ಅಹಮದಾಬಾದ್ (ಜೂ.3): ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಈ ಬಾರಿ ಚುಟುಕು ಕ್ರಿಕೆಟ್ ಲೀಗ್‌ನ ಕಿರೀಟ ತೊಡುವವರು ಯಾರು ಎಂಬ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿದ್ದು, ರಣರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.
ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿರುವ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿತ್ತು. ಕ್ವಾಲಿಫೈಯರ್-1ರಲ್ಲಿ ಪಂಜಾಬ್ ವಿರುದ್ಧವೇ ಗೆದ್ದು ನೇರವಾಗಿ ಫೈನಲ್‌ಗೇರಿತ್ತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ಶ್ರೇಯಸ್ ಅಯ್ಯರ್ ಸಾರಥ್ಯದ ಪಂಜಾಬ್, ಆರ್‌ಸಿಬಿ ವಿರುದ್ಧ ಸೋಲಿನ ಬಳಿಕ ಕ್ವಾಲಿಫೈಯರ್-2ರಲ್ಲಿ ಮುಂಬೈನ ಸೋಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.
ರೋಚಕ ಪೈಪೋಟಿ: ಟೂರ್ನಿಯ ಪ್ರದರ್ಶನ ಗಮನಿಸಿದರೆ ಎರಡೂ ತಂಡಗಳು ಬಲಿಷ್ಠ. ಆದರೆ ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತವಾಗಿ ಆಡುತ್ತಿರುವುದು ಆರ್‌ಸಿಬಿಯ ಪ್ಲಸ್ ಪಾಯಿಂಟ್ ಆಗಿದ್ದರೆ, ಪಂಜಾಬ್‌ನ ಸಾಮರ್ಥ್ಯ ಬಲಿಷ್ಠ ಬ್ಯಾಟಿಂಗ್. ಹೀಗಾಗಿ ಫೈನಲ್‌ನಲ್ಲೂ ರಣರೋಚಕ ಪೈಪೋಟಿ ನಿರೀಕ್ಷಿಸಬಹುದು.
ಆರ್‌ಸಿಬಿ ಎಲ್ಲಾ ವರ್ಷ ಕೆಲವೇ ಆಟಗಾರರನ್ನು ನೆಚ್ಚಿಕೊಂಡು ಆಡುತ್ತಿತ್ತು. ಆದರೆ ಈ ಬಾರಿ ಪ್ರತಿಯೊರ್ವ ಆಟಗಾರರೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ(614 ರನ್) ತಮ್ಮ ಅಭೂತಪೂರ್ವ ಆಟವನ್ನು ಫೈನಲ್‌ನಲ್ಲಿ ಪ್ರದರ್ಶಿಸಬೇಕಿದ್ದು, ಫಿಲ್ ಸಾಲ್ಟ್(387) ಅಬ್ಬರ ತಂಡದ ಪ್ಲಸ್ ಪಾಯಿಂಟ್. ಕನ್ನಡಿಗ ಮಯಾಂಕ್ ಅಗರ್‌ವಾಲ್, ಜಿತೇಶ್ ಶರ್ಮಾ ನಿರ್ಣಾಯಕ ಘಟ್ಟದಲ್ಲಿ ಸ್ಫೋಟಕ ಆಟದ ಮೂಲಕ ಗಮನಸೆಳೆದಿದ್ದು, ಫೈನಲ್‌ನಲ್ಲೂ ಅಬ್ಬರಿಸುವ ಕಾತರದಲ್ಲಿದ್ದಾರೆ. ಗಾಯಾಳು ಟಿಮ್ ಡೇವಿಡ್ ಫೈನಲ್‌ಗೆ ಲಭ್ಯವಿರುವ ಬಗ್ಗೆ ಮಾಹಿತಿಯಿಲ್ಲ. ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ ಆಲ್ರೌಂಡ್ ಆಟ ತಂಡಕ್ಕೆ ನಿರ್ಣಾಯಕ.
ಬೌಲಿಂಗ್ ಬಲ: ಆರ್‌ಸಿಬಿಯ ಈ ಬಾರಿ ಯಶಸ್ಸಿಗೆ ಕಾರಣ ಬಲಿಷ್ಠ ಬೌಲಿಂಗ್ ಪಡೆ. ಜೋಶ್ ಹೇಜಲ್‌ವುಡ್(21 ವಿಕೆಟ್) ಎದುರಾಳಿಗಳ ನಿದ್ದೆಗೆಡಿಸಿದ್ದು, ಭುವನೇಶ್ವರ್(15), ಕೃನಾಲ್ ಪಾಂಡ್ಯ(15), ಯಶ್ ದಯಾಳ್(12), ಸುಯಶ್ ಶರ್ಮಾ(8) ಸಂಘಟಿತ ದಾಳಿ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಪಡೆ ತನ್ನ ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚಿನ ನಂಬಿಕೆ ಇರಿಸಿದೆ. ಮುಂಬೈ ವಿರುದ್ಧ ಕ್ವಾಲಿಫೈಯರ್-2ರಲ್ಲಿ ಶ್ರೇಯಸ್‌ರಿಂದ ಮೂಡಿಬಂದ ಆಟ, ಆರ್‌ಸಿಬಿ ಬೌಲರ್‌ಗಳ ನಿದ್ದೆಗೆಡಿಸುವಂತಿತ್ತು. ಉಳಿದಂತೆ ಪ್ರಭ್‌ಸಿಮ್ರನ್, ಪ್ರಿಯಾನ್ಶ್ ಆರ್ಯ, ಜೋಶ್ ಇಂಗ್ಲಿಸ್, ನೇಹಲ್ ವಧೇರಾ, ಮಾರ್ಕಸ್ ಸ್ಟೋಯ್ನಿಸ್ ಕೂಡಾ ಅಬ್ಬರಿಸುತ್ತಿದ್ದಾರೆ. ಗಾಯಗೊಂಡಿದ್ದ ಚಹಲ್ ಲಯಕ್ಕೆ ಮರಳಲು ಪರದಾಡುತ್ತಿದ್ದು, ಅರ್ಶ್‌ದೀಪ್, ಕೈಲ್ ಜೇಮಿಸನ್, ಕನ್ನಡಿಗ ವೈಶಾಖ್ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ