
ಬೆಂಗಳೂರು: ಒಂದು ಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿತು ಎಂದರೆ ನನ್ನದೂ ಒಂದಿರಲಿ ಎಂದು ಸೆಲೆಬ್ರಿಟಿಗಳಾದಿಯಾಗಿ ಬಹುತೇಕ ಮಂದಿ ಅದರ ಮೊರೆ ಹೋಗುತ್ತಾರೆ. ಅದರಲ್ಲಿ ಒಂದು 80's Trend. ಇದರ ಬಗ್ಗೆ ಪೊಲೀಸರಾದಿಯಾಗಿ ಬಹುತೇಕ ಮಂದಿ ಎಚ್ಚರಿಕೆ ಕೊಟ್ಟು ಆಗಿದೆ. ಡಾಟಾ ಕದಿಯುತ್ತಾರೆ ಎನ್ನುವ ಎಚ್ಚರಿಕೆ ಕೊಟ್ಟಿದ್ದರಿಂದ ಹಲವರು, ಕದಿಯೋದೆಲ್ಲಾ ಕದ್ದಾಗಿದೆ, ಇನ್ನೇನು ಬಾಕಿ ಇದೆ. ಇರೋ ಒಂದು ಲೈಫ್ ಎಂಜಾಯ್ ಮಾಡದಿದ್ರೆ ಹೇಗೆ? ಎಲ್ಲರೂ ಮಾಡ್ತಾರೆ, ನಾನೊಬ್ಬ- ನಾನೊಬ್ಬಳು ಮಾಡಿದ್ರೆ ಯಾರ ಗಂಟು ಹೋಗತ್ತೆ, ಡಾಟಾ ಕದೀತಾರಂತೆ, ಮತ್ತೊಂದು ಮಾಡ್ತಾರಂತೆ... ಉಫ್ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಬರೆದು ತಮ್ಮ ಫೋಟೋ ಹಾಕುವ ಚಾಳಿ ಶುರುವಾಗಿ ಕೆಲ ತಿಂಗಳೇ ಗತಿಸಿ ಹೋಗಿವೆ.
ನಿಜ. ಅವರಿಗೆ ಏನೂ ಆಗಲಿಲ್ಲ, ಇವರಿಗೆ ಏನೂ ಆಗಲಿಲ್ಲ. ಡಾಟಾ ಕದಿಯಲು ಹಲವು ಮಾರ್ಗ ಇದಾಗಲೇ ಮಾಡಿಬಿಟ್ಟಿದ್ದಾರೆ. ಡಾಟಾ ಕದಿಯೋದು ಕಷ್ಟದ ಕೆಲಸವೇನಲ್ಲ... ಎಲ್ಲವೂ ನಿಜನೇ. ಆದರೆ ಇಂಥ ಟ್ರೆಂಡ್ಗಳಿಂದ ನಿಮ್ಮ ಬ್ಯಾಂಕ್ ಖಾತೆ ಗೋವಿಂದ ಆದ್ರೆ ಮಾತ್ರ ಕೊನೆಗೆ ಅಳಬೇಡಿ ಎನ್ನುವ ಖಡಕ್ ವಾರ್ನಿಂಗ್ ಅನ್ನು ರಾಜ್ಯ ಪೊಲೀಸರು ನೀಡಿದ್ದಾರೆ. ಅವರಿಗೆ, ಇವರಿಗೆ ಏನೂ ಆಗಲಿಲ್ಲ ಎಂದ ಮಾತ್ರಕ್ಕೆ ನಿಮಗೂ ಆಗಬಾರದು ಎಂದೇನಿಲ್ಲ ಎನ್ನುವುದು ಪೊಲೀಸರ ಎಚ್ಚರಿಕೆ.
ಅಷ್ಟಕ್ಕೂ ಇದು ಹೇಗೆ ವರ್ಕ್ ಆಗುತ್ತದೆಎಂದರೆ, ಇಂಥ ಟ್ರೆಂಡ್ಗಳು ಬಂದಾಗ ಮೂರನೆಯ ಪಾರ್ಟಿಗೆ ನಿಮ್ಮ ಫೋಟೋ ಕೊಟ್ಟಿರುತ್ತೀರಿ. ಆಗ ನಿಮ್ಮ ವೈಯಕ್ತಿಕ ಡೇಟಾ ಆ ಮೂರನೆಯ ವ್ಯಕ್ತಿಗೆ ಹೋಗುತ್ತೆ. ಅಂಥದ್ದೇನು ಮಹಾ ನಮ್ಮ ಬಳಿ ಇದೆ ಎಂದುಕೊಳ್ಳಬೇಡಿ. ಅದರಲ್ಲಿಯೂ ಮಹಿಳೆಯರ ಫೋಟೋಗಳು ಸುಲಭದಲ್ಲಿ ಸಿಕ್ಕು, ಇದೇ ಮುಂದೆ ಡೀಪ್‌ಫೇಕ್ ಫೋಟೋಗಳಾಗಿ ವೈರಲ್ ಆಗುತ್ತವೆ. ಯಾರದ್ದೋ ದೇಹಕ್ಕೆ ಇನ್ನಾರದ್ದೋ ಮುಖ ಹಾಕಿ, ನಿಮ್ಮದೇ ರೂಪವನ್ನು ಇನ್ನಾವುದೋ ಅವತಾರದಲ್ಲಿ ನಿಮ್ಮವರು ಸೋಷಿಯಲ್ ಮೀಡಿಯಾದಲ್ಲಿ ನೋಡಬಹುದು. ಅದ್ಯಾವ ರೀತಿ ಇರುತ್ತದೆ ಎನ್ನೋದು ಹೇಳಬೇಕಾಗಿಲ್ಲ ಅಲ್ವಾ? ಆಗ ಅವರಿಗೆ ಆಗಿಲ್ಲ, ಇವರಿಗೆ ಆಗಿಲ್ಲ ಎಂದು ರೇಗುವಷ್ಟರಲ್ಲಿ ನಿಮ್ಮ ಇಂಥ ಫೋಟೋ, ವಿಡಿಯೋಗಳು ಎಲ್ಲೆಲ್ಲೋ ಹರಿದಾಡು ಏನೇನೋ ಆವಾಂತರ ಸೃಷ್ಟಿಯಾಗಿರುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನೀವು ಇಂಥ ಟ್ರೆಂಡ್ ಮಾಡಲು ಹೋದಾಗ ನೀವು ಕೊಟ್ಟ ಮಾಹಿತಿ ಬಳಿಕ ನಿಮಗೊಂದು ಎಪಿಕೆ ಫೈಲ್ ಬರುತ್ತದೆ. ನೀವು ಅದನ್ನು ನಿಮ್ಮ 80's Trend ಫೋಟೋ ಎಂದುಕೊಂಡು, ನಾನು ಹೇಗೆ ಕಾಣಿಸುತ್ತೇನೆ ಎನ್ನುವ ಭರದಲ್ಲಿ ಲಿಂಕ್ ಓಪನ್ ಮಾಡಿದ್ರೆ, ಅಲ್ಲಿಗೆ ನಿಮ್ಮ ಬ್ಯಾಂಕ್ನಲ್ಲಿ ಹಣ ಗೋವಿಂದ! ಕೊನೆಗೆ ಸೈಬರ್ ಕ್ರೈಂಗೆ ದೂರು ಕೊಟ್ಟು ಅಲೆದಾಡಿದ್ರೂ ಪ್ರಯೋಜನ ಆಗಲಿಕ್ಕಿಲ್ಲ. ಆದ್ದರಿಂದ ಇಂಥ ಟ್ರೆಂಡ್ಗಳು ಬಂದಾಗ, ಅವುಗಳ ಹಿಂದಿನ ಉದ್ದೇಶವೇನು, ಇಂಥವುಗಳನ್ನು ಫ್ರೀ ಆಗಿ ಯಾಕೆ ಕೊಡ್ತಿದ್ದಾರೆ ಎನ್ನುವ ಯೋಚನೆ ಎಜುಕೇಟೆಡ್ ಮಂದಿ ಮಾಡಬೇಕಿದೆ. ಇರೋದೊಂದೇ ಲೈಫು ಎಂದುಕೊಂಡು ಆ ಲೈಫ್ ಎಂಜಾಯ್ ಮಾಡಲು ಹೋಗಿ ಅನಾಹುತ ಆಗಬಾರದು ಎನ್ನೋದು ಪೊಲೀಸರ ಕಳಕಳಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.