್‌ಲೆಂಡ್, ಡೆನ್ಮಾರ್ಕ್, ತೈವಾನ್, ಜಪಾನ್ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳು ಸಮ್ಮೇಳನದಲ್ಲಿ ಭಾಗವಹಿಸಲಿವೆ. 100ಕ್ಕೂ ಹೆಚ್ಚು ನವೋದ್ಯಮಗಳು, 4 ಸಾವಿರಕ್ಕೂ ಹೆಚ್ಚು ಉದ್ಯಮಿಗಳು, ಸುಮಾರು 270 ವಿಷಯ ಪರಿಣತರು, 70ಕ್ಕೂ ಹೆಚ್ಚು ಗೋಷ್ಠಿಗಳಿಗೆ ಸಮ್ಮೇಳನ ಸಾಕ್ಷಿಯಾಗಲಿದೆ. 250ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪನ್ನ ಪ್ರದರ್ಶಿಸಲಿವೆ. 20 ಸಾವಿರಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡುವ ನಿರೀಕ್ಷೆ ಇದೆ. ಮೇಳದ ವೇಳೆ ರಾಜ್ಯದ ಸರ್ಕಾರವು ಬೇರೆ ದೇಶಗಳೊಂದಿಗೆ ಕನಿಷ್ಠ 7 ಪರಸ್ಪರ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದೆ.
ಈ ಬಾರಿಯ ಹಬ್ಬಕ್ಕೆ ಭಾರತೀಯರ ಬ್ರ್ಯಾಂಡ್ ಆಯ್ಕೆ ಹೇಗಿತ್ತು? ಸಮೀಕ್ಷೆ ಬಹಿರಂಗ!
ವೈವಿಧ್ಯಮಯ ಗೋಷ್ಠಿಗಳು:
ನಾಲೆಜ್ ಹಬ್, ಇನೋವೇಷನ್ ಕಾರ್ನರ್, ಕಂಟ್ರಿ ಸೆಷನ್ಸ್ ವಿಭಾಗದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಜನರ ದೈನಂದಿನ ಬದುಕಿನೊಂದಿಗೆ ನೇರವಾಗಿ ಬೆಸೆದುಕೊಂಡಿರುವ ತಾಂತ್ರಿಕ ನಾವೀನ್ಯತೆಗಳನ್ನು ಗಮನದಲ್ಲಿರಿಸಿಕೊಂಡು ವಿಷಯಗೋಷ್ಠಿಗಳನ್ನು ಆಯ್ಕೆ ಮಾಡಲಾಗಿದೆ. ಕೃಷಿ ತಾಂತ್ರಿಕತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರೋಗ್ಯ ಸೇವೆ, ಆಹಾರ ಮತ್ತು ಪೌಷ್ಟಿಕತೆ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ಡ್ರೋನ್, 5ಜಿ, ಸೈಬರ್ ಸುರಕ್ಷತೆ, ಸ್ಮಾರ್ಟ್ ಸಿಟಿಗಳು ಮತ್ತು ನಗರ ಸುಸ್ಥಿರತೆ, ರಾಷ್ಟ್ರೀಯ ಶಿಕ್ಷಣ ನೀತಿ, ಕೊರೋನಾ ನಂತರದ ಸನ್ನಿವೇಶದಲ್ಲಿ ನಾಯಕತ್ವದ ಪುನರ್ ವ್ಯಾಖ್ಯಾನ ಇತ್ಯಾದಿ ವಿಷಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಹಸಿರು ಪುನರ್ ಸೃಷ್ಟಿಯಲ್ಲಿ ತಂತ್ರಜ್ಞಾನದ ಪಾತ್ರ ಮತ್ತು ಸುಸ್ಥಿರ ಭವಿಷ್ಯ (ಇಂಗ್ಲೆಂಡ್), ಸೈಬರ್ ಸ್ಪೇಸ್‌ನಿಂದ ಔಟರ್ ಸ್ಪೇಸ್‌ವರೆಗೆ (ಆಸ್ಪ್ರೇಲಿಯಾ), ಆಹಾರ ಮತ್ತು ಪೌಷ್ಟಿಕತೆಯ ಭವಿಷ್ಯದ ಡ್ರೈವಿಂಗ್ (ಸ್ವಿಟ್ಜರ್‌ಲೆಂಡ್), ಇ-ಮೊಬಿಲಿಟಿ, ಭವಿಷ್ಯದೆಡೆಗೆ ಹೆಜ್ಜೆ (ಜರ್ಮನಿ) ಎಂಬ ವಿಷಯ ಮಂಡನೆಗೆ ವಿವಿಧ ದೇಶಗಳು ಉತ್ಸುಕವಾಗಿವೆ. ಕರ್ನಾಟಕ ಸೇರಿದಂತೆ ದೇಶದ 50ಕ್ಕೂ ಹೆಚ್ಚು ನವೋದ್ಯಮಗಳಿಗೆ ಯೂರೋಪ್‌ನ ಮಾರುಕಟ್ಟೆಪ್ರವೇಶಿಸುವುದಕ್ಕೆ ನೆರವಾಗಲು ನೆದರ್‌ಲೆಂಡ್ ಒತ್ತು ನೀಡಲಿದೆ.
* 25ಕ್ಕೂ ಹೆಚ್ಚು: ಯುರೋಪ್, ಅಮೆರಿಕ ಸೇರಿ ವಿವಿಧ ಖಂಡಗಳಿಂದ ದೇಶಗಳು ಭಾಗಿ
* 7 ಒಪ್ಪಂದ: ರಾಜ್ಯ ಸರ್ಕಾರದಿಂದ ವಿವಿಧ ದೇಶಗಳೊಂದಿಗೆ ಒಡಂಬಡಿಕೆ ಸಾಧ್ಯತೆ
* 100ಕ್ಕೂ ಹೆಚ್ಚು: ನವೋದ್ಯಮಗಳ ಪ್ರತಿನಿಧಿಗಳು ಈ ತಂತ್ರಜ್ಞಾನ ಮೇಳದಲ್ಲಿ ಭಾಗಿ
* 4000 ಮಂದಿ: ಜಾಗತಿಕ ತಂತ್ರಜ್ಞಾನ ಕಂಪನಿಗಳ ಉದ್ಯಮಿಗಳು ಮೇಳದ ಅತಿಥಿಗಳು
* 250 ಕಂಪನಿ: ಟೆಕ್ ಶೃಂಗದಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಲಿರುವ ಕಂಪನಿಗಳ ಸಂಖ್ಯೆ
* 270 ತಜ್ಞರು: ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಷಯ ಪರಿಣಿತರಿಂದ ಭಾಷಣ
* 70 ಗೋಷ್ಠಿ: 3 ದಿನಗಳ ಸಮ್ಮೇಳನದಲ್ಲಿ ನಡೆಯಲಿರುವ ವಿಚಾರಗೋಷ್ಠಿಗಳ ಸಂಖ್ಯೆ
* 20 ಸಾವಿರ: ಸಂದರ್ಶಕರು ಬೆಂಗಳೂರು ಟೆಕ್ ಶೃಂಗ ಸಮ್ಮೇಳನಕ್ಕೆ ಭೇಟಿ ನಿರೀಕ್ಷೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.