ಉದ್ಯಮಿಗಳು, ಸರ್ಕಾರ ಮತ್ತು ಹಣಕಾಸು ನಿಯಂತ್ರಕರೊಂದಿಗೆ ಸಮಾಲೋಚಿಸಿದ ನಂತರ ಕ್ರಿಪ್ಟೋಕರೆನ್ಸಿಗಳ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ
ಮುಂಬೈ (ಫೆ. 24) : ಕ್ರಿಪ್ಟೋ ಕರೆನ್ಸಿ ಮತ್ತು ನಾನ್ ಫಂಜಿಬಲ್ ಟೋಕಲ್ (NFT) ಜಾಹೀರಾತುಗಳ ಮೇಲೆ ‘ಇದು ಅನಿಯಂತ್ರಿತ ಮತ್ತು ಅಪಾಯಕಾರಿ ಹೂಡಿಕೆ’ ಎಂದು ವಿಶೇಷ ಸೂಚನೆ ನೀಡುವುದು ಕಡ್ಡಾಯ ಎಂದು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (Advertising Standards Council of India) ಸೂಚಿಸಿದೆ. ಅಲ್ಲದೆ, ಅಂತಹ ವಹಿವಾಟುಗಳಿಂದ ಉಂಟಾಗುವ ಯಾವುದೇ ನಷ್ಟಕ್ಕೆ ಯಾರೂ ಜವಾಬ್ದಾರರಲ್ಲ ಎಂದು ಜಾಹೀರಾತುಗಳಲ್ಲಿ ನಮೂದಿಸಬೇಕು ಎಂದು ತಿಳಿಸಿದೆ.
‘ವರ್ಚುವಲ್, ಡಿಜಿಟಲ್ ಕರೆನ್ಸಿಗಳ ಜಾಹೀರಾತಿಗೆ ನಿರ್ದಿಷ್ಟಮಾರ್ಗಸೂಚಿಯ ಅಗತ್ಯವಿದೆ. ಇದು ಹೊಸ ಮತ್ತು ಉದಯೋನ್ಮುಖ ಹೂಡಿಕೆಯ ಮಾರ್ಗ. ಆದ್ದರಿಂದ ಗ್ರಾಹಕರಿಗೆ ಅದರ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಮತ್ತು ಎಚ್ಚರಿಕೆಯಿಂದ ವ್ಯವರಿಸುವ ಬಗ್ಗೆ ತಿಳಿಸುವ ಅವಶ್ಯಕತೆಯಿದೆ’ ಎಂದು ಜಾಹೀರಾತು ಮಂಡಳಿ ಅಧ್ಯಕ್ಷ ಸುಭಾಷ್ ಕಾಮತ್ (Subhash Kamath) ಹೇಳಿದರು.
ಉದ್ಯಮಿಗಳು, ಸರ್ಕಾರ ಮತ್ತು ಹಣಕಾಸು ನಿಯಂತ್ರಕರೊಂದಿಗೆ ಸಮಾಲೋಚಿಸಿದ ನಂತರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಕ್ರಿಪ್ಟೋ ಕರೆನ್ಸಿಗಳ ಮೇಲೆ ಸರ್ಕಾರ ಇನ್ನೂ ಯಾವುದೇ ಕಾನೂನು ಜಾರಿ ಮಾಡಿಲ್ಲ. ಆದರೆ ಆದರೆ ಅಂಥ ವಹಿವಾಟುಗಳಿಂದ ಮಾಡಿದ ಲಾಭದ ಮೇಲೆ ತೆರಿಗೆ ವಿಧಿಸುವುದಾಗಿ ಹೇಳಿದೆ. ಆದರೆ ಆರ್‌ಬಿಐ ಕ್ರಿಪ್ಟೋ ಕರೆನ್ಸಿಗಳ ಸಂಪೂರ್ಣ ನಿಷೇಧಕ್ಕೆ ಒಲುವು ತೋರುತ್ತಿದೆ.
ವಿಶೇಷ ಸೂಚನೆ ಕಡ್ಡಾಯ: "ಕ್ರಿಪ್ಟೋ ಉತ್ಪನ್ನಗಳು ಮತ್ತು ಎನ್‌ಎಫ್‌ಟಿಗಳು ಅನಿಯಂತ್ರಿತವಾಗಿವೆ ಮತ್ತು ಹೆಚ್ಚು ಅಪಾಯಕಾರಿಯಾಗಬಹುದು. ಅಂತಹ ವಹಿವಾಟುಗಳಿಂದ ಯಾವುದೇ ನಷ್ಟಕ್ಕೆ ಯಾವುದೇ ನಿಯಂತ್ರಕ ಅವಲಂಬನೆ ಇಲ್ಲದಿರಬಹುದು" - ಎಂದು ವಿಶೇಷ ಸೂಚನೆ ನೀಡುವುದು ಕಡ್ಡಾಯ ಎಂದು ಮಾರ್ಗಸೂಚಿ ತಿಳಿಸಿದೆ.
ಮುದ್ರಣ ಅಥವಾ ಸ್ಥಿರ ಜಾಹೀರಾತಿನಲ್ಲಿನ ಜಾಹೀರಾತಿನ ಐದನೇ ಒಂದು ಭಾಗವನ್ನು ಎಚ್ಚರಿಕೆ ಸಂದೇಶಕ್ಕಾಗಿ ಮೀಸಲಿಡಬೇಕು, ಆದರೆ ವೀಡಿಯೊದಲ್ಲಿ, ಪಠ್ಯವನ್ನು ಸರಾಸರಿ ವೇಗದಲ್ಲಿ ಓದುವ ಧ್ವನಿಯೊಂದಿಗೆ ಸರಳ ಹಿನ್ನೆಲೆಯಲ್ಲಿ ಕೊನೆಯಲ್ಲಿ ಇರಿಸಬೇಕು ಎಂದು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ಹೇಳಿದೆ. .
ಇಂಥಹ ಡಿಜಿಟಲ್ ಆಸ್ತಿಗಳ ಬಗ್ಗೆ ಸರ್ಕಾರವು ಇನ್ನೂ ಕಾನೂನನ್ನು ಹೊರತಂದಿಲ್ಲ. ಇನ್ನೂ, ಇಂಥಹ ವಹಿವಾಟುಗಳಿಂದ ಗಳಿಸುವ ಲಾಭದ ಮೇಲೆ ಸರ್ಕಾರ ತೆರಿಗೆಯನ್ನು ಪ್ರಸ್ತಾಪಿಸಿದೆ, ಕ್ರಿಪ್ಟೋ ಬಳಕೆದಾರರು ಉದ್ಯಮವನ್ನು ಕಾನೂನುಬದ್ಧಗೊಳಿಸುವ ಈ ಕ್ರಮವನ್ನು ಸ್ವಾಗತಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂಥಹ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ವಿಷಯದಲ್ಲಿ ದೃಢವಾಗಿದೆ. ಕ್ರಿಪ್ಟೋ ಹಣಕಾಸಿನ ಸ್ಥಿರತೆ ಮತ್ತು ವಿನಿಮಯ ನಿರ್ವಹಣೆಯ, ಮೇಲ್ವಿಚಾರಣೆ ಮತ್ತು ನಿಯಂತ್ರಿಣಕ್ಕೆ ಸವಾಲನ್ನು ಒಡ್ಡುತ್ತದೆ ಎಂದುಆರ್‌ಬಿಐ ಹೇಳಿದೆ.
ಕ್ರಿಪ್ಟೋಕರೆನ್ಸಿ ಭಾರತದ ಆರ್ಥಿಕ ಸ್ಥಿರತೆಗೆ ಅಪಾಯಕಾರಿ: ಕ್ರಿಪ್ಟೋಕರೆನ್ಸಿಗಳ ಕುರಿತು ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿರುವ ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ), ಇವು ಬೃಹತ್ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆ ಎರಡಕ್ಕೂ ಅಪಾಯಕಾರಿ ಎಂದು ಹೇಳಿದೆ. ಈ ಮೂಲಕ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ನೀಡುವ ಯಾವುದೇ ಸಾಧ್ಯತೆ ಇಲ್ಲವೇ ಇಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದೆ.
ದ್ವೈಮಾಸಿಕ ಹಣಕಾಸು ನೀತಿ ಮಂಡನೆ ವೇಳೆ ಈ ಕುರಿತು ಎಚ್ಚರಿಕೆ ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ‘ಖಾಸಗಿ ಕ್ರಿಪ್ಟೋಕರೆನ್ಸಿ ಅಥವಾ ಇನ್ಯಾವುದೇ ಹೆಸರುಗಳಿಂದ ನೀವು ಅದನ್ನು ಕರೆಯಿರಿ, ಅವುಗಳು ಬೃಹತ್ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆ ಎರಡಕ್ಕೂ ಅಪಾಯಕಾರಿ. ಜೊತೆಗೆ ಅವು ಬೃಹತ್ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆ ನಿರ್ವಹಿಸುವ ಆರ್‌ಬಿಐನ ಸಾಮರ್ಥ್ಯವನ್ನು ಕುಂದಿಸುತ್ತವೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಆಧಾರ ಇಲ್ಲ. ಅವುಗಳಿಗೆ ಎಳ್ಳಷ್ಟೂಮೌಲ್ಯ ಇಲ್ಲ ಎಂಬುದನ್ನು ಹೂಡಿಕೆದಾರರು ತಿಳಿಯಬೇಕು. ಜೊತೆಗೆ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿರುವವರು ಅಪಾಯ ಅರಿತು (ಓನ್ ರಿಸ್ಕ್) ಈ ರೀತಿ ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಎಚ್ಚರಿಸಿದ್ದಾರೆ. ಈ ವಿಷಯದಲ್ಲಿ ಹೂಡಿಕೆದಾರರನ್ನು ಎಚ್ಚರಿಸುವುದು ಆರ್‌ಬಿಐನ ಕರ್ತವ್ಯ. ಅದರಂತೆ ನಾವು ಹೂಡಿಕೆದಾರರಿಗೆ ಈ ಮೂಲಕ ಅರಿವು ಮೂಡಿಸುತ್ತಿದ್ದೇವೆ ಎಂದು ದಾಸ್ ಹೇಳಿದ್ದಾರೆ.