ಕೋಟ್ಯಂತರ ಜನಕ್ಕೆ ಯಶಸ್ವಿನಿ ಯೋಜನೆ ಅನುಕೂಲ: ಸ್ಪೀಕರ್‌ ಕಾಗೇರಿ

By Govindaraj SFirst Published Nov 20, 2022, 6:19 AM IST
Highlights

ಆರೋಗ್ಯ ಸೇವೆ ದುಬಾರಿಯಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಯಶಸ್ವಿನಿ ಯೋಜನೆ ಮರು ಜಾರಿಗೊಳಿಸುವ ಮೂಲಕ ಕೋಟ್ಯಂತರ ಬಡವರು, ರೈತ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕೆಂಗೇರಿ (ನ.20): ಆರೋಗ್ಯ ಸೇವೆ ದುಬಾರಿಯಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಯಶಸ್ವಿನಿ ಯೋಜನೆ ಮರು ಜಾರಿಗೊಳಿಸುವ ಮೂಲಕ ಕೋಟ್ಯಂತರ ಬಡವರು, ರೈತ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕೇಂಗೇರಿ ಉಪ ನಗರದ ಗಣೇಶ ಆಟದ ಮೈದಾನದಲ್ಲಿ ಶನಿವಾರ ಆಯೋಜನೆಗೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಆರೋಗ್ಯ ಸೇವೆ ದುಬಾರಿಯಾಗಿ ಬಡವರು, ರೈತರಿಗೆ ತುಂಬಾ ತೊಂದರೆಯಾಗಿತ್ತು. ಜನತೆಯ ನಿರೀಕ್ಷೆಯನ್ನು ಅರಿತ ಸಹಕಾರ ಸಚಿವ ಸೋಮಶೇಖರ್‌ ಅವರ ವಿಶೇಷ ಮುತುವರ್ಜಿಯಿಂದ ಯಶಸ್ವಿನಿ ಯೋಜನೆಯನ್ನು ಸರ್ಕಾರ ಮರು ಜಾರಿಗೊಳಿಸಿದೆ. ಇದರಿಂದ ಕೋಟ್ಯಂತರ ಬಡವರು, ರೈತ ಕುಟುಂಬಗಳಿಗೆ ಉಚಿತ ಹಾಗೂ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ’ ಎಂದರು.

ರೈತರ ಮೇಲೆ ಭೂ ಒತ್ತುವರಿ ಕೇಸ್‌ ಹಾಕಲ್ಲ: ಸಚಿವ ಅಶೋಕ್‌

ಯಶಸ್ವಿನಿಗೆ .100 ಕೋಟಿ ಬಿಡುಗಡೆ: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ‘ಸಹಕಾರ ಸಂಘಗಳು ಜಾತಿ​-ಧರ್ಮದ ತಾರತಮ್ಯವಿಲ್ಲದೆ ಸಮುದಾಯವನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಸಹಕಾರ ಸಂಘಗಳ ಮೂಲಕ ಶೂನ್ಯ ಹಾಗೂ ಅಗ್ಗದ ಬಡ್ಡಿ ದರದಲ್ಲಿ ಸಾಲ ನೀಡಿ ರೈತರು ಹಾಗೂ ಬಡವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಯಶಸ್ವಿನಿ ಯೋಜನೆಗೆ ರಾಜ್ಯ ಸರ್ಕಾರ 300 ಕೋಟಿ ರು. ಮೀಸಲಿರಿಸಿದ್ದು, ಈಗಾಗಲೇ 100 ಕೋಟಿ ರು. ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

ಸಹಕಾರ ಇಲಾಖೆ ವತಿಯಿಂದ ಹಾಲು ಉತ್ಪಾದಕ ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಲು 5ರಿಂದ 10 ಲಕ್ಷ ರು. ಸಹಾಯಧನ ನೀಡಲಾಗುತ್ತಿದೆ. ಪ್ರತಿ ಲೀಟರ್‌ ಹಾಲಿಗೆ 5 ರು. ಪ್ರೋತ್ಸಾಹ ಧನವನ್ನು ನೀಡುತ್ತಿದ್ದು, ವಾರ್ಷಿಕ 1280 ಕೋಟಿ ರು. ಹಣವನ್ನು ಸರ್ಕಾರ ಭರಿಸುತ್ತಿದೆ’ ಎಂದರು

ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌: ‘ರಾಜ್ಯದ 15 ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ 26 ಲಕ್ಷ ಹಾಲು ಉತ್ಪಾದಕರಿದ್ದಾರೆ. ಈ ಪೈಕಿ 9 ಲಕ್ಷ ಮಹಿಳೆಯರಿದ್ದಾರೆ. ಶ್ರಮಜೀವಿಗಳು ಸಕಾಲದಲ್ಲಿ ಆರ್ಥಿಕ ಸಂಕಷ್ಟಗಳಿಗೆ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಪ್ರತ್ಯೇಕ ಬ್ಯಾಂಕ್‌ ಸ್ಥಾಪಿಸಲಾಗುವುದು. ಜತೆಗೆ ಪ್ರತಿ ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌ ನೀಡಲು ಚಿಂತನೆ ನಡೆಸಲಾಗಿದೆ. ಸದ್ಯದಲ್ಲೇ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಕಾರ್ಯಾರಂಭವಾಗಲಿದ್ದು ನಬಾರ್ಡ್‌ನಿಂದ ನೇರವಾಗಿ ಬ್ಯಾಂಕ್‌ ಗ್ರಾಹಕರಿಗೆ ಹಣಕಾಸು ದೊರೆಯಲಿದೆ’ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಮಾಹಿತಿ ನೀಡಿದರು.

54 ಸಹಕಾರಿಗಳಿಗೆ ಪ್ರಶಸ್ತಿ: ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಗೋಪೂಜೆ ನೆರವೇರಿಸಿ ಸಹಕಾರಿ ಧ್ವಜಾರೋಹಣ ನೆರವೇರಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬೆಂಗಳೂರು ವಿಭಾಗದ 9 ಜಿಲ್ಲೆಗಳ 54 ಸಹಕಾರಿಗಳಿಗೆ ‘ಸಹಕಾರ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್‌ ವಿತರಿಸಲಾಯಿತು. ಬಳಿಕ ಸಹಕಾರ ಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

Kolar: ‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಯಶಸ್ವಿಗೊಳಿಸಿ: ಕಾಗೇರಿ ಕರೆ

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಮಾಜಿ ಅಧ್ಯಕ್ಷ ಜಿ.ಟಿ ದೇವೇಗೌಡ, ವಿಧಾನಪರಿಷತ್‌ ಸದಸ್ಯ ಅ.ದೇವೇಗೌಡ, ಬೆಂಗಳೂರು ಡಿಸಿಸಿ ಬ್ಯಾಂಕ್‌ ನಿಯಮಿತ ಅಧ್ಯಕ್ಷ ಡಿ. ಹನುಮಂತಯ್ಯ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿರ್ದೇಶಕ ದೊಡ್ಡ ನಾಗಯ್ಯ, ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ್‌, ಸಹಕಾರ ಸಂಘ ನಿಬಂಧಕ ಕ್ಯಾಪ್ಟನ್‌ ಡಾ. ಕೆ. ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

click me!