ಮತದಾರರ ಮಾಹಿತಿಗೆ ಕನ್ನ: ಬೊಮ್ಮಾಯಿ ಅವರೇ ಕಿಂಗ್‌ಪಿನ್‌, ಸಿಎಂ ತಲೆದಂಡಕ್ಕೆ ಕಾಂಗ್ರೆಸ್‌ ಪಟ್ಟು

By Kannadaprabha NewsFirst Published Nov 20, 2022, 12:30 AM IST
Highlights

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಬೇಕು. 

ಬೆಂಗಳೂರು(ನ.20): ‘ಮತದಾರರ ಮಾಹಿತಿಗೆ ಕನ್ನ ಹಾಕಿರುವ ‘ವೋಟರ್‌ ಗೇಟ್‌’ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಿಂಗ್‌ಪಿನ್‌. ಹೀಗಾಗಿ ನ್ಯಾಯ ಸಮ್ಮತ ತನಿಖೆಗಾಗಿ ಕೂಡಲೇ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು. ಜತೆಗೆ ಚುನಾವಣಾ ಆಯೋಗವು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಮುಖ್ಯಮಂತ್ರಿಗಳ ಮೇಲೆ ಎಫ್‌ಐಆರ್‌ ದಾಖಲಿಸಿ ಬಂಧಿಸುವಂತೆ ಮಾಡಬೇಕು’ ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ.

ಅಲ್ಲದೆ, ಮತದಾರರ ಮಾಹಿತಿಗೆ ಕನ್ನ ಹಾಕಿರುವ ಚಿಲುಮೆ ಸಂಸ್ಥೆಗೆ ಬಿಜೆಪಿ ಮಾಜಿ ಶಾಸಕ ಹಾಗೂ ಬಿಎಂಟಿಸಿ ಅಧ್ಯಕ್ಷರಾಗಿರುವ ನಂದೀಶ್‌ರೆಡ್ಡಿ 17.5 ಲಕ್ಷ ರು. ಪಾವತಿ ಮಾಡಿದ್ದಾರೆ. ಇನ್ನು ಚಿಲುಮೆ ಸಂಸ್ಥೆ ಮೇಲೆ ನಡೆದ ಪೊಲೀಸರ ದಾಳಿ ವೇಳೆ ಸಚಿವರೊಬ್ಬರ ಲೆಟರ್‌ಹೆಡ್‌ ಹಾಗೂ ಸೀಲ್‌, ಸಹಿಯ ದಾಖಲೆ ದೊರೆತಿದೆ. ಹೀಗಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ಮೇಲೂ ಎಫ್‌ಐಆರ್‌ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

Voters Data Theft Case: ಮತ ಮಾಹಿತಿ ಕದ್ದವರ ಬಂಧನಕ್ಕೆ ಡಿ.ಕೆ.ಶಿವಕುಮಾರ್‌ ಗಡುವು

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ನೇತೃತ್ವದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಶನಿವಾರ ದೂರು ನೀಡಿ ಬಳಿಕ ಸುದ್ದಿಗೋಷ್ಠಿ ನಡೆಸಿದ ನಾಯಕರು, ‘ಚಿಲುಮೆ ಸಂಸ್ಥೆಯ ಜತೆ ಸಂಪರ್ಕದಲ್ಲಿರುವ ಎಲ್ಲಾ ಸಚಿವರು, ಶಾಸಕರು ಹಾಗೂ ಮಾಜಿ ಶಾಸಕರನ್ನೂ ಬಂಧಿಸಬೇಕು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಬೇಕು. ಈ ಬಗ್ಗೆ ಹೈಕೋರ್ಟ್ ಸಹ ಸುಮೋಟೊ ಪ್ರಕರಣ ದಾಖಲಿಸಿಕೊಳ್ಳಬೇಕು. ಮುಖ್ಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ವಿಚಾರಣೆ ನಡೆಸಬೇಕು’ ಎಂದು ಹೇಳಿದರು.

ಮೊದಲಿಗೆ ಮಾತನಾಡಿದ ಸುರ್ಜೇವಾಲಾ, ‘ಮತದಾರರ ಮಾಹಿತಿ ಕಳವು ಹಗರಣದಲ್ಲಿ ಬಸವರಾಜ ಬೊಮ್ಮಾಯಿ ಅವರೇ ನಿಜವಾದ ಕಿಂಗ್‌ಪಿನ್‌ ಎಂಬುದನ್ನು ಸಾಬೀತುಪಡಿಸಿದೆ. ನಗರದ ಉಸ್ತುವಾರಿ ಸಚಿವರೂ ಆಗಿರುವ ಬೊಮ್ಮಾಯಿ ಅವರ ಮೂಗಿನ ಅಡಿಯಲ್ಲೇ ಎಲ್ಲವೂ ನಡೆದಿದೆ. ಇದನ್ನು ಮುಚ್ಚಿ ಹಾಕಲು, ಒಂದು ಸುಳ್ಳು ಸಮರ್ಥಿಸಿಕೊಳ್ಳಲು ಸಾವಿರ ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಅವರ ಪಾತ್ರವನ್ನು ಅವರೇ ಸಾಬೀತುಪಡಿಸುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ಇತಿಹಾಸದಲ್ಲೇ ದೊಡ್ಡ ಹಗರಣ:

ದೇಶದ ಇತಿಹಾಸದಲ್ಲಿ ಇದು ದೊಡ್ಡ ಹಗರಣ. ಕನ್ನಡಿಗರ ಮತದಾನದ ಹಕ್ಕು ಕಸಿಯುವ ಮೂಲಕ ಪ್ರತಿ ಗಂಟೆಯೂ ರಾಜಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸಲು ಸರ್ಕಾರ ಕೆಲಸ ಮಾಡಿದೆ. ತನಿಖೆಗೆ ಮೊದಲೇ ಆರೋಪ ನಿರಾಧಾರ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ಸತ್ಯಾಂಶವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ ಮೇಲೆ ತನಿಖೆ ನಡೆಸಿದ ಪೊಲೀಸರು ಅದಕ್ಕೆ ವಿರುದ್ಧ ವರದಿ ನೀಡಲು ಸಾಧ್ಯವೇ? ಇದು ಪ್ರಕರಣ ಮುಚ್ಚಿ ಹಾಕುವ ಯತ್ನವಲ್ಲವೇ? ಎಂದು ಕಿಡಿಕಾರಿದರು.

ಮಾಹಿತಿ ಎಲ್ಲಿ ಹೋಯಿತು?:

ಚಿಲುಮೆ ಎಜುಕೇಶನ್‌ ಅಂಡ್‌ ರೂರಲ್‌ ಡೆವಲಪ್‌ಮೆಂಟ್‌ ಸಂಸ್ಥೆ, ಚಿಲುಮೆ ಎಂಟರ್‌ಪ್ರೈಸಸ್‌ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗಳ ನಿರ್ದೇಶಕರಾದ ಕೃಷ್ಣಪ್ಪ ರವಿಕುಮಾರ್‌, ಭೈರಪ್ಪ ಶೃತಿ, ನರಸಿಂಹ ಮೂರ್ತಿ, ಐಶ್ವರ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಿಲ್ಲ. ಬೆಂಗಳೂರಿನಲ್ಲಿ ಕಳುವಾಗಿರುವ 1 ಕೋಟಿ ಮತದಾರರ ಮಾಹಿತಿ ಎಲ್ಲಿ ಹೋಯಿತು ಎಂಬ ಬಗ್ಗೆ ಬೊಮ್ಮಾಯಿ ಉತ್ತರಿಸುತ್ತಿಲ್ಲ. ಬಿಬಿಎಂಪಿಗೆ ಚಿಲುಮೆ ಸಂಸ್ಥೆ ಉಚಿತ ಸೇವೆ ನೀಡುತ್ತಿದ್ದು, ಈ ಸಂಸ್ಥೆಗೆ ಆರ್ಥಿಕ ನೆರವು ನೀಡುತ್ತಿರುವವರು ಯಾರು ಎಂಬ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.

ನಂದೀಶ್‌ ರೆಡ್ಡಿಯಿಂದ ಸಂಸ್ಥೆಗೆ ಹಣ:

ಕೆ.ಆರ್‌. ಪುರ ಬಿಜೆಪಿ ಮಾಜಿ ಶಾಸಕ ನಂದೀಶ್‌ ರೆಡ್ಡಿ ಅವರು ಚಿಲುಮೆ ಸಂಸ್ಥೆಗೆ 18 ಲಕ್ಷ ರು. ಹಣ ನೀಡಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಟ್‌ನಲ್ಲೇ ತಿಳಿಸಿದ್ದಾರೆ. ಮತದಾರರ ಮಾಹಿತಿ ಪಡೆದು ಹಣಕ್ಕೆ ಅದನ್ನು ಮಾರಾಟ ಮಾಡುವ ಸಂಸ್ಥೆಗೆ ಬೆಂಗಳೂರಿನ ಎಲ್ಲ 28 ಕ್ಷೇತ್ರಗಳ ಮತದಾರರ ಮಾಹಿತಿ ಕಲೆ ಹಾಕಲು ಜಾಹೀರಾತು ಇಲ್ಲದೆ ಅವಕಾಶ ನೀಡಿದ್ದು ಯಾಕೆ? ಇದು ಭ್ರಷ್ಟಾಚಾರವಲ್ಲವೇ? ಇದಕ್ಕೆ ಬೆಂಗಳೂರು ಉಸ್ತುವಾರಿ ಸಚಿವರು ಹೊಣೆಯಲ್ಲವೇ ಎಂದು ಕಿಡಿ ಕಾರಿದರು.

ಮತದಾರರ ಮಾಹಿತಿ ಕಳವು: ಇಬ್ಬರ ಬಂಧನ, ದಾಖಲೆ ವಶ

ಕ್ರಿಮಿನಲ್‌ ಪ್ರಕರಣ ದಾಖಲಿಸಿ:

ಇದಕ್ಕೂ ಮೊದಲು ರಾಜ್ಯ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್‌ ಮೀನಾ ಅವರನ್ನು ಭೇಟಿ ಮಾಡಿ, ‘ಪ್ರಕರಣದಲ್ಲಿ ಬಿಎಲ್‌ಒ ಆಗಿ ಗುರುತಿನ ಚೀಟಿ ವಿತರಣೆ ಮಾಡಿರುವ ಜಿಲ್ಲಾ ಚುನಾವಣಾಧಿಕಾರಿ, ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಮತದಾರರ ಪಟ್ಟಿಯಲ್ಲಿ ಕೈಬಿಡಲಾಗಿರುವ ಹಾಗೂ ಸೇರ್ಪಡೆಯಾಗಿರುವ ಹೆಸರುಗಳ ಪಟ್ಟಿಪುನರ್‌ ಪರಿಶೀಲನೆ ಮಾಡಬೇಕು. ಪ್ರಕರಣವನ್ನು ರಾಜ್ಯ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು’ ಎಂದು ಮನವಿ ಸಲ್ಲಿಸಿದರು.

ಕಾಂಗ್ರೆಸ್‌ ವಾದ

- ಮತದಾರರ ಮಾಹಿತಿಗೆ ಕನ್ನ ಹಾಕಿದ ಹಗರಣಕ್ಕೆ ಸಿಎಂ ಬೊಮ್ಮಾಯಿ ಕಿಂಗ್‌ಪಿನ್‌
- ಅವರು ರಾಜೀನಾಮೆ ನೀಡಬೇಕು. ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕು
- ಚಿಲುಮೆ ಸಂಸ್ಥೆಗೆ ಬಿಜೆಪಿ ಮಾಜಿ ಶಾಸಕ ನಂದೀಶ್‌ ರೆಡ್ಡಿ .17.5 ಲಕ್ಷ ನೀಡಿದ್ದಾರೆ
- ಚಿಲುಮೆ ಸಂಸ್ಥೆಗೆ ದಾಳಿ ನಡೆದ ವೇಳೆ ಸಚಿವರೊಬ್ಬರ ಲೆಟರ್‌ಹೆಡ್‌, ಸೀಲ್‌ ಸಿಕ್ಕಿದೆ
- ಹೀಗಾಗಿ, ಹಗರಣದಲ್ಲಿ ಭಾಗಿಯಾದ ಎಲ್ಲರ ಮೇಲೂ ಕೇಸ್‌ ಹಾಕಿ ಬಂಧಿಸಬೇಕು

ವೋಟರ್‌ಗೇಟ್‌ ಹಗರಣ

ಅಮೆರಿಕದ ವಾಟರ್‌ ಗೇಟ್‌ ರೀತಿಯಲ್ಲೇ ಭಾರತದಲ್ಲಿ ‘ವೋಟರ್‌ ಗೇಟ್‌’ ಹಗರಣ ನಡೆದಿದೆ. ನ್ಯಾಯಾಂಗ ತನಿಖೆ ಬೇಡಿಕೆಗೆ ಸೂಕ್ತ ಸ್ಪಂದನೆ ನೀಡದಿದ್ದರೆ ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 
 

click me!