ಬಂದಿದೆ ದೇಶದ ಮೊದಲ ದೇಸಿ ಸೋಷಿಯಲ್‌ ಮೀಡಿಯಾ ಆ್ಯಪ್‌ ‘ಎಲಿಮೆಂಟ್ಸ್‌’!

By Kannadaprabha NewsFirst Published Jul 6, 2020, 1:01 PM IST
Highlights

ಬಂದಿದೆ ಮೊದಲ ದೇಸಿ ಸೋಷಿಯಲ್‌ ಮೀಡಿಯಾ ಆ್ಯಪ್‌ ‘ಎಲಿಮೆಂಟ್ಸ್‌’| 1000 ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಂದ ಅಭಿವೃದ್ಧಿ

ನವದೆಹಲಿ(ಜು.06): ಚೀನಾದ ಆ್ಯಪ್‌ಗಳಿಗೆ ನಿಷೇಧ ಹೇರಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದ ದೇಸಿ ಆ್ಯಪ್‌ಗಳನ್ನು ರೂಪಿಸಲು ಕರೆ ನೀಡಿದ ಬೆನ್ನಲ್ಲೇ ದೇಶದ ಮೊದಲ ಮೇಡ್‌ ಇನ್‌ ಇಂಡಿಯಾ ಸೋಷಿಯಲ್‌ ಮೀಡಿಯಾ ಆ್ಯಪ್‌ ಬಿಡುಗಡೆಯಾಗಿದೆ. ‘ಎಲಿಮೆಂಟ್ಸ್‌’ ಹೆಸರಿನ ಈ ಆ್ಯಪ್‌ನಲ್ಲಿ ಆಡಿಯೋ, ವಿಡಿಯೋ ಶೇರ್‌ ಮಾಡಿಕೊಳ್ಳುವುದು, ಸಂದೇಶ ವಿನಿಮಯ, ವಸ್ತುಗಳ ಮಾರಾಟ, ಸ್ನೇಹಿತರ ಜೊತೆ ಸಂಪರ್ಕದಿಂದ ಹಿಡಿದು ಹಣ ವರ್ಗಾವಣೆಯವರೆಗೆ ಹತ್ತಾರು ಚಟುವಟಿಕೆಗಳನ್ನು ನಡೆಸಬಹುದು.

ವರ್ಚುವಲ್‌ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಭಾನುವಾರ ಈ ಆ್ಯಪ್‌ ಬಿಡುಗಡೆ ಮಾಡಿದರು. ಈಗಾಗಲೇ ಇದು 2 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ ಆಗಿದ್ದು, ಗೂಗಲ್‌ ಪ್ಲೇಸ್ಟೋರ್‌ ಮತ್ತು ಆ್ಯಪ್‌ಸ್ಟೋರ್‌ಗಳಲ್ಲಿ ಉತ್ತಮ ರೇಟಿಂಗ್‌ ಪಡೆದಿದೆ. 1000ಕ್ಕೂ ಹೆಚ್ಚು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಸೇರಿ ರೂಪಿಸಿರುವ ಈ ಆ್ಯಪ್‌ 8 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಆಡಿಯೋ ಮತ್ತು ವಿಡಿಯೋ ಕಾನ್ಪರೆನ್ಸ್‌ ಕಾಲ್‌, ಸುರಕ್ಷಿತ ಹಣ ವರ್ಗಾವಣೆ, ಭಾರತೀಯ ಬ್ರಾಂಡ್‌ನ ವಸ್ತುಗಳನ್ನು ಮಾರಾಟ ಮಾಡಲು ವಾಣಿಜ್ಯ ವೇದಿಕೆ, ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು ಚಾಟಿಂಗ್‌ ಸೌಲಭ್ಯವೂ ಸೇರಿದಂತೆ ಹಲವಾರು ಸೌಲಭ್ಯಗಳು ಒಂದೇ ಕಡೆ ದೊರೆಯುವ ಸೂಪರ್‌ ಆ್ಯಪ್‌ ಇದಾಗಿದೆ.

ಆ್ಯಪ್‌ ಬಿಡುಗಡೆ ಮಾಡಿದ ವೆಂಕಯ್ಯ ನಾಯ್ಡು ಮಾತನಾಡಿ, ‘ಆತ್ಮನಿರ್ಭರ ಭಾರತದ ಆಶಯಗಳನ್ನು ಸಾಕಾರಗೊಳಿಸಿದರೆ ನಮ್ಮ ದೇಶದ ಸಾಮರ್ಥ್ಯವನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಂಡಂತಾಗುತ್ತದೆ. ನಮ್ಮಲ್ಲಿರುವ ಮೂಲಸೌಕರ್ಯಗಳನ್ನು ಬಳಸಿ, ಆಧುನಿಕ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲದ ಸಹಾಯದಿಂದ ಪೂರೈಕೆ ಸರಣಿಯನ್ನು ಸಶಕ್ತಗೊಳಿಸಿದರೆ ದೇಶವನ್ನು ಆರ್ಥಿಕಾಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು’ ಎಂದು ಹೇಳಿದರು.

click me!