ಮೊಬೈಲ್ ಟವರ್ ಮೇಲೆ ಹತ್ತಿ ಯುವಕನ ಹುಚ್ಚಾಟ: ಮದ್ಯ, ಗುಟ್ಕಾ ಪ್ಯಾಕೆಟ್ ಕಂಡೊಡನೆ ಸರಸರ ಕೆಳಗಿಳಿದ!

By Kannadaprabha News  |  First Published Jul 9, 2023, 12:02 PM IST

ಪಾನಮತ್ತನಾದ ಯುವಕನೊಬ್ಬನು ವಿವಸ್ತ್ರನಾಗಿ ಮೊಬೈಲ್‌ ಟವರ್‌ ಏರಿ ಕುಳಿತ ಘಟನೆಯೊಂದು ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಶನಿವಾರ ನಡೆದಿದೆ. ನಂತರ ಆತನ ಮನವೊಲಿಸಿ ಕೆಳಗೆ ಇಳಿಸಿದ್ದು, ಕೆಲಕಾಲ ನೆರೆದ ಜನರಲ್ಲಿ ಆತಂಕ ಕೂಡ ಮೂಡಿಸಿತ್ತು. ತೆಗ್ಗಿಹಳ್ಳಿ ಗ್ರಾಮದ ಸತೀಶ ಕಡಣಿ (25) ಟವರ್‌ ಏರಿ, ನಂತರ ಕೆಳಗಿಳಿದ ಯುವಕ. 


ವಿಜಯಪುರ (ಜು.09): ಪಾನಮತ್ತನಾದ ಯುವಕನೊಬ್ಬನು ವಿವಸ್ತ್ರನಾಗಿ ಮೊಬೈಲ್‌ ಟವರ್‌ ಏರಿ ಕುಳಿತ ಘಟನೆಯೊಂದು ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಶನಿವಾರ ನಡೆದಿದೆ. ನಂತರ ಆತನ ಮನವೊಲಿಸಿ ಕೆಳಗೆ ಇಳಿಸಿದ್ದು, ಕೆಲಕಾಲ ನೆರೆದ ಜನರಲ್ಲಿ ಆತಂಕ ಕೂಡ ಮೂಡಿಸಿತ್ತು. ತೆಗ್ಗಿಹಳ್ಳಿ ಗ್ರಾಮದ ಸತೀಶ ಕಡಣಿ (25) ಟವರ್‌ ಏರಿ, ನಂತರ ಕೆಳಗಿಳಿದ ಯುವಕ. 

ಕುಡಿದ ಮತ್ತಿನಲ್ಲಿ ಮೈಮೇಲಿನ ಬಟ್ಟೆ ಬಿಚ್ಚಿ ಬಳಗಾನೂರ ಗ್ರಾಮದ ಮೊಬೈಲ್‌ ಟವರ್‌ ಏರಿ ಕುಳಿತು ಹುಚ್ಚಾಟ ನಡೆಸಿದ್ದ. ಆಯತಪ್ಪಿ ಬಿದ್ದರೆ ಬದುಕುಳಿಯುವುದು ಕಷ್ಟವಾಗುತ್ತಿತ್ತು. ಅದೃಷ್ಟವಶಾತ್‌ ಅಂತಹ ದುರ್ಘಟನೆ ನಡೆಯಲಿಲ್ಲ.  ಗ್ರಾಮಸ್ಥರು ಕೆಳಗಿಳಿದು ಬರುವಂತೆ ಯುವಕನಲ್ಲಿ ಎಷ್ಟೇ ಮನವಿ ಮಾಡಿಕೊಂಡರೂ ಕುಡಿದ ನಶೆಯಲ್ಲಿದ್ದ ಯುವಕ ಸತೀಶ ಕೆಳಗಿಳಿದು ಬರದೇ ಹುಚ್ಚಾಟ ಮುಂದುವರಿಸಿದ್ದ. ಸುದ್ದಿ ತಿಳಿದ ತಕ್ಷಣ ಆಲಮೇಲ ಪೊಲೀಸರು ಸ್ಥಳಕ್ಕೆ ಧಾವಿಸಿ ಮದ್ಯದ ಅಮಲಿನಲ್ಲಿರುವ ಯುವಕನನ್ನು ಕೆಳಗಿಳಿಸಲು ಹರಸಾಹಸಪಟ್ಟರು. 

Tap to resize

Latest Videos

ಜೈನಮುನಿ ಹತ್ಯೆ ಸಮಗ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಆದಾಗ್ಯೂ ಯುವಕ ಕೆಳಗಿಳಿಯಲು ಸುತಾರಾಂ ಒಪ್ಪಲಿಲ್ಲ. ಅನಾಹುತ ಆಗದಂತೆ ತಡೆಯಲು ಪೊಲೀಸರು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿದರು. ಅವರು ಕೂಡ ಯುವಕನನ್ನು ಕೆಳಗಿಳಿಸಲು ಪಟ್ಟಶ್ರಮ ಅಷ್ಟಿಷ್ಟಲ್ಲ. ಅಗ್ನಿಶಾಮಕ ಸಿಬ್ಬಂದಿಗೂ ಪಾನಮತ್ತ ಯುವಕ ಕ್ಯಾರೆ ಎನ್ನಲಿಲ್ಲ.  ಟವರ್‌ ತುತ್ತತುದಿಯಲ್ಲಿ ಪಾನಮತ್ತ ಯುವಕ ನೇತಾಡುತ್ತಿದ್ದ.  ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದರು. ಗ್ರಾಮಸ್ಥರು ಪರಿಪರಿಯಾಗಿ ಕೆಳಗಿಳಿಯುವಂತೆ ಯುವಕನಿಗೆ ತಿಳಿಸಿದರೂ ಆತ ಕೆಳಗಿಳಿಯಲಿಲ್ಲ. 

ತಾಕತ್ತಿದ್ದರೆ ಎಚ್‌ಡಿಕೆ ಪೆನ್‌ಡ್ರೈವ್‌ ಬಿಡುಗಡೆ ಮಾಡಲಿ: ಸಚಿವ ಶರಣಪ್ರಕಾಶ್‌, ಎಸ್ಸೆಸ್ಸೆಂ ತಿರುಗೇಟು

ಈ ಸಂದರ್ಭದಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಗ್ರಾಮಸ್ಥರು ಯುವಕನನ್ನು ಟವರ್‌ನಿಂದ ಕೆಳಗಿಳಿಸಲು ಉಪಾಯ ಹೂಡಿ, ನಿನಗಾಗಿ ಮದ್ಯ ಮತ್ತು ಗುಟಕಾ ತಂದಿದ್ದೇವೆ ಕೆಳಗಿಳಿದು ಬಾ ಎಂದು ಜೋರಾಗಿ ಕೂಗಿ ಹೇಳಿದರು. ಆಗ ಟವರ್‌ ಮೇಲೆ ಕುಳಿತಿದ್ದ ಯುವಕ ಸತೀಶ ಸರಸರನೇ ಕೆಳಗಿಳಿದು ಬಂದ. ಪಾನಮತ್ತ ಯುವಕನ ಈ ಹುಚ್ಚಾಟ ಕೆಲಕಾಲ ಆತಂಕಕ್ಕೆ ಕಾರಣವಾದರೂ ನೋಡುಗರಿಗೆ ಮಾತ್ರ ಪುಕ್ಕಟೆ ಮನರಂಜನೆ ನೀಡಿತು. ಆಲಮೇಲ ಠಾಣೆ ಪೊಲೀಸರು ಹುಚ್ಚಾಟ ನಡೆಸಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

click me!