ನಗರ ಪ್ರದೇಶಗಳಲ್ಲಿ ಮನುಷ್ಯ ಸಾರ್ವಜನಿಕವಾಗಿ ಮಾಡುವಷ್ಟು ಗಲೀಜು ಯಾವ ಪ್ರಾಣಿಗಳೂ ಮಾಡಲ್ಲ. ಇನ್ನೊಂದು ಕಡೆ ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯಗಳದ್ದೇ ಸಮಸ್ಯೆ.ಈ ನಡುವೆ, ಪ್ರಕೃತಿ ಕರೆಗೆ ಓಗೊಡಲು, ಶೌಚಾಲಯ ಹುಡುಕೋದನ್ನು ತಂತ್ರಜ್ಞಾನ ಬಳಸಿ ಸರಳೀಕರಿಸುವ ಪ್ರಯತ್ನ ನಡೆದಿದೆ.
ಯಾವುದೋ ಕೆಲಸ ನಿಮಿತ್ತ ಎಲ್ಲೋ ಹೊರಟ್ಟಿದ್ದೀರಿ ಎಂದು ಭಾವಿಸಿಕೊಳ್ಳಿ. ದಾರಿ ಮಧ್ಯೆ ಪ್ರಕೃತಿ ಕರೆಗೆ ಓಗೊಡುವ ಅನಿವಾರ್ಯತೆ ಸೃಷ್ಟಿಯಾದ್ರೆ ಏನ್ಮಾಡೋದು? ಈ ಸಿಟಿಗಳಲ್ಲಿ, ತಲೆ ಚಿಟ್ಟುಹಿಡಿಯುವ ಟ್ರಾಫಿಕ್‌ನಲ್ಲಿ ಶೌಚಾಲಯ ಹುಡಕೋದು ಸುಲಭನಾ?
ನೀವು ‘ಸುಲಭ ಅಲ್ಲ’ ಎಂದು ಭಾವಿಸಿಕೊಂಡಿದ್ದರೆ ತಪ್ಪು! ಹೌದು, ಇನ್ಮುಂದೆ ಇದು ಸುಲಭ ಕೆಲಸ. ಯಾಕಂತೀರಾ?
ಡಿಜಿಟಲ್ ಲೋಕದ ಗುರು ಇದ್ದಾನಲ್ಲ? ಹೌದೌದು, ನಿಮ್ಮ ಯೋಚನೆ ಕರೆಕ್ಟ್...ಅದೇ ಗೂಗಲ್! ಗೂಗಲ್ ತನ್ನ ಮ್ಯಾಪ್‌ನಲ್ಲಿ ಶೌಚಾಲಯಗಳ ಲೋಕೇಶನ್‌ಗಳನ್ನು ಗುರುತಿಸಿದೆ. ಕೇಂದ್ರ ಸರ್ಕಾರದ ‘ಲೂ ರಿವೀವ್’ ಅಭಿಯಾನದನ್ವಯ ಸುಮಾರು 45 ಸಾವಿರ ಶೌಚಾಲಯಗಳ ಲೊಕೇಶನನ್ನು ಗೂಗಲ್ ಸಿದ್ಧಪಡಿಸಿದೆ. ಆದರೆ ಗ್ರಾಮೀಣ ಭಾಗದ ಅಂಕಿ-ಅಂಶಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ.
ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಸ್ಥಳೀಯ ಶೌಚಾಲಯಗಳನ್ನು ರೇಟ್ & ರಿವ್ಯೂ ಮಾಡುವ ಅಭಿಯಾನಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಇಲಾಖೆಯು ಚಾಲನೆ ನೀಡಿತ್ತು.
ಈ ಬಗ್ಗೆ ಕಳೆದ ಬಜೆಟ್ ಭಾಷಣದಲ್ಲೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಕೂಡಾ ಉಲ್ಲೇಖಿಸಿದ್ದರು. ದೇಶದ ಸುಮಾರು 1700 ನಗರ ಪ್ರದೇಶಗಳಲ್ಲಿ 45,000ಕ್ಕಿಂತಲೂ ಹೆಚ್ಚು ಶೌಚಾಲಯಗಳನ್ನು ಗುರುತಿಸಲಾಗಿದೆ.
ಗೂಗಲ್ ಮ್ಯಾಪ್, ಗೂಗಲ್ ಸರ್ಚ್ ಮತ್ತು ಗೂಗಲ್ ಅಸಿಸ್ಟೆಂಟ್ ಮೂಲಕ ಯಾರೇ ಬೇಕಾದರೂ ತಮ್ಮ ಸುತ್ತಮುತ್ತಲಿರುವ ಶೌಚಾಲಯಗಳನ್ನು ಹುಡುಕಬಹುದು.