ಬದಲಾಯ್ತು ಚಂದ್ರನ ಆಯಸ್ಸು: ಹೊಸ ಲೆಕ್ಕಾಚಾರದ ಡಿಟೇಲ್ಸು!

By nikhil vkFirst Published Jul 31, 2019, 2:28 PM IST
Highlights

ಚಂದ್ರನ ನೈಜ ಆಯಸ್ಸು ಬದಲಾಯಿಸಿದ ನಾಸಾ| ಚಂದ್ರನ ನೈಜ ಆಯಸ್ಸು ಈ ಮೊದಲು ಊಹಿಸಿದ್ದಕ್ಕಿಂತ ಹೆಚ್ಚು| ಸೌರಮಂಡಲದ ಉದಯದ 50 ಮಿಲಿಯನ್ ವರ್ಷಗಳ ತರುವಾಯ ಜನ್ಮ ತಳೆದ ಚಂದ್ರ| ಚಂದ್ರನ ಕಲ್ಲು, ಮಣ್ಣಿನ ಅಧ್ಯಯನದಿಂದ ಚಂದ್ರನ ನೈಜ ಆಯಸ್ಸಿನ ಆನಾವರಣ|

ವಾಷಿಂಗ್ಟನ್(ಜು.31): ಈ ಬ್ರಹ್ಮಾಂಡದಲ್ಲಿ ಪ್ರತಿಯೊಂದಕ್ಕೂ ಹುಟ್ಟು ಸಾವು ಎಂಬುದಿದೆ. ಪ್ರತಿ ನಕ್ಷತ್ರ, ಗ್ರಹಗಳು, ಉಪಗ್ರಹಗಳು ಹೀಗೆ ಎಲ್ಲವೂ ತಮ್ಮ ಆದಿ ಮತ್ತು ಅಂತ್ಯವನ್ನು ಕಾಣುತ್ತವೆ. ಆದರೆ ಗ್ರಹಕಾಯಗಳ ಜೀವಿತಾವಧಿ ಮನುಷ್ಯನ ಊಹೆಗೂ ನಿಲುಕದಷ್ಟು ದೀರ್ಘ ಎಂಬುದು ಎಲ್ಲರಿಗೂ ತಿಳಿದ ಸಂಗತಿ.

ಅದರಂತೆ ಸರಿಸುಮಾರು ಭೂಮಿಯ ಉದಯದ ಸಮಯದಲ್ಲೇ ಭೂಮಿಯ ಏಕೈಕ ಉಪಗ್ರಹ ಚಂದ್ರ ಕೂಡ ಹುಟ್ಟಿದ್ದಾನೆ ಎಂದು ಇಲ್ಲಿಯವರೆಗೂ ನಂಬಲಾಗಿತ್ತು. ಅಂದರೆ ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಭೂಮಿ ಮತ್ತು ಚಂದ್ರ ಏಕಕಾಲಕ್ಕೆ ಜನಿಸಿದ್ದವು ಎನ್ನಲಾಗಿತ್ತು.

ಆದರೆ ನಾಸಾದ ಹೊಸ ಸಂಶೋಧನೆ ಚಂದ್ರನ ಆಯಸ್ಸು ಈವರೆಗೆ ನಂಬಲಾಗಿದ್ದ ಆಯಸ್ಸಿಗಿಂತ ಹೆಚ್ಚು ಎಂದು ತಿಳಿಸಿದೆ. ಅಪೊಲೋ-11 ನೌಕೆಯ ಮೂಲಕ ಭೂಮಿಗೆ ತರಲಾದ ಚಂದ್ರನ ಕಲ್ಲು ಮತ್ತು ಮಣ್ಣಿನ ಅಧ್ಯಯನದಿಂದ ಚಂದ್ರ ಸೌರಮಂಡಲದ ಉದಯದ 50 ಮಿಲಿಯನ್ ವರ್ಷಗಳ ತರುವಾಯ ಹುಟ್ಟಿದ್ದಾನೆ ಎಂಬುದು ತಿಳಿದು ಬಂದಿದೆ.

ಈ ಹಿಂದೆ ಚಂದ್ರ ಸೌಮಂಡಲದ ಉದಯದ 150 ಮಿಲಿಯನ್ ವರ್ಷಗಳ ನಂತರ ಹುಟ್ಟು ಪಡೆದಿದ್ದ ಎಂದು ನಂಬಲಾಗಿತ್ತು. ಆದರೆ ಇದೀಗ ಸೌರಮಂಡಲದ ಉದಯದ ಕೇವಲ 50 ಮಿಲಿಯನ್ ವರ್ಷಗಳ ನಂತರ ಚಂದ್ರನ ಉದಯವಾಗಿದೆ ಎಂಬುದು ಸ್ಪಷ್ಟವಾಗಿದೆ.

ಚಂದ್ರನ ಜನ್ಮ ರಹಸ್ಯ:
ಸೌರಮಂಡಲದ ಉದಯದ ಸಂದರ್ಭದಲ್ಲಿ ಮಂಗಳ ಗ್ರಹದಷ್ಟು ಗಾತ್ರದ ಥಿಯಾ ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದಿತ್ತು. ಈ ಡಿಕ್ಕಿಯ ಪರಿಣಾಮ ಥಿಯಾ ಎರಡು ಹೋಳಾಗಿ ಭೂಮಿಯ ಗುರುತ್ವಾಕರ್ಷಣೆ ಬಲಕ್ಕೆ ಸಿಕ್ಕು, ಭೂಮಿಯನ್ನು ಸುತ್ತಲು ಆರಂಭಿಸಿತು.

ಆದರೆ ಕಾಲಾನಂತರದಲ್ಲಿ ಈ ಎರಡು ಪುಟ್ಟ ಗ್ರಹಕಾಯ ಒಂದಾಗಿ ಸೇರಿ ಚಂದ್ರನ ಈಗಿನ ಆಕಾರ ಪಡೆಯಿತು. ದೊಡ್ಡ ಗಾತ್ರ ಪಡೆದುಕೊಂಡ ಚಂದ್ರ ಅಂದಿನಿಂದ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾಗಿ ಭೂಮಿಯನ್ನು ಸುತ್ತಲು ಆರಂಭಿಸಿತು.

click me!