ಸೆಕ್ಸ್ಟಿಂಗ್‌; ಕಾಪಾಡಿಕೊಳ್ಳಿ ಗೌಪ್ಯತೆ!

By Web DeskFirst Published Jul 2, 2019, 4:01 PM IST
Highlights

ಇತ್ತೀಚೆಗಷ್ಟೇ ಹಾಲಿವುಡ್ ನಟಿ ಹಾಗೂ ಗಾಯಕಿ ಬೆಲ್ಲಾ ತೋರ್ನ್‌ಳ ನ್ಯೂಡ್ ಪೋಟೋಗಳು ಹ್ಯಾಕರ್ಸ್‌ಗಳ ಕೈಗೆ ಸಿಕ್ಕು ವೈರಲ್ ಆಗಿದ್ದು ಗೊತ್ತೇ ಇದೆ. ಯಾರಿಗೋ ಖಾಸಗಿಯಾಗಿ ಕಳಿಸಿದ ಮೆಸೇಜ್, ಫೋಟೋ, ವಿಡಿಯೋಗಳು ಎಲ್ಲೆಡೆ ಹರಡುವುದು ಹೇಗೆ? ಹ್ಯಾಕರ್‌‌ಗಳಿಂದ ಈ ಖಾಸಗಿ ಖುಷಿಯನ್ನು ರಕ್ಷಿಸಿಕೊಳ್ಳುವುದು ಹೇಗೆ?

ಪ್ರೀತಿಯ ಅಮಲು ನೆತ್ತಿಗೇರಿದಾಗ ನಿಮ್ಮ ಪ್ರಿಯಕರನೊಂದಿಗೆ ನೀವು ಸೆಕ್ಸ್ಟಿಂಗ್ ನಡೆಸಿರಬಹುದು. ತವರಿಗೆ ಬಂದ ಪತ್ನಿ ಪತಿಗೆ ತನ್ನ ನೆನಪಿಸಲು ರೊಮ್ಯಾಂಟಿಕ್ ಮೂಡ್‌ನಲ್ಲಿ ನ್ಯೂಡ್ ಫೋಟೋವೊಂದನ್ನು ಕಳುಹಿಸಿರಬಹುದು. ಎಚ್‌ಬಿಒ ಚಾನೆಲ್ಲಿನ ಹೊಸ ಶೋ ಯುಫೋರಿಯಾದ ಮುಖ್ಯ ಪಾತ್ರ ಹೇಳುವಂತೆ "ಹೇಳೀ ಕೇಳೀ ಇದು 2019. ನ್ಯೂಡ್ಸ್ ಎಂಬುದು ಪ್ರೀತಿಯ ಕರೆನ್ಸಿ".

ಹೌದು, ಇಂದಿನ ಯುವಪ್ರೇಮಿಗಳ ನಡುವೆ ಸೆಕ್ಸ್ಟಿಂಗ್, ನ್ಯೂಡ್ಸ್, ನ್ಯೂಡ್ ವಿಡಿಯೋ ಎಲ್ಲವೂ ಸರಾಗವಾಗಿ ಹರಿದಾಡುತ್ತವೆ. ಆದರೆ, ಡಿಜಿಟಲ್ ದುನಿಯಾದಲ್ಲಿ ಖಾಸಗಿ ಎಂಬುದೆಲ್ಲ ಖಾಸಗಿಯಾಗಿಯೇ ಉಳಿಯುವ ಯಾವ ಖಾತ್ರಿಯೂ ಇಲ್ಲ. ನಂಬಿದವನೇ ಚೂರಿ ಹಾಕಬಹುದು. ಸಿಟ್ಟಿನಲ್ಲಿ ನಿಮ್ಮ ಖಾಸಗಿ  ವಿಡಿಯೋವನ್ನು ಪೋರ್ನ್ ಸೈಟ್‌‌ಗೆ ಹಾಕಬಹುದು. ಹಾಗೆಂದ ಮಾತ್ರಕ್ಕೆ ಸೆಕ್ಸ್ಟಿಂಗ್ ಸಂಪೂರ್ಣ ಬಿಟ್ಟು ಬಿಡಿ ಎಂದು ಉಪದೇಶ ಮಾಡುತ್ತಿಲ್ಲ. ಅದಕ್ಕೂ ಮುನ್ನ ಕೆಲ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದಷ್ಟೇ ಎಚ್ಚರಿಸುತ್ತಿದ್ದೇವೆ. 

ಸೆಕ್ಸ್ಟಿಂಗ್ ಬಗ್ಗೆ ಹದಿವಯಸ್ಸಿನ ಮಕ್ಕಳು ತಿಳಿದಿರಲೇಬೇಕಾದ ಸಂಗತಿಗಳಿವು!

ಇಬ್ಬರ ಒಪ್ಪಿಗೆಯನ್ನು ಖಚಿತಪಡಿಸಿಕೊಳ್ಳಿ

ನಿಮ್ಮ ನ್ಯೂಡ್ ಫೋಟೋ ಅಥವಾ ಟಾಪ್‌ಲೆಸ್ ಸೆಲ್ಫೀ ಕಳಿಸುವಾಗ, ಸೆಕ್ಸ್ಟಿಂಗ್ ಮಾಡುವಾಗ ಆ ಕಡೆ ರಿಸೀವ್ ಮಾಡುವವರ ಒಪ್ಪಿಗೆ ಇರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಅದು ಹರಾಸ್‌ಮೆಂಟ್ ಎನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ನಿಮಗೆ ಕಂಫರ್ಟ್ ಇಲ್ಲದೆ ಒತ್ತಾಯಕ್ಕೆ ಅಥವಾ ಭಯಕ್ಕೆ ಕೂಡಾ ಕಳುಹಿಸಬೇಡಿ. ಇಬ್ಬರೂ ಶೇ.100ರಷ್ಟು ಒಪ್ಪಿಗೆ ಹಾಗೂ ಸಂತೋಷದಿಂದಲೇ ಸೆಕ್ಸ್ಟಿಂಗ್ ಮಾಡುತ್ತಿದ್ದೀರೆಂಬುದು ಖಚಿತವಿರಲಿ. 

ಗುರುತಿಸುವಂಥ ವಿವರ ಬೇಡ

ಸೆಕ್ಸ್ಟ್, ಖಾಸಗಿ ಫೋಟೋ, ವಿಡಿಯೋ ಹಂಚಿಕೊಳ್ಳುವಾಗ ನಿಮ್ಮ ಮುಖವನ್ನು ಖಂಡಿತಾ ತೋರಿಸಬೇಡಿ. ಅಷ್ಟೇ ಅಲ್ಲ, ಒಂದು ವೇಳೆ ಲೀಕ್ ಆದರೆ ಅದು ನೀವೇ ಎಂದು ಗುರುತಿಸುವಂಥ ವಿವರಗಳು ಯಾವುವೂ ಇಲ್ಲದಂತೆ ಎಚ್ಚರವಹಿಸಿ. ಉದಾಹರಣೆಗೆ ಟ್ಯಾಟೂ, ಬೆಡ್‌ರೂಂ, ಪಿಯರ್ಸಿಂಗ್ ಇತ್ಯಾದಿ. ಪ್ಲೇನ್ ಬ್ಯಾಕ್‌ಗ್ರೊಂಡ್ ಇರುವೆಡೆ ಮುಖ ಕಾಣದಂತೆ ಫೋಟೋ ಅಥವಾ ವಿಡಿಯೋ ಮಾಡಿ. ವಿಡಿಯೋದಲ್ಲಿ ಧ್ವನಿ ಇರದಂತೆ ಎಚ್ಚರವಹಿಸಿ. ಇನ್ನಾವುದೇ ಗುರುತಿಸಬಲ್ಲ ಲಕ್ಷಣಗಳಿದ್ದರೆ ಕಳುಹಿಸುವ ಮುಂಚೆ ಅದನ್ನು ಬ್ಲರ್ ಮಾಡಿ ಇಲ್ಲವೇ ಕ್ರಾಪ್ ಮಾಡಿ. 

ಸೆಕ್ಸ್ಟಿಂಗ್ ಕಂಡುಹಿಡಿದಿದ್ದು ಥಾಮಸ್ ಎಡಿಸನ್ನಾ?

ಮೆಟಾಡೇಟಾ ಡಿಲೀಟ್ ಮಾಡಿ

ಸೆಕ್ಸ್ಟಿಂಗ್ ಎಂಬುದು ಸಂಪೂರ್ಣ ಮೊಬೈಲ್ ಫೋನ್‌ನಲ್ಲೇ ನಡೆಯುವ ವಿದ್ಯಾಮಾನವಾದರೂ, ಖಾಸಗಿ ಫೋಟೋ, ವಿಡಿಯೋ ಕಳುಹಿಸುವ ಮುಂಚೆ ಅದನ್ನು ಡೆಸ್ಕ್‌ಟಾಪ್‌ಗೆ ಹಾಕಿ ಕೆಲ ಎಡಿಟ್ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಫೋನ್‌ಗಳಲ್ಲಿ ತೆಗೆದುಕೊಳ್ಳುವ ಫೋಟೋಗಳಲ್ಲಿ ಮೆಟಾಡೇಟಾ ಇರುತ್ತದೆ. ಅಂದರೆ, ಜಿಪಿಎಸ್ ಕನೆಕ್ಷನ್ ಇರುವುದರಿಂದ ಎಲ್ಲಿ, ಯಾವಾಗ ಫೋಟೋ ತೆಗೆದಿರಿ, ಡೇಟ್ ಹಾಗೂ ಸಮಯ, ಕ್ಯಾಮೆರಾ ಮಾಡೆಲ್ ಹಾಗೂ ಇತರೆ ಮಾಹಿತಿಗಳು ಫೋಟೋ ಅಥವಾ ವಿಡಿಯೋದೊಂದಿಗೆ ಸೇರಿರುತ್ತವೆ. ಹೀಗಾಗಿ, ಅವನ್ನು ಕಳಿಸುವ ಮೊದಲು ಈ ಎಲ್ಲ ಮೆಟಾಡೇಟಾ ಅಳಿಸುವುದು ಮುಖ್ಯ. ನಿಮ್ಮದು ಐಫೋನ್ ಕ್ಯಾಮೆರಾ ಆಗಿದ್ದರೆ ಜಿಯೋಗ್ರಾಫಿಕ್ ಡೇಟಾ ಫೋಟೋದೊಂದಿಗೆ ಬರದಂತೆ ಸೆಟಿಂಗ್ಸ್ ಮಾಡಿಕೊಳ್ಳಬಹುದು. ವ್ಯೂಎಕ್ಸಿಫ್‌ನಂಥ ಆ್ಯಪ್ ನಿಮ್ಮ ಫೋನ್‌ನಿಂದಲೇ ಮೆಟಾಡೇಟಾ ನೋಡಿ ಅಳಿಸಲು ಅವಕಾಶ ಮಾಡಿಕೊಡುತ್ತವೆ. ಅವು ಕೆಲಸ ಮಾಡಲಿಲ್ಲವೆಂದರೆ ಕಂಪ್ಯೂಟರ್ ಮೊರೆ ಹೋಗಿ. ಫೋಟೋ ಮೇಲೆ ರೈಟ್ ಕ್ಲಿಕ್ ಮಾಡಿ 'ಪ್ರಾಪರ್ಟೀಸ್' ಸೆಲೆಕ್ಟ್ ಮಾಡಿ. ಅದರಲ್ಲಿ 'ಡಿಟೇಲ್ಸ್‌'ಗೆ ಹೋಗಿ 'ರಿಮೂವ್ ಪ್ರಾಪರ್ಟೀಸ್ ಆ್ಯಂಡ್ ಪರ್ಸನಲ್ ಇನ್ಫರ್ಮೇಶನ್' ಆಯ್ಕೆ ಕ್ಲಿಕ್ ಮಾಡಿ. 

ಸೆಕ್ಯೂರ್ ಕನೆಕ್ಷನ್ ಬಳಸಿ

ಇಂಥ ಸಂದರ್ಭದಲ್ಲಿ ವಿಪಿಎನ್ ಬಳಸುವುದು ಮುಖ್ಯ. ವರ್ಚುಯಲ್ ಪ್ರೈವೇಟ್ ನೆಟ್ವರ್ಕ್- ಇದು ತಾತ್ಕಾಲಿಕ ಐಪಿ ಅಡ್ರೆಸ್ ಹುಟ್ಟುಹಾಕಿ, ನಿಜವಾದ ಐಪಿ ಅಡ್ರೆಸ್ ಮುಚ್ಚಿಟ್ಟು ನಿಮ್ಮ ವೆಬ್ ಚಟುವಟಿಕೆಗಳನ್ನು ಖಾಸಗಿಯಾಗಿಡುತ್ತದೆ. ಅಂದರೆ ವಿಪಿಎನ್ ನಿಮ್ಮನ್ನು ಅಂತರ್ಜಾಲ ಲೋಕದಲ್ಲಿ ಅನಾಮಿಕರನ್ನಾಗಿಡುತ್ತದೆ. ಸಾರ್ವಜನಿಕ ವೈಫೈ ಬಳಸಿ ಎಂದಿಗೂ ಸೆಕ್ಸ್ಟಿಂಗ್‌ನಲ್ಲಿ ತೊಡಗಬೇಡಿ. ಇದರಲ್ಲಿ ಹ್ಯಾಕರ್ಸ್ ನಿಮ್ಮ ಮೆಸೇಜ್ ಎಗರಿಸುವುದು ಸುಲಭ. ಯಾವಾಗಲೂ ಸೆಕ್ಯೂರ್  ವೈಫೈ ನೆಟ್ವರ್ಕ್ ಬಳಸಿ.

ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಇರುವ ಮೆಸೇಜಿಂಗ್ ಆ್ಯಪ್ಸ್ ಬಳಸಿ

ಫೋನಿನ ಮೆಸೇಜ್ ಆಯ್ಕೆ ಬಳಸುವುದಕ್ಕಿಂತಾ ಫೇಸ್ಬುಕ್ ಮೆಸೆಂಜರ್, ವಾಟ್ಸಾಪ್ ‌ನಂಥ ಮೆಸೇಜಿಂಗ್ ಆ್ಯಪ್ಸ್ ಬಳಕೆ ಉತ್ತಮ. ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಇರುವ ಈ ಆ್ಯಪ್ಸ್‌ಗಳಲ್ಲಿ ನೀವು ಯಾರಿಗೆ ಸಂದೇಶ ಕಳುಹಿಸಿರುವಿರೋ ಅವರ ಹೊರತಾಗಿ ವಾಟ್ಸಾಪ್ ಕಂಪನಿಯ ಜನರು ಕೂಡಾ ಅವನ್ನು ಓದಲು ಸಾಧ್ಯವಿಲ್ಲ. 

ಸೆಕ್ಸ್ಟಿಂಗ್ ಚಾಳಿ: ನಗ್ನ ಫೋಟೋಗಳು ಲೀಕ್ ಆಗೋ ಚಾನ್ಸ್ ಇದೆ ಹುಷಾರು!

ಸಿಂಕ್ ಆಗದಿರಲಿ

ಖಾಸಗಿ ಸಂದೇಶ ಕಳುಹಿಸುವಾಗ ಎಚ್ಚರ ವಹಿಸಬೇಕು ಎನ್ನುವುದಾದರೆ, ನಂತರ  ಬಂದ ಸಂದೇಶಗಳನ್ನು ಸೇವ್ ಮಾಡಿಡುವಾಗ ಕೂಡಾ ಹ್ಯಾಕರ್ಸ್ ಕೈಗೆ ಸಿಗದಂತೆ ಕೆಲ ವಿಷಯವನ್ನು ಗಮನಿಸಬೇಕು. ನೀವು ಐಫೋನ್ ಬಳಸುತ್ತಿದ್ದರೆ ನಿಮ್ಮ ಸಂದೇಶಗಳೆಲ್ಲ ಐಕ್ಲೌಡ್‌ನೊಂದಿಗೆ ಸಿಂಕ್ ಆಗುತ್ತಿರಬಹುದು. ಕಂಪನಿಗಳು ತಮ್ಮ ಕ್ಲೌಡ್ ಸೇಫ್ ಹಾಗೂ ಸೆಕ್ಯೂರ್ ಎಂದು ಹೇಳುತ್ತಾವಾದರೂ ಅವೆಲ್ಲವೂ ನಿಯಂತ್ರಣ ಮೀರಿದ ವಿಷಯ. ಹೀಗಾಗಿ, ಇಂಥ  ನ್ಯೂಡ್ ಫೋಟೋಗಳನ್ನು ಸೇವ್ ಮಾಡುವುದಾದರೆ ಪರ್ಸನಲ್ ಕ್ಲೌಡ್ ಸ್ಟೋರೇಜ್‌ನಲ್ಲಿ ಉಳಿಸಿ. ಆದರೆ, ಐಕ್ಲೌಡ್, ಗೂಗಲ್ ಡ್ರೈವ್ ಮುಂತಾದವಲ್ಲಿ ಬೇಡ. ಪರ್ಸನಲ್ ಕ್ಲೌಡ್ ಸ್ಟೋರೇಜ್ ಪೂರ್ತಿ ಸೆಕ್ಯೂರ್ ಎಂದೇನಲ್ಲ, ಆದರೆ ಈ ವೇದಿಕೆ ಬಹಳ ಸಣ್ಣದಾದ್ದರಿಂದ ಹ್ಯಾಕರ್‌ಗಳು ಇತ್ತ ಗಮನ ಹರಿಸುವುದಿಲ್ಲ. 

ಸಾಕ್ಷ್ಯ ನಾಶ ಮಾಡಿ

ನೀವು ನ್ಯೂಡ್ ಕಳಿಸಿದ ಬಳಿಕ ನಿಮ್ಮ ಫೋನ್‌ನಿಂದ ಅದನ್ನು ತಕ್ಷಣ ಡಿಲೀಟ್ ಮಾಡಿ. ನಿಮ್ಮ ಪಾರ್ಟ್ನರ್ ಬಳಿ ಇದ್ದೇ ಇರುತ್ತದೆ ನಿಜ. ಆದರೆ, ನಿಮ್ಮ ಕಡೆಯಿಂದ ಹ್ಯಾಕರ್‌ಗಳಿಗೆ ಏನೂ ಸಿಗುತ್ತಿಲ್ಲವೆಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ನಂತರ ನಿಮ್ಮ ಸಂಗಾತಿಗೂ ನ್ಯೂಡ್ಸ್ ನೋಡಿದ ಬಳಿಕ ಹಾಗೇ ಮಾಡಲು ಹೇಳಿ. 

click me!