ಒಂದು ಚಿಕ್ಕ ತಪ್ಪು, ಅಮೆಜಾನ್‌ಗೆ ಕುತ್ತು| 9 ಲಕ್ಷದ ಕ್ಯಾಮೆರಾ ಗೇರ್ ಕೇವಲ 6,500ರೂ. ಸೇಲ್| ಆಫರ್ ಕಂಡ ಗ್ರಾಹಕರಿಗೆ ಖುಷಿಯೋ ಖುಷಿ
ನವದೆಹಲಿ[ಜು.23]: ಇ ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನ ಪ್ರೈಮ್ ಡೇ ಸೇಲ್‌ಗಾಗಿ ಹಲವಾರು ಗ್ರಾಹಕರು ಕಾತುರದಿಂದ ಕಾಯುತ್ತಿರುತ್ತಾರೆ. ಇಲ್ಲಿ ಜನರಿಗೆ ಬೆಲೆಬಾಳುವ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಈ ವರ್ಷದ ಪ್ರೈಮ್ ಡೇ ಸೇಲ್ ಜುಲೈ 15 ಹಾಗೂ 16 ಎರಡು ದಿನ ನಡೆದಿತ್ತು. ಈ ಸೇಲ್ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ನಡೆದಿತ್ತು. ಆದರೆ ಈ ಸಂದರ್ಭದಲ್ಲಿ ಅಮೆಜಾನ್ ತಾನು ಮಾಡಿದ ಸಣ್ಣ ಯಡವಟ್ಟಿನಿಂದ ಕೈ ಸುಟ್ಟುಕೊಳ್ಳುವಂತಾಗಿದೆ. ಆದರೆ ಈ ಸಣ್ಣ ತಪ್ಪು ಗ್ರಾಹಕರಿಗೆ ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದೆ.
ಅಮೆಜಾನ್ ತನ್ನ ವೆಬ್‌ಸೈಟಿನಲ್ಲಿ ಬರೋಬ್ಬರಿ 9 ಲಕ್ಷ ಮೌಲ್ಯದ ಕ್ಯಾಮೆರಾ ಗೇರ್ ಬೆಲೆಯನ್ನು ಕಣ್ತಪ್ಪಿನಿಂದ ಕೇವಲ 6500 ರೂ. ಎಂದು ನಿಗದಿಪಡಿಸಿದೆ. ಈ ತಪ್ಪು ಕಂಪೆನಿಯ ಗಮನಕ್ಕೆ ಬಂದ ಕೂಡಲೇ ಸರಿಪಡಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಹಲವಾರು ಗ್ರಾಹಕರು ಆನ್‌ಲೈನ್ ಮೂಲಕ ಹಣ ಪಾವತಿಸಿ ಕ್ಯಾಮರಾ ಖರೀದಿಸಿದ್ದಾರೆ. ಅಲ್ಲದೇ 9 ಲಕ್ಷ ಮೌಲ್ಯದ ಕ್ಯಾಮೆರಾಗೆ ಇಷ್ಟು ಕಡಿಮೆ ಬೆಲೆ ನಿಗದಿಪಡಿಸಿದ್ದಕ್ಕೆ ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಗೆ ಥ್ಯಾಂಕ್ಸ್ ಎಂದಿದ್ದಾರೆ. ಆದರೀಗ ಗ್ರಾಹಕರು ಆರ್ಡರ್ ಮಾಡಿರುವ ಈ ಕ್ಯಾಮರಾವನ್ನು ಅಮೆಜಾನ್ ಡೆಲಿವರಿ ಮಾಡುತ್ತಾ? ಅಥವಾ ಹಣ ಹಿಂತಿರುಗಿಸಿ ಸುಮ್ಮನಾಗುತ್ತಾ ಎಂಬುವುದೇ ಕುತೂಹಲ ಮೂಡಿಸಿದೆ.
ಕೆನನ್ 800mm f/5.6L IS ಲೆನ್ಸ್‌ಗೆ ಮಾರುಕಟ್ಟೆಯಲ್ಲಿ ಬರೋಬ್ಬರಿ 9 ಲಕ್ಷ ರೂಪಾಯಿ ಮೌಲ್ಯವಿದೆ. ಆದರೆ ಇದು ಅಮೆಜಾನ್‌ನಲ್ಲಿ ಕೇವಲ 6500ರೂ. ಮಾರಾಟಕ್ಕಿಟ್ಟಿರುವುದನ್ನು ಗಮನಿಸಿದ ಗ್ರಾಹಕರು ಕೂಡಲೇ ಖರೀದಿಸಿದ್ದಾರೆ. ಈ ಕುರಿತಾಗಿ ರೆಡ್‌ಇಟ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಗ್ರಾಹಕನೊಬ್ಬ 'ನಾನು ಕಳೆದ ರಾತ್ರಿ ಪ್ರೈಮ್ ಡೇ ಸೇಲ್‌ನಲ್ಲಿ 3 ಸಾವಿರ ಡಾಲರ್ ಮೌಲ್ಯದ ಕ್ಯಾಮೆರಾವನ್ನು ಕೇವಲ 94 ಡಾಲರ್‌ಗೆ ಖರೀದಿಸಿದೆ. ಇವರು ಅದನ್ನು ಡೆಲಿವರಿ ಮಾಡುತ್ತಾರೆಂದು ನಿಮಗನಿಸುತ್ತಾ? ಯಾಕೆಂದರೆ ಇದು ಕಣ್ತಪ್ಪಿನಿಂದಾದ ಯಡವಟ್ಟು' ಎಂದಿದ್ದಾರೆ.
ಕೆನನ್‌ನ ಈ ಕ್ಯಾಮೆರಾ ಗೇರ್ ಕೇವಲ ವೃತ್ತಿಪರ ಫೋಟೋಗ್ರಾಫರ್ಸ್ ಮಾತ್ರ ಬಳಸುತ್ತಾರೆ. ಹೀಗಾಗಿ ಇದಕ್ಕಾಗಿ ಹುಡುಕಾಟ ನಡೆಸುವವರು ಬಹಳ ವಿರಳ.