ಕೃಷ್ಣಾ ಮೇಲ್ದಂಡೆಗೆ ಡಿಸೆಂಬರೊಳಗೆ 3000 ಕೋಟಿ ವೆಚ್ಚ: ಸಚಿವ ಕಾರಜೋಳ

Published : Oct 28, 2022, 03:46 AM IST
ಕೃಷ್ಣಾ ಮೇಲ್ದಂಡೆಗೆ ಡಿಸೆಂಬರೊಳಗೆ 3000 ಕೋಟಿ ವೆಚ್ಚ: ಸಚಿವ ಕಾರಜೋಳ

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ಮತ್ತು ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಕಾಮಗಾರಿಗಳಿಗೆ ಡಿಸೆಂಬರ್‌ ಅಂತ್ಯದೊಳಗೆ ಮೂರು ಸಾವಿರ ಕೋಟಿ ರು. ವೆಚ್ಚ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬೆಂಗಳೂರು (ಅ.28): ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ಮತ್ತು ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಕಾಮಗಾರಿಗಳಿಗೆ ಡಿಸೆಂಬರ್‌ ಅಂತ್ಯದೊಳಗೆ ಮೂರು ಸಾವಿರ ಕೋಟಿ ರು. ವೆಚ್ಚ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಗುರುವಾರ ವಿಕಾಸಸೌಧದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿಯೇ 11 ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. 

ತನ್ಮೂಲಕ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524.256 ಮೀ. ಮಟ್ಟಕ್ಕೆ ಏರಿಸಲು ಅಗತ್ಯವಿರುವ 76 ಸಾವಿರ ಎಕರೆಗಳ ಪೈಕಿ 37 ಸಾವಿರ ಎಕರೆ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಂತಾಗುತ್ತದೆ. ಅಣೆಕಟ್ಟೆಯ ಎತ್ತರವನ್ನು 524.256 ಮೀ.ಗೆ ಹೆಚ್ಚಿಸುವುದಕ್ಕಾಗಿ ಮುಳುಗಡೆಯಾಗುವ 20 ಹಳ್ಳಿಗಳ ಪೈಕಿ ನಾಲ್ಕು ಹಳ್ಳಿಗಳ 3700 ಕಟ್ಟಡಗಳಿಗೂ ಪರಿಹಾರ ಮೊತ್ತ ಪಾವತಿಸಲಾಗುವುದು ಎಂದರು. ಈಗಾಗಲೇ ಹಳೆಯ ಭೂಸ್ವಾಧೀನ ಕಾಯ್ದೆ 4(1) ಅಥವಾ ಪ್ರಸ್ತುತ ಭೂಸ್ವಾಧೀನ ಕಾಯ್ದೆ 11(1) ಅಡಿಯಲ್ಲಿ ಅಧಿಸೂಚಿಸಲ್ಪಟ್ಟು ಕಾರಣಾಂತರದಿಂದ ನಿಷ್ಕ್ರಿಯಗೊಂಡಿರುವ ಅಧಿಸೂಚನೆಗಳ ಜಮೀನು ಮಾಲೀಕ ರೈತರು ನೇರ ಖರೀದಿ ಮತ್ತು ಸಮ್ಮತಿ ತೀರ್ಪಿಗೆ ಒಪ್ಪಿದರೆ ಜಿಲ್ಲಾಧಿಕಾರಿಗಳ ಮೂಲಕ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡಲು ಕ್ರಮ ಕೈಗೊಂಡು ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದರು.

Bagalkote: ದೀಪಕ್ಕೆ ದಿಕ್ಕಿಲ್ಲದ ಮನೆಯಂತಾದ ಕಾಂಗ್ರೆಸ್‌ ಪಕ್ಷ: ಸಚಿವ ಕಾರಜೋಳ

20 ಬಾಧಿತ ಹಳ್ಳಿಗಳ ಪೂರ್ಣ ಪುನರ್ವಸತಿ ಕಾರ್ಯಕ್ರಮ ಪೂರ್ಣಗೊಳಿಸಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಅಗತ್ಯವಿರುವ 6437 ಎಕರೆ ಪೈಕಿ 3278 ಎಕರೆ ಪ್ರದೇಶವನ್ನು ಈಗಾಗಲೇ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಪುನರ್ವಸತಿ ಕೇಂದ್ರಗಳಿಗೆ ಅಗತ್ಯವಿರುವ ವಿದ್ಯುತ್‌ ಪೂರೈಕೆಗೆ ಪ್ರತ್ಯೇಕ ಉಪಕೇಂದ್ರ ಅಗತ್ಯವಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟಿಲ್ಲ: ಕಾಂಗ್ರೆಸ್‌ ನಶಿಸಿ ಹೋಗುವ ಸಂದರ್ಭದಲ್ಲಿ ಹೊಸ ನಾಟಕಗಳನ್ನು ಪ್ರದರ್ಶಿಸುವ ಕಾರ್ಯ ಮಾಡುತ್ತಿದ್ದು ಅದರಲ್ಲೊಂದು ಈ ಭಾರತ ಜೋಡೋ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ಔರಾದ್‌ನಲ್ಲಿ ಜನ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ಜೋಡೊ ಯಾತ್ರೆ ಜಮ್ಮು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾಡಬೇಕಿತ್ತು. ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲಿ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಷ್ಟಕ್ಕೂ ವರ್ಚಸ್ಸು ಕಳೆದುಕೊಂಡ ರಾಹುಲ್‌ ಗಾಂಧಿಯವರನ್ನು ಮತ್ತೆ ಹೊಳಪಿಸುವ ಹೊಸ ನಾಟಕ ಪ್ರಯೋಗ ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದರು.

ಬೆಳ್ತಂಗಡಿ ಏತ ನೀರಾವರಿ ಮಾರ್ಚ್‌ಗೆ ಲೋಕಾರ್ಪಣೆ: ಸಚಿವ ಗೋವಿಂದ ಕಾರಜೋಳ

ಜನ ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಿರುವ ಹಂತದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದೆ. ಕಾಂಗ್ರೆಸ್‌ ವಿಳಾಸ ಸಿಗದಂತಹ ಹಾಗೂ 2023ರ ಚುನಾವಣೆ ನಂತರ ಕಾಂಗ್ರೆಸ್‌ ಕಚೇರಿಗೆ ದೀಪ ಹಚ್ಚಲೂ ಯಾರೂ ಸಿಗದಂತಹ ಸಂದರ್ಭದಲ್ಲಿ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡುತ್ತಿರುವುದು ವಿಚಿತ್ರವಾಗಿದೆ. ಏನೇ ಗಿಮಿಕ್‌ ಮಾಡಿದರೂ ಕಾಂಗ್ರೆಸ್‌ ಅಸ್ತಿತ್ವದಲ್ಲಿ ಉಳಿಯಲ್ಲ ಎಂದರು. ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟಿಲ್ಲ. ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು, ಒಳಗಿರುವ ಅಕ್ಕಿ ನರೇಂದ್ರ ಮೋದಿ ಅವರದ್ದು, ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಿಸುವ ಯಾವ ಪ್ರಯತ್ನವನ್ನೂ ಮಾಡದೇ ಬರೀ ತೋರಿಕೆಗೆ ಮಾತ್ರ ಎಸ್ಸಿ/ಎಸ್ಟಿ ಜನರನ್ನು ಬಳಸಿಕೊಂಡ ಕಾಂಗ್ರೆಸ್‌ ದೀನ ದಲಿತರನ್ನು ತುಳಿಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು
Karnataka Winter Session: ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿಧೇಯಕಗಳು