ಎಐ ವೇಗಕ್ಕಿಂತ ಅದರ ನಿಯಂತ್ರಣದ ಬಗ್ಗೆ ನಮಗೆ ಹೆಚ್ಚು ಕಾಳಜಿ ಬೇಕು: ರಾಜೀವ್ ಚಂದ್ರಶೇಖರ್

Published : Sep 18, 2026, 11:51 PM IST
Rajeev Chandrasekhar

ಸಾರಾಂಶ

ಆಂಥ್ರೋಪಿಕ್ ಬಿಡುಗಡೆ ಮಾಡಿರುವ ಹೊಸ ವರದಿ ಎಐ ದುರ್ಬಳಕೆಯ ಆತಂಕಕಾರಿ ಮುಖವನ್ನು ತೆರೆದಿಟ್ಟಿದೆ. ಈ ಹಿನ್ನೆಲೆಯಲ್ಲಿ ಎಐ ನಿಯಂತ್ರಣ ಎಷ್ಟು ಮುಖ್ಯ ಅನ್ನೋದರ ಬಗ್ಗೆ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ವಿವರಿಸಿದ್ದಾರೆ.

ಕಳೆದ ಒಂಬತ್ತು ತಿಂಗಳಲ್ಲಿ ಎಐ (AI) ಹೇಗೆಲ್ಲಾ ದುರ್ಬಳಕೆಯಾಗಿದೆ ಅನ್ನೋದರ ಬಗ್ಗೆ ಆಂಥ್ರೋಪಿಕ್ (Anthropic) ಒಂದು ರಿಪೋರ್ಟ್ ಬಿಡುಗಡೆ ಮಾಡಿದೆ. ಆಂಥ್ರೋಪಿಕ್ ಸಂಸ್ಥೆ 2025ರ ಡಿಸೆಂಬರ್‌ನಿಂದ 2026ರ ಆಗಸ್ಟ್‌ವರೆಗಿನ 9 ತಿಂಗಳ ಅವಧಿಯ 154 ಪುಟಗಳ ಈ ವರದಿಯನ್ನು ಸೆಪ್ಟೆಂಬರ್ 10ರಂದು ರಿಲೀಸ್ ಮಾಡಿದೆ. ಇದರ ಬೆನ್ನಲ್ಲೇ, ಎಐ ಅಭಿವೃದ್ಧಿಯ ವೇಗವನ್ನು ಸ್ವಲ್ಪ ತಗ್ಗಿಸಬೇಕು ಅಂತ ಆಂಥ್ರೋಪಿಕ್ ಸಿಇಒ ಡಾರಿಯೋ ಅಮೊಡೆ (Dario Amodei) ಕರೆ ನೀಡಿದ್ದಾರೆ. ಕೇವಲ ಕೆಲವೇ ಗಂಟೆಗಳಲ್ಲಿ ಸ್ಯಾಮ್ ಆಲ್ಟ್‌ಮನ್ ಮತ್ತು ಎಲಾನ್ ಮಸ್ಕ್ ಕೂಡ ಈ ಮಾತಿಗೆ ದನಿಗೂಡಿಸಿದ್ದಾರೆ.

ಇದೆಲ್ಲವನ್ನೂ ಗಮನಿಸಿದರೆ, ಎಐ ನಿಯಂತ್ರಣ (AI Governance) ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು ಅನ್ನೋದು ಸ್ಪಷ್ಟವಾಗುತ್ತದೆ. ಸರ್ಕಾರಿ ಪ್ರಾಯೋಜಿತ ಕಾರ್ಯಾಚರಣೆಗಳು ಹಾಗೂ ವ್ಯಕ್ತಿಗಳು ಸ್ವಂತವಾಗಿ ಮಾಡುವ 7 ರೀತಿಯ ಹಾನಿಕಾರಕ ಚಟುವಟಿಕೆಗಳ ಬಗ್ಗೆ ಆಂಥ್ರೋಪಿಕ್ ವರದಿ ಬೆಳಕು ಚೆಲ್ಲಿದೆ. ಎಐ ಅಂದರೆ ಕೇವಲ ತಪ್ಪು ಮಾಹಿತಿ ಸೃಷ್ಟಿಸುವ ಟೂಲ್ ಮಾತ್ರವಲ್ಲ. ಬೇರೆ ಸಾಫ್ಟ್‌ವೇರ್‌ಗಳ ಜೊತೆ ಸೇರಿ, ಒಂದೇ ಬಾರಿಗೆ ಹಲವು ಕೆಲಸಗಳನ್ನು ಮುಗಿಸುವ ಶಕ್ತಿ ಅದಕ್ಕಿದೆ. ಕಡಿಮೆ ಜನ ಹಾಗೂ ಕಡಿಮೆ ಪರಿಣತಿಯನ್ನು ಬಳಸಿಕೊಂಡು ಕಿಡಿಗೇಡಿಗಳು ದೊಡ್ಡ ಮಟ್ಟದ ದಾಳಿಗಳನ್ನು ಮಾಡಲು ಕೂಡ ಎಐ ಬಳಸುತ್ತಿದ್ದಾರೆ.

ಆಂಥ್ರೋಪಿಕ್ ಇದನ್ನು 'ಅಪ್‌ಲಿಫ್ಟ್' (Uplift) ಅಂತ ಕರೆಯುತ್ತದೆ. ಎಐ ವೇಗ ಹಾಗೂ ಅದರ ಪ್ರಭಾವ ಈಗ ತುಂಬಾನೇ ಹೆಚ್ಚಾಗಿದೆ. ಬಾಂಗ್ಲಾದೇಶದಲ್ಲಿ ಪತ್ತೆಯಾದ ಒಂದು ಫೇಕ್ ಪ್ರಚಾರದ ಕಾರ್ಯಾಚರಣೆ ಸಂಪೂರ್ಣವಾಗಿ ಆಟೋಮ್ಯಾಟಿಕ್ ಆಗಿತ್ತು. ಎಐ ಕಂಟೆಂಟ್ ರೆಡಿ ಮಾಡಿದರೆ, ಬೇರೆ ಸಾಫ್ಟ್‌ವೇರ್‌ಗಳು ಅದನ್ನು ವಿಡಿಯೋಗಳಾಗಿ ಬದಲಾಯಿಸಿದವು. ಜೊತೆಗೆ ಶೆಡ್ಯೂಲಿಂಗ್ ಅಲ್ಗಾರಿದಮ್‌ಗಳು ಅದನ್ನು ಸರಿಯಾದ ಸಮಯಕ್ಕೆ ಪಬ್ಲಿಷ್ ಮಾಡಿದವು. ಕೇವಲ ಒಬ್ಬ ವ್ಯಕ್ತಿ, 29 ಅಕೌಂಟ್‌ಗಳು ಹಾಗೂ 1500 ಫೇಕ್ ಸ್ಟೋರಿಗಳು! ಇದನ್ನೇ 'ಅಪ್‌ಲಿಫ್ಟ್' ಅನ್ನೋದು.

ಆಂಥ್ರೋಪಿಕ್ ಪತ್ತೆ ಮಾಡಿರೋದು ನಿಜವಾಗಿ ನಡೆದಿರುವ ಘಟನೆಗಳ ಒಂದು ಸಣ್ಣ ಭಾಗ ಮಾತ್ರ ಆಗಿರಬಹುದು. ತಮ್ಮ ಅತ್ಯುತ್ತಮ ಎಐ ಮಾಡೆಲ್‌ಗಳನ್ನು ಬಳಸಿ ಜೈವಿಕ ಶಸ್ತ್ರಾಸ್ತ್ರಗಳ (bioweapons) ಸಂಶೋಧನೆಗೆ ಸಹಾಯ ಸಿಗುವುದಿಲ್ಲ ಅಂತ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಸ್ವತಃ ಆಂಥ್ರೋಪಿಕ್ ಒಪ್ಪಿಕೊಂಡಿದೆ. ಇದು ಸಮಾಧಾನ ತರುವ ವಿಚಾರವಲ್ಲ, ಬದಲಾಗಿ ಎಐ ಬೆಳೆದ ವೇಗಕ್ಕೆ ತಕ್ಕಂತೆ ನಿಯಂತ್ರಣಗಳು ಬಂದಿಲ್ಲ ಅನ್ನೋದಕ್ಕೆ ಇದೊಂದು ಸಾಕ್ಷಿ. ಅಮೊಡೆ ನೀಡಿರುವ ಎಚ್ಚರಿಕೆ ಬಹಳ ಸ್ಪಷ್ಟವಾಗಿದೆ. ಎಐ ತುಂಬಾನೇ ವೇಗವಾಗಿ ಬೆಳೆಯುತ್ತಿದೆ. ಕೇವಲ 6 ರಿಂದ 12 ತಿಂಗಳೊಳಗೆ ಫೇಕ್ ಎಐ ಏಜೆಂಟ್‌ಗಳು ಇಡೀ ಇಂಟರ್ನೆಟ್ ಅನ್ನು ತಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳಬಹುದು.

ಜಗತ್ತಿನ ಅತ್ಯಂತ ಶಕ್ತಿಶಾಲಿ ಎಐ ಡೆವಲಪ್ ಮಾಡುತ್ತಿರುವ, ಕೋಟ್ಯಂತರ ಡಾಲರ್ ಸುರಿದು ಪೈಪೋಟಿ ನಡೆಸುತ್ತಿರುವ ಮೂವರು ದಿಗ್ಗಜರು ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಇದೇನೂ ಬರೀ ಪಿಆರ್ (PR) ಸ್ಟಂಟ್ ಅಲ್ಲ, ಇದೊಂದು ದೊಡ್ಡ ಅಪಾಯದ ಮುನ್ಸೂಚನೆ. ಎಐ ವಿಚಾರದಲ್ಲಿ ಸ್ವಯಂಪ್ರೇರಿತವಾಗಿ ವೇಗ ತಗ್ಗಿಸುವುದು ಸಾಧ್ಯನಾ ಅನ್ನೋ ಒಂದು ಸಿಂಪಲ್ ಪ್ರಶ್ನೆಯನ್ನು ನಾನು ಎಕ್ಸ್ (X) ನಲ್ಲಿ ಕೇಳಿದ್ದೆ. ಮಾರುಕಟ್ಟೆಯ ಪೈಪೋಟಿ, ಬಂಡವಾಳ ಹಾಗೂ ಚೀನಾ ಈ ರೇಸ್‌ನಿಂದ ಹೊರಗಿದೆ ಅನ್ನೋ ಕಾರಣಗಳಿಂದ, ಸ್ವಂತ ಇಷ್ಟದ ಮೇಲೆ ವೇಗ ಕಡಿಮೆ ಮಾಡಿಕೊಳ್ಳುವುದು ಪ್ರಾಕ್ಟಿಕಲ್ ಅಲ್ಲ.

ವೆಂಚರ್ ಕ್ಯಾಪಿಟಲಿಸ್ಟ್ ಚಮತ್ ಪಲಿಹಪಿಟಿಯ (Chamath Palihapitiya) ಹೇಳುವಂತೆ, ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಯೊಂದು ವೇಗ ತಗ್ಗಿಸಲು ಕೇಳಿಕೊಳ್ಳುತ್ತಿದೆ ಅಂದರೆ, ಅದು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತಂತ್ರ ಕೂಡ ಆಗಿರಬಹುದು. ಹಾಗಾಗಿ ಸ್ವಯಂಪ್ರೇರಿತವಾಗಿ ವೇಗ ಕಡಿಮೆ ಮಾಡುವ ಚರ್ಚೆಯೇ ತಪ್ಪು. ಅಭಿವೃದ್ಧಿಯನ್ನು ಹೇಗೆ ನಿಧಾನ ಮಾಡುವುದು ಅನ್ನೋದಕ್ಕಿಂತ, ನಿಯಂತ್ರಣವನ್ನು (Governance) ಹೇಗೆ ವೇಗಗೊಳಿಸುವುದು ಅನ್ನೋದು ಇಲ್ಲಿನ ಅಸಲಿ ಪ್ರಶ್ನೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವನಾಗಿ ಕೆಲಸ ಮಾಡುತ್ತಿದ್ದಾಗ, ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಹೊಣೆಗಾರಿಕೆ ಅನ್ನೋ ತತ್ವಗಳ ಆಧಾರದ ಮೇಲೆ ನಾವು ಪ್ಲಾಟ್‌ಫಾರ್ಮ್ ನಿಯಮಗಳನ್ನು ರೂಪಿಸಿದ್ದೆವು. 2021ರ ಐಟಿ ನಿಯಮಗಳು ಪ್ಲಾಟ್‌ಫಾರ್ಮ್‌ಗಳಿಗೆ ಕಾನೂನುಬದ್ಧ ಜವಾಬ್ದಾರಿಗಳನ್ನು ಫಿಕ್ಸ್ ಮಾಡಿದವು. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಆ ನಿಯಮಗಳನ್ನು ತಂದಿದ್ದೆವು. ಈಗ ಆಂಥ್ರೋಪಿಕ್ ವರದಿ ಕೂಡ ಅದನ್ನೇ ಸರಿ ಎನ್ನುತ್ತಿದೆ.

ಪ್ರಜಾಸತ್ತಾತ್ಮಕವಾದ ರಕ್ಷಣಾ ವ್ಯವಸ್ಥೆ ಬೇಕು

ಬಾಂಗ್ಲಾದೇಶದ ಘಟನೆ ಭಾರತಕ್ಕೂ ಅನ್ವಯಿಸುತ್ತದೆ. ಹಳ್ಳಿಗಳಲ್ಲಿರುವ ವೋಟರ್ಸ್ ಅನ್ನು ಸೆಳೆಯಲು ರಾಜಕೀಯ ಪಕ್ಷಗಳು ದೊಡ್ಡ ಮಟ್ಟದಲ್ಲಿ ಎಐ ಕಂಟೆಂಟ್ ಬಳಸುವ ಸಾಧ್ಯತೆ ಇದೆ. ಭಾರತದಲ್ಲಿ 95 ಕೋಟಿಗೂ ಹೆಚ್ಚು ಮತದಾರರಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಎಐ ಮೂಲಕ ಫೇಕ್ ಪ್ರಚಾರ ಮಾಡುವುದು ಸುಲಭ, ಆದರೆ ಅದನ್ನು ಪತ್ತೆ ಹಚ್ಚುವುದು ಕಷ್ಟ. ಇಂಥದ್ದನ್ನು ತಡೆಯಲು ನಮಗೆ ಪ್ರಜಾಸತ್ತಾತ್ಮಕವಾದ ರಕ್ಷಣಾ ವ್ಯವಸ್ಥೆ ಬೇಕು. ಭಾರತದಲ್ಲಿ ಕೆಲವು ಭದ್ರತಾ ಕ್ರಮಗಳು ಇರಲೇಬೇಕು. ಎಐ ಪ್ಲಾಟ್‌ಫಾರ್ಮ್‌ಗಳಲ್ಲಿ ಏನಾದರೂ ದುರ್ಬಳಕೆ ಕಂಡುಬಂದರೆ, ಕಂಪನಿಗಳು ಅದನ್ನು ತಕ್ಷಣವೇ ಸಿಇಆರ್‌ಟಿ-ಇನ್ (CERT-In) ಹಾಗೂ ಎಐ ಸೇಫ್ಟಿ ಅಥಾರಿಟಿಗೆ ರಿಪೋರ್ಟ್ ಮಾಡಬೇಕು. ಬಾಂಗ್ಲಾದೇಶದಲ್ಲಿ ನಡೆದಂತಹ ಘಟನೆಗಳನ್ನು ತಪ್ಪಿಸಲು, ರಾಜಕೀಯ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಚಾರಗಳಲ್ಲಿ ಎಐ ಸೃಷ್ಟಿಸಿದ ಕಂಟೆಂಟ್‌ಗಳಿಗೆ ಸರ್ಕಾರ ವಾಟರ್‌ಮಾರ್ಕಿಂಗ್ ಕಡ್ಡಾಯ ಮಾಡಬೇಕು.

ಎಐ ಈಗ ಬೇರೆ ಬೇರೆ ಸಾಫ್ಟ್‌ವೇರ್ ಸಿಸ್ಟಮ್‌ಗಳ ಜೊತೆ ಸೇರಿ ಹಲವು ಹಂತದ ಕೆಲಸಗಳನ್ನು ಕಂಟ್ರೋಲ್ ಮಾಡುತ್ತಿದೆ. ಬರೀ ಟೆಕ್ಸ್ಟ್ ಬರೆಯುವುದು ಮಾತ್ರವಲ್ಲ, ತಾವಾಗಿಯೇ ಕೆಲಸ ಮಾಡುವ ಎಐ ಏಜೆಂಟ್‌ಗಳನ್ನು ಕೂಡ ಸರ್ಕಾರ ಪ್ಲಾಟ್‌ಫಾರ್ಮ್ ಹೊಣೆಗಾರಿಕೆ ನಿಯಮಗಳ ಅಡಿಯಲ್ಲಿ ತರಬೇಕು. ಸರ್ಕಾರ ಹೊಸ ಕಾನೂನುಗಳನ್ನು ತರುವ ಮೂಲಕ ಫೇಕ್ ಎಪಿಐ (API) ಆಕ್ಸೆಸ್ ಅನ್ನು ಬ್ಯಾನ್ ಮಾಡಬೇಕು ಹಾಗೂ ಅದನ್ನು ಅಪರಾಧ ಎಂದು ಪರಿಗಣಿಸಬೇಕು. ಮಾಹಿತಿ ಕಲೆಹಾಕಲು, ಪರಿಶೀಲಿಸಲು ಹಾಗೂ ನಿಯಂತ್ರಣ ಹೇರಲು ಅಧಿಕಾರವಿರುವ ಒಂದು ಕಾನೂನುಬದ್ಧ ವ್ಯವಸ್ಥೆ ನಮಗೆ ತುರ್ತಾಗಿ ಬೇಕಿದೆ.

ಇದನ್ನು ಜಾರಿ ಮಾಡಲು ಭಾರತಕ್ಕೆ ಪೂರಕವಾದ ವಾತಾವರಣವಿದೆ. ನಾವು ಯಾವುದೇ ನಿಯಂತ್ರಣಗಳಿಲ್ಲದ ಅಮೆರಿಕದಂತೆಯೂ ಇಲ್ಲ, ಅಥವಾ ತಂತ್ರಜ್ಞಾನದ ಅರಿವಿಗಿಂತ ಗುರಿಗಳಿಗೆ ಹೆಚ್ಚು ಒತ್ತು ಕೊಡುವ ಯುರೋಪಿಯನ್ ಯೂನಿಯನ್ (EU) ತರಹವೂ ಇಲ್ಲ. ಡಿಪಿಐ (DPI), ಯುಪಿಐ (UPI), ಆಧಾರ್ ಮತ್ತು ಐಟಿ ನಿಯಮಗಳ ಮೂಲಕ ದೊಡ್ಡ ಟೆಕ್ ಪಾಲಿಸಿಗಳನ್ನು ತಂದು ಯಶಸ್ವಿಯಾಗಿರುವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ಭಾರತ. ಸಿಲಿಕಾನ್ ವ್ಯಾಲಿಯ ದಿಗ್ಗಜರು ನೀಡಿರುವ ಕರೆ, ಸರ್ಕಾರಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲು ಸಿಕ್ಕಿರುವ ಒಂದು ಆಹ್ವಾನ. ಸುರಕ್ಷತೆ ಹಾಗೂ ಹೊಣೆಗಾರಿಕೆಯನ್ನು ಖಚಿತಪಡಿಸುವ ಕಾನೂನುಗಳನ್ನು ತರುವ ಮೂಲಕ ಭಾರತ ಈ ವಿಚಾರದಲ್ಲಿ ಇಡೀ ಜಗತ್ತಿಗೆ ನಾಯಕತ್ವ ವಹಿಸಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

80's Trend: 'ಕದಿಯೋದು ಇನ್ನೇನಿದೆ' ಎಂದು ಫೋಟೋ ಹಾಕ್ತೀರಾ? ಬ್ಯಾಂಕ್​ ಖಾತೆ ಹುಷಾರ್- ರಾಜ್ಯದ ಜನತೆಗೆ ಖಡಕ್​ ವಾರ್ನಿಂಗ್​
ವಾಹನ ಯಾವುದೇ ಬಣ್ಣದಲ್ಲಿದ್ದರೂ ಟೈರ್ ಮಾತ್ರ ಕಪ್ಪಾಗಿ ಇರೋದ್ಯಾಕೆ? ಇದರ ಹಿಂದಿದೆ ಜನರ ಪ್ರಾಣ ಉಳಿಸೋ ಬಿಗ್ ಸೀಕ್ರೆಟ್!