ಕೊರೋನಾ ವೈರಸ್ ಸೋಂಕು ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಲಾಕ್‌ಡೌನ್ ಆಗಿವೆ. ಇದರಿಂದ ಕಂಪನಿಗಳು ಕೆಲಸ ನಿಲ್ಲಿಸಲಾಗದೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡುವ ಮೂಲಕ ಕೆಲಸವನ್ನು ಪಡೆಯುತ್ತಿವೆ. ಈ ಕಾಲಘಟ್ಟದಲ್ಲಿ ಇಂಥಹ ಸನ್ನಿವೇಶಗಳಿಗೆ ಅನುಕೂಲವಾಗುವ ಜೂಮ್ ಆ್ಯಪ್ ಹೆಚ್ಚು ಪ್ರಚಾರಕ್ಕೆ ಬಂದಿದ್ದು, 2020ರ ವೇಳೆಗೆ ಭಾರಿ ಪ್ರಮಾಣದ ಬಳಕೆಗೆ ಒಳಪಟ್ಟಿದೆ. ಆದರೆ, ಇದು ನಿಜವಾಗಿಯೂ ಸುರಕ್ಷಿತವೇ?
ಜಗತ್ತಿಗೆ ಕೊರೋನಾ ಸೋಂಕು ಆವರಿಸಿ ಇಡೀ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿದೆ. ಅಲ್ಲದೆ, ವರ್ಕಿಂಗ್ ನೇಚರ್ ಅನ್ನೂ ಬದಲಾಯಿಸಿದೆ. ದೇಶಗಳು ಲಾಕ್‌ಡೌನ್ ಆಗಿದ್ದರೂ ಕೆಲಸಗಳು ನಿಲ್ಲುವಂತಿಲ್ಲ. ಇದಕ್ಕಾಗಿ ಬಹುತೇಕ ಕಂಪನಿಗಳು ಇಂದು ವರ್ಕ್ ಫ್ರಂ ಹೋಂ ಮೊರೆಹೋಗಿವೆ. ಆದರೆ, ಸೂಕ್ತ ಸೌಲಭ್ಯವನ್ನು ಇನ್ನೂ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಆ್ಯಪ್‌ಗಳು ಮೊರೆಹೋಗುತ್ತಿವೆ. ಆದರೆ, ನೀವು ಬಳಸುತ್ತಿರುವ ಆ್ಯಪ್ ನಿಜವಾಗಿಯೂ ಸುರಕ್ಷಿತವೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಇಲ್ಲಾಗುವ ಕಚೇರಿ ಚಟುವಟಿಕೆ ಇರಬಹುದು, ಇಲ್ಲವೇ ನಿಮ್ಮ ಖಾಸಗೀ ಮಾಹಿತಿ ಇರಬಹುದು ಎಲ್ಲವೂ ಹ್ಯಾಕ್ ಆಗುತ್ತಿದೆ ಎಚ್ಚರ.
ಹೌದು, ನೀವು ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಮಾಹಿತಿಗಳು ಸೋರಿಕೆಯಾಗುವುದು ನಿಶ್ಚಿತ, ನಿಮ್ಮ ಸಣ್ಣ ತಪ್ಪಿಗಾಗಿ ಹ್ಯಾಕರ್ಸ್‌ಗಳು ಕಾಯುತ್ತಿರುತ್ತಾರೆಂಬ ಅಂಶವನ್ನು ಈಗ ಅಮೆರಿಕದ ಎಫ್‌ಬಿಐ ಎಚ್ಚರಿಕೆ ಸಂದೇಶ ನೀಡಿದೆ. ಹೀಗಾಗಿ ಬಳಕೆ ಮಾಡಬೇಕಾದರೆ ಜಾಗ್ರತೆ ವಹಿಸಿ ಎಂದು ಕೆಲವು ಟಿಪ್ಸ್‌ಗಳನ್ನೂ ಕೊಟ್ಟಿದೆ. ಈಗ ಇಷ್ಟೆಲ್ಲ ಸಮಸ್ಯೆಗೆ ಮೂಲವಾಗಿರುವುದು ಜೂಮ್ ಆ್ಯಪ್. ಹೌದು, ವಿಡಿಯೋ ಕಾನ್ಫರೆನ್ಸ್‌ಗಾಗಿ ಹೆಚ್ಚಾಗಿ ಬಳಸಲ್ಪಡುವ ಈ ಆ್ಯಪ್ ಈಗ ಹ್ಯಾಕರ್‌ಗಳ ಪಾಲಿಗೆ ಸ್ವರ್ಗದ ಬಾಗಿಲಾಗಿದ್ದು, ನೀವು ಈ ಬಾಗಿಲನ್ನು ತೆರೆಯುವುದನ್ನೇ ಕಾಯುತ್ತಿದ್ದಾರೆ. ಈ ಜೂಮ್ ಆ್ಯಪ್ ಅನ್ನು ಭಾರತದಲ್ಲೂ ಹಲವು ಕಂಪನಿಗಳು ಸೇರಿದಂತೆ ಆನ್‌ಲೈನ್ ಕ್ಲಾಸ್‌ಗಳಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ನೀವು ಜೂಮ್ ಬಳಕೆದಾರರಾಗಿದ್ದರೆ ಸ್ವಲ್ಪ ಎಚ್ಚರವಹಿಸಿ, ನಿಮ್ಮ ಮಾಹಿತಿಯನ್ನು ಕಾಪಾಡಿಕೊಳ್ಳಿ. ಅನಾಮಿಕರಾಗಿ ನಿಮ್ಮ ವಿಡಿಯೋ ಕಾನ್ಫರೆನ್ಸ್‌ಗೆ ಎಂಟ್ರಿ ಕೊಟ್ಟು ಹ್ಯಾಕ್ ಮಾಡುವ ಪ್ರಕ್ರಿಯೆಗೆ ಜೂಮ್ ಬಾಂಬಿಂಗ್ ಇಲ್ಲವೇ ಫೋಟೋ ಬಾಂಬಿಂಗ್ ಎಂದು ಹೇಳುತ್ತಾರೆ.
ಇದನ್ನೂ ಓದಿ | ಕೊರೋನಾ ರೋಗಿಯಿಂದ ನೀವೆಷ್ಟು ಸೇಫ್? ಮಾಹಿತಿ ಕೊಡುತ್ತೆ ಕೇಂದ್ರದ ಹೊಸ ಆ್ಯಪ್...
ಹ್ಯಾಕ್ ಆದಾಗ ಏನಾಗುತ್ತೆ?
ಬಹುತೇಕ ಸಂದರ್ಭಗಳಲ್ಲಿ ಜೂಮ್ ಆ್ಯಪ್ ಬಳಕೆ ಮಾಡುತ್ತಿದ್ದಾಗ ಹ್ಯಾಕ್ ಆಗಿದ್ದರೆ ಪೋರ್ನ್ ವಿಡಿಯೋಗಳು, ಇಲ್ಲವೇ ಅಶ್ಲೀಲ ಫೋಟೋ ಹಾಗೂ ಬೆದರಿಕೆ ಸಂದೇಶಗಳು ಇದ್ದಕ್ಕಿದ್ದಂತೆ ಕಾಣಲ್ಪಡುತ್ತದೆ. ಆಗ ಕಾನ್ಫರೆನ್ಸ್‌ನಲ್ಲಿದ್ದವರಿಗೆ ಏನಾಗುತ್ತಿದೆ ಎಂಬ ಅರಿವೇ ಇಲ್ಲದೆ ತಮ್ಮ ಸಂಪೂರ್ಣ ಮಾಹಿತಿಯನ್ನು ಬಿಟ್ಟುಕೊಡಬೇಕಾಗುತ್ತದೆ. ಅಮೆರಿಕದ್ದೇ ಒಂದು ಉದಾಹರಣೆ ಕೊಡುವುದಾದರೆ, ಮ್ಯಾಸಚ್ಚೂಸೆಟ್ಸ್‌ನಲ್ಲಿನ ಶಾಲೆಯೊಂದರಲ್ಲಿ ಆನ್‌ಲೈನ್ ತರಗತಿ ಮಾಡುತ್ತಿದ್ದಾಗ ಹ್ಯಾಕ್ ಆಗಿ ಗೊಂದಲ ನಿರ್ಮಾಣವಾಗಿತ್ತು. ಉಳಿದ ಕಡೆಗೂ ಇದೇ ರೀತಿ ದೂರುಗಳು ಕೇಳಿಬಂದಿವೆ.
ಇದನ್ನೂ ಓದಿ | ಯಾವ ಅಂಗಡಿ ತೆರೆದಿದೆ? ವೆಬ್‌ಸೈಟ್ ನೋಡಿ...
ಹಾಗಾದರೆ ನೀವು ಏನು ಮಾಡಬೇಕು?
- ಸಾರ್ವಜನಿಕವಾಗಿ (ಪಬ್ಲಿಕ್) ಮೀಟಿಂಗ್ ಇಲ್ಲವೇ ಆನ್‌ಲೈನ್ ತರಗತಿಯನ್ನು ಮಾಡಬಾರದು.
- ಇಲ್ಲಿ ಜೂಮ್ 2 ಆಯ್ಕೆಯನ್ನು ಕೊಟ್ಟಿದೆ. ಮೊದಲನೆಯದಾಗಿ ಪಾಸ್ವರ್ಡ್ ಕೊಟ್ಟುಕೊಳ್ಳುವುದು, ಎರಡನೆಯದಾಗಿ ಯಾವುದೇ ಅನಾಮಿಕ ವ್ಯಕ್ತಿಗೆ ಜಾಯಿನ್ ಆಗಲು ಅವಕಾಶ ಕೊಡಬಾರದು.
- ವಿಡಿಯೋ ಮೀಟಿಂಗ್, ಕ್ಲಾಸ್ ರೂಂಗಳನ್ನು ನಡೆಸುವಾಗ ಸಂಬಂಧಪಟ್ಟ ವ್ಯಕ್ತಿಗಳ ಹೊರತುಪಡಿಸಿ ಸಂಬಂಧಪಡದವರಿಗೆ ಹೋಗದಂತೆ ನಿಗಾ ವಹಿಸುವುದು.
- ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ಅಡ್ಮಿನ್ ಮಾತ್ರ ನಿರ್ವಹಿಸಬೇಕು. ಸ್ಕ್ರೀನ್ ಶೇರಿಂಗ್ ಬದಲೀ ವ್ಯವಸ್ಥೆ ಮಾಡಿಕೊಳ್ಳುವುದಿದ್ದರೆ ಆಯೋಜಕರು ಮಾತ್ರ ನಿರ್ಧರಿಸಬೇಕು.
- ಜೂಮ್ ತನ್ನ ಆ್ಯಪ್ ವರ್ಷನ್‌ನಲ್ಲಿ ಈಚೆಗಷ್ಟೇ ರಿಮೋಟ್ ಕಂಟ್ರೋಲ್ ಹಾಗೂ ಮೀಟಿಂಗ್ ಅಪ್ಲಿಕೇಶನ್‌ಗಳ ಫೀಚರ್‌ಗಳನ್ನು ಪ್ರಸ್ತುತಿಪಡಿಸಿದ್ದು, ಬಳಸಿಕೊಳ್ಳಬೇಕು.
undefined
ಇದನ್ನೂ ಓದಿ | ಸುಳ್ಳು ಸುದ್ದಿಗೆ ಕಿವಿಗೊಡಬೇಡಿ, ಟ್ವಿಟರ್ ಮೂಲಕ ಪಡೆಯಿರಿ ಕೊರೋನಾ ವೈರಸ್ ಸ್ಪಷ್ಟ ಮಾಹಿತಿ!...
ಈ ನಿಟ್ಟಿನಲ್ಲಿ ಭಾರತೀಯ ಬಳಕೆದಾರರು ಜಾಗೃತರಾಗಿರಬೇಕಲ್ಲದೆ, ಇಂಥ ಸನ್ನಿವೇಶಗಳು ಎದುರಾದರೆ, ತಕ್ಷಣ ಸೈಬರ್ ಕ್ರೈಂ ವಿಭಾಗದ ಗಮನಕ್ಕೆ ತರುವುದು ಒಳಿತು. ಜತೆಗೆ ಹೀಗಾಗದಂತೆ ಮೇಲಿನ ಅಂಶಗಳನ್ನು ಅಳವಡಿಸಿಕೊಂಡು ಹ್ಯಾಕರ್ಸ್‌ನಿಂದ ದೂರವಿರಬೇಕು.