BSNL ಮುಚ್ಚುವ ಭೀತಿ: ಗ್ರಾಹಕ, ನೌಕರರಿಗೆ ಆತಂಕ

By Web Desk  |  First Published Feb 14, 2019, 8:04 AM IST

ಬಿಎಸ್ಸೆನ್ನೆಲ್‌ ಪುನರುತ್ಥಾನ, ಮುಚ್ಚುವ ಬಗ್ಗೆ ವರದಿ ಕೇಳಿದ ಕೇಂದ್ರ| ದೇಶದಲ್ಲೇ ಅತಿಹೆಚ್ಚು ನಷ್ಟ ಅನುಭವಿಸುತ್ತಿರುವ ಸರ್ಕಾರಿ ಕಂಪನಿ: 31,287 ಕೋಟಿ ನಷ್ಟ


ನವದೆಹಲಿ[ಫೆ.14]: ದೇಶದಲ್ಲೇ ಅತಿಹೆಚ್ಚು ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ ಬಿಎಸ್‌ಎನ್‌ಎಲ್‌ ಅನ್ನು ಲಾಭಕ್ಕೆ ತರುವ ಬಗ್ಗೆ ಹಾಗೂ ಮುಚ್ಚುವ ಬಗ್ಗೆ ಸಮಗ್ರ ವರದಿಯೊಂದನ್ನು ನೀಡುವಂತೆ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್‌ನ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಇದು ದೇಶದಲ್ಲಿರುವ ಲಕ್ಷಾಂತರ ಬಿಎಸ್‌ಎನ್‌ಎಲ್‌ ನೌಕರರಿಗೆ ಆತಂಕ ಮೂಡಿಸಿದೆ.

2017-18ನೇ ಸಾಲಿನವರೆಗೆ 31,287 ಕೋಟಿ ರು. ಸಂಚಿತ ನಷ್ಟವನ್ನು ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ದೂರಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಅವರು ಬಿಎಸ್‌ಎನ್‌ಎಲ್‌ನ ಪ್ರಮುಖರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಬಿಎಸ್‌ಎನ್‌ಎಲ್‌ ಚೇರ್ಮನ್‌ ಅನುಪಮ್‌ ಶ್ರೀವಾಸ್ತವ ಅವರು ಕಂಪನಿಯ ಆರ್ಥಿಕ ಆರೋಗ್ಯ, ಒಟ್ಟು ನಷ್ಟ, ರಿಲಯನ್ಸ್‌ ಜಿಯೋ ಬಂದ ಮೇಲೆ ಬಿಎಸ್‌ಎನ್‌ಎಲ್‌ಗಾದ ಸಮಸ್ಯೆ, ನೌಕರರಿಗೆ ಜಾರಿಗೊಳಿಸಬಹುದಾದ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಹಾಗೂ ಅವಧಿಗೆ ಮುಂಚಿನ ನಿವೃತ್ತಿ ಯೋಜನೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

Tap to resize

Latest Videos

undefined

ನಂತರ ಅರುಣಾ ಸುಂದರರಾಜನ್‌ ಅವರು ಬಿಎಸ್‌ಎನ್‌ಎಲ್‌ ಅನ್ನು ಪುನರುತ್ಥಾನಗೊಳಿಸುವ ಬಗ್ಗೆ, ಜೊತೆಗೆ ಕಂಪನಿಯನ್ನು ಮುಚ್ಚಿದರೆ ಏನಾಗುತ್ತದೆ ಎಂಬ ಬಗ್ಗೆ ಹಾಗೂ ಬಿಎಸ್‌ಎನ್‌ಎಲ್‌ನಿಂದ ಬಂಡವಾಳ ವಾಪಸ್‌ ಪಡೆಯುವ ಬಗ್ಗೆ ಸಮಗ್ರ ವರದಿಯೊಂದನ್ನು ನೀಡುವಂತೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.

‘ಸ್ಪರ್ಧೆಯ ಜೊತೆಗೆ ಬಿಎಸ್‌ಎನ್‌ಎಲ್‌ ಎದುರಿಸುತ್ತಿರುವ ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ವಯಸ್ಸಾದ ನೌಕರರು. ಅವರ ಸಂಖ್ಯೆಯನ್ನು ತಗ್ಗಿಸಲು ವಿಆರ್‌ಎಸ್‌ ಅಥವಾ ನಿವೃತ್ತಿಯ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವ ಬಗ್ಗೆ ಪರಿಶೀಲಿಸಬಹುದು. ನಿವೃತ್ತಿ ವಯಸ್ಸನ್ನು ತಗ್ಗಿಸಿದರೆ ವರ್ಷಕ್ಕೆ 3000 ಕೋಟಿ ರು. ಉಳಿಸಬಹುದು. 50-56 ವರ್ಷದ ನೌಕರರಿಗೆ ವಿಆರ್‌ಎಸ್‌ ನೀಡಿದರೆ 67,000 ನೌಕರರು ಅದಕ್ಕೆ ಅರ್ಹರಾಗುತ್ತಾರೆ. ಅವರಲ್ಲಿ ಅರ್ಧದಷ್ಟುಜನರು ವಿಆರ್‌ಎಸ್‌ ಪಡೆದರೂ 3000 ಕೋಟಿ ರು. ಸಂಬಳ ಉಳಿಸಬಹುದು. ಇನ್ನು ಬಿಎಸ್‌ಎನ್‌ಎಲ್‌ ಬಳಿ ದೇಶಾದ್ಯಂತ ಇರುವ ಭೂಮಿ ಹಾಗೂ ಕಟ್ಟಡಗಳನ್ನು ಮಾರಾಟ ಮಾಡಿದರೆ 15,000 ಕೋಟಿ ರು. ಸಂಗ್ರಹಿಸಬಹುದು’ ಎಂದು ಬಿಎಸ್‌ಎನ್‌ಎಲ್‌ ಚೇರ್ಮನ್‌ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.

click me!