*ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ
*ಭಾರೀ ವಿವಾದ ಸೃಷ್ಟಿಸಿದ್ದ ಕಂಪನಿ ಸಿಇಓ ನಡೆ
*ವಿವಾದದ ನಂತರ ಕ್ಷಮೆ ಕೇಳಿದ್ದ ಗರ್ಗ್ !
*ಜವಾಬ್ದಾರಿಗಳಿಂದ ವಿಶಾಲ್‌ಗೆ ಕೊಂಚ ರಿಲೀಫ್
ನವದೆಹಲಿ(ಡಿ. 11): ಕಳೆದ ವಾರ ಬೆಟರ್ ಡಾಟ್ ಕಾಮ್ (Better.com) ಕಂಪನಿ ಸಿಇಓ ವಿಶಾಲ್ ಗರ್ಗ್ (Vishal Garg) ಝೂಮ್ ಮೀಟಿಂಗ್‌ನಲ್ಲಿ 900 ಸಿಬ್ಬಂದಿಗಳನ್ನು ವಜಾಗೊಳಿಸಿದ್ದರು. ಝೂಮ್ ಮೀಟಿಂಗ್ ಆರಂಭವಾಗುತ್ತಿದ್ದಂತೆಯೇ ಸಿಇಓ ಸಿಬ್ಬಂದಿಗಳಿಗೆ ಶಾಕ್ ನೀಡಿದ್ದರು. ಇದು ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಪರ ವಿರೊಧದ ಚರ್ಚೆಗಳು ನಡೆದಿದ್ದವು. ಈ ಬೆಳವಣಿಗೆ ನಂತರ ಬೆಟರ್ ಡಾಟ್ ಕಾಮ್ ಸಿಇಓ ವಿಶಾಲ್ ಗಾರ್ಗ್ ಕ್ಷಮೆ ಕೂಡ ಕೇಳಿದ್ದರು.
ಆದರೆ ಸಿಬ್ಬಂದಿಗಳನ್ನು ವಜಾಗೊಳಿಸಿದ್ದ ಸಿಇಓ ವಿಶಾಲ್ ಗರ್ಗ್ ಸ್ವತಃ ಕೆಲ ಸಮಯ ತಮ್ಮ ಜವಾಬ್ದಾರಿಯಿಂದ ದೂರ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ವರದಿ ಮಾಡಿರುವ ವೈಸ್ (Vice ) ಸುದ್ದಿ ಸಂಸ್ಥೆ, ಬೆಟರ್ ಕಂಪನಿಯ ನಿರ್ದೇಶಕರ ಮಂಡಳಿ (Board of Directors) ಬರೆದಿರುವ ಇಮೇಲ್ ಉಲ್ಲೇಖಿಸಿದೆ. ಇನ್ನುಮುಂದೆ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಕೆವಿನ್ ರಯಾನ್ (Kevin Ryan) ಕಂಪನಿಯ ದೈನಂದಿನ ನಿರ್ಧಾರಗಳನ್ನು ನಿರ್ವಹಿಸುತ್ತಾರೆ ಮತ್ತು ಮಂಡಳಿಗೆ ವರದಿ ಮಾಡುತ್ತಾರೆ ಎಂದು ಇಮೇಲ್ (e-mail) ಅನ್ನು ಉಲ್ಲೇಖಿಸಿ ವೈಸ್ ವರದಿ ಮಾಡಿದೆ. ಈ ನಿರ್ಧಾರದ ಹಿಂದಿನ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
undefined
ಮೌಲ್ಯಮಾಪನ ಜವಬ್ದಾರಿ ನಿಭಾಯಿಸಲು ಸ್ವತಂತ್ರ ಸಂಸ್ಥೆ!
Better.com ನ ಮಂಡಳಿಯು, ನಾಯಕತ್ವ ಹಾಗೂ ಸಂಸ್ಥೆಯ ಮೌಲ್ಯಮಾಪನ ಜವಬ್ದಾರಿ ನಿಭಾಯಿಸಲು ಸ್ವತಂತ್ರ (3rd Party) ಸಂಸ್ಥೆಯೊಂದನ್ನು ಸಹ ನೇಮಿಸಿದೆ ಎಂದು ವರದಿ ತಿಳಿಸಿದೆ. "ಸ್ವತಂತ್ರ ಸಂಸ್ಥೆ ನಡೆಸುವ ಮೌಲ್ಯಮಾಪನದ ಶಿಫಾರಸುಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಿ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ. ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ ಹಾಗಾಗಿ ಕಂಪನಿಯ ಪ್ರತಿಯೊಬ್ಬರೂ ನಮ್ಮ ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರೆಸಲಿದ್ದಾರೆ. ಜತೆಗೆ ಈ ಕಂಪನಿಯ ಪ್ರತಿಯೊಬ್ಬರ ಪರಸ್ಪರ ಬೆಂಬಲಿದೊಂದಿಗೆ ಶ್ರೇಷ್ಠ ಸಂಸ್ಥೆಯೊಂದನ್ನು ಸ್ಥಾಪಿಸಬಹುದು ಎಂದು ನಾವು ಭಾವಿಸುತ್ತೇವೆ" ಎಂದು ಪತ್ರದಲ್ಲಿ ಹೇಳಲಾಗಿದೆ. ಆದರೆ ಈ ಬಗ್ಗೆ ಬೆಟರ್ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಉದ್ಯೋಗಿಗಳು ದಿನದಲ್ಲಿ ಗರಿಷ್ಠ 2 ಗಂಟೆ ಕೆಲಸ ಮಾಡಿಲ್ಲ!
ಸಿಬ್ಬಂದಿಗಳನ್ನು ವಜಾಗೊಳಿಸಲು ಕಾರಣ ನೀಡಿದ್ದ ವಿಶಾಲ್ "ಈ ಉದ್ಯೋಗಿಗಳು ದಿನದಲ್ಲಿ ಗರಿಷ್ಠ 2 ಗಂಟೆ ಕೆಲಸ ಮಾಡಿಲ್ಲ. ಸಮರ್ಥವಾಗಿ ಕೆಲಸ ನಿರ್ವಹಿಸಲು ಅಸಾಧ್ಯರಾಗಿದ್ದಾರೆ. ಕಂಪನಿಯ ವೇತನ, ಇತರ ಸೌಲಭ್ಯ ಪಡೆದು ಕಂಪನಿಗೆ ಒಂದು ರೂಪಾಯಿ ಆದಾಯವನ್ನು ತಂದುಕೊಟ್ಟಿಲ್ಲ. ಹೀಗಾಗಿ ಕಂಪನಿ ಅಸಮರ್ಥ ಸಿಬ್ಬಂದಿಗಳನ್ನು ವಜಾಗೊಳಿಸುತ್ತಿದೆ" ಎಂದಿದ್ದರು.
Better.com ವಜಾಗೊಳಿಸಿದ್ದ 900 ಸಿಬ್ಬಂದಿಗೆ ಉದ್ಯೋಗ ಮೇಳ : ಮೈಕ್ರೋಸಾಫ್ಟ, ರಾಬಿನ್‌ಹುಡ್ ಭಾಗಿ!
ಝೂಮ್ ಮೀಟಿಂಗ್ ಮೂಲಕ 900 ಜನರನ್ನು ವಜಾಗೊಳಿಸಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಗಾರ್ಗ್ ಈ ವಾರದ ಆರಂಭದಲ್ಲಿ ಸಿಬ್ಬಂದಿಗಳನ್ನು ವಜಾ ಮಾಡಿದ್ದ ರೀತಿಗೆ ಕ್ಷಮೆಯಾಚಿಸಿದ್ದರು. "ವಜಾಗೊಳಿಸುವಿಕೆಯನ್ನು ತಿಳಿಸುವಲ್ಲಿ ನಾವು ಎಡವಿದ್ದು ಇದನ್ನು ಕಾರ್ಯಗತಗೊಳಿಸುವಲ್ಲಿ ಪ್ರಮಾದವಾಗಿದೆ" ಎಂದು ಅವರು ಹೇಳುವ ಮೂಲಕ ಸಿಇಓ ಗರ್ಗ್ ಕ್ಷಮೆಯಾಚಿಸಿದ್ದರು. "ನಾನು ಈ ಸುದ್ದಿಯನ್ನು ತಿಳಿಸಲು ಬಳಸಿದ ವಿಧಾನವು ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತ್ತು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ಗಾರ್ಗ್ ಮಂಗಳವಾರ (ಡಿ. 7) ಪತ್ರದ ಮೂಲಕ ತಿಳಿಸಿದ್ದರು.
2016 ರಲ್ಲಿ ಸ್ಥಾಪನೆಯಾಗಿದ್ದ ಬೆಟರ್ ನ್ಯೂಯಾರ್ಕ್‌ನಲ್ಲಿ (New York) ಪ್ರಧಾನ ಕಚೇರಿಯನ್ನು ಹೊಂದಿದೆ. ಬೆಟರ್ ಡಾಟ್ ಕಾಮ್ ತನ್ನ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಮನೆಮಾಲೀಕರಿಗೆ ಅಡಮಾನ ಮತ್ತು ವಿಮಾ ಸೇವೆಗಳನ್ನು ನೀಡುತ್ತದೆ