Yadgir Municipal Corporation Scam: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಖಾಸಗಿಯವರಿಗೆ ನೋಂದಣಿ: ಮೂವರು ಅರೆಸ್ಟ್!

Kannadaprabha News   | Kannada Prabha
Published : Jun 04, 2025, 12:59 PM ISTUpdated : Jun 04, 2025, 01:02 PM IST
Yadgir

ಸಾರಾಂಶ

ಯಾದಗಿರಿ ನಗರಸಭೆಯ ಇಬ್ಬರು ಮತ್ತು ಶಹಾಪುರ ನಗರಸಭೆಯ ಓರ್ವ ಸಿಬ್ಬಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ನೋಂದಣಿ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ. 

ಯಾದಗಿರಿ (ಜೂ.4): ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಅಸ್ತಿಯನ್ನು ಖಾಸಗಿಯವರಿಗೆ ಅನಧಿಕೃತವಾಗಿ ಮತ್ತು ಅಕ್ರಮವಾಗಿ ನೋಂದಣಿ ಮಾಡಿದ್ದಲ್ಲದೆ, ದಾಖಲೆಗಳನ್ನು ನಾಶಪಡಿಸಲು ಮುಂದಾಗಿದ್ದ ಇಲ್ಲಿನ ನಗರಸಭೆಯ ಇಬ್ಬರು ಹಾಗೂ ಶಹಾಪುರ ನಗರಸಭೆ ಓರ್ವ ಸಿಬ್ಬಂದಿಯನ್ನು ಬಂಧಿಸಿ, ನಗರ ಪೊಲೀಸ್‌ ಪ್ರಕರಣ ದಾಖಲಿಸಿದ ಘಟನೆ ಸೋಮವಾರ ನಡೆದಿದೆ.

ನಗರಸಭೆಯ ಕಂದಾಯ ನಿರೀಕ್ಷಕ ಮಾನಪ್ಪ ಬಡಿಗೇರ್, ಪ್ರಭಾರಿ ಮೈನೋದ್ದೀನ್ ಮೊಹ್ಮದ್ ಹಜರತ್‌ ಹಾಗೂ ಶಹಾಪುರ ನಗರಸಭೆಯಲ್ಲಿ ನೀರು ಸರಬರಾಜು ವಿಭಾಗದ ಮೇಲ್ವಿಚಾರಕರಾಗಿರುವ ಹಣಮಂತಪ್ಪ ಆಶನಾಳ ಎಂಬುವವರನ್ನು ಬಂಧಿಸಲಾಗಿದೆ.

ಘಟನೆ ವಿವರ :

ಯಾದಗಿರಿ ಸೀಮಾಂತರದ ಸರ್ವೆ ನಂ. 151 ರಲ್ಲಿನ ನಿವೇಶನ ಸಂಖ್ಯೆ 42ನ್ನು ಮಲ್ಲಮ್ಮ ರಾಮಣ್ಣ ಎಂಬುವವರ ಹೆಸರಿಗೆ ಮಾಡಿಕೊಟ್ಟಿದ್ದ ಈ ಮೂವರು, ರಜೆ ದಿನವಾದ ಭಾನುವಾರ ಸಂಜೆ 4ರ ಸುಮಾರಿಗೆ ನಗರಸಭೆ ಕಚೇರಿಗೆ ಬಂದು, ಅಲ್ಲಿದ್ದ ಕಾವಲುಗಾರ ತಿಪ್ಪಣ್ಣ ಎಂಬುವವನಿಗೆ ಬೆದರಿಸಿ ಕಚೇರಿ ಬೀಗ ತೆಗೆದುಕೊಂಡು ಕೋಣೆಗಳಿಗೆ ಹೋಗಿ ಹಲವಾರು ಕಡತಗಳನ್ನು ಪರಿಶೀಲಿಸಿ ಅಕ್ರಮ ಎಸಗಿದ್ದು ಸಿಸಿಟಿವಿ ಮೂಲಕ ಕಂಡು ಬಂದಿದೆ ಮತ್ತು ಈ ವೇಳೆ ಓರ್ವ ಸಾರ್ವಜನಿಕ ವ್ಯಕ್ತಿ ಅಲ್ಲಿರುವುದು ಕಾಣಿಸಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ಮಲ್ಲಮ್ಮ ಎಂಬುವವರಿಗೆ ನಿವೇಶನ ಅಕ್ರಮವಾಗಿ ನೋಂದಣಿ ಮಾಡಿಕೊಟ್ಟ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ನಡೆದು ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶವಾಗಿದೆ. ಈ ವಿಷಯ ತಿಳಿದ ಶಹಾಪುರ ನಗರಸಭೆ ಸಿಬ್ಬಂದಿ ಹಣಮಂತ ಇಲ್ಲಿನ ನಗರಸಭೆ ಸಿಬ್ಬಂದಿ ಮಾನಪ್ಪ ಮತ್ತು ಮೈನೋದ್ದಿನ್ ಎಂಬುವವರೊಂದಿಗೆ ರಜೆ ದಿನವಾದ ಭಾನುವಾರ ಅಕ್ರಮವಾಗಿ ನಗರಸಭೆ ಕಚೇರಿಗೆ ನುಗ್ಗಿ ಅಲ್ಲಿನ ದಾಖಲೆಗಳನ್ನು ಮರೆಮಾಚಿ ನಾಶಪಡಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆಂದು ಪೌರಾಯುಕ್ತ ಚವ್ಹಾಣ ದೂರಿನಲ್ಲಿ ವಿವರಿಸಿದ್ದಾರೆ.

ಆ ರೀತಿಯಾಗಿ ಸರ್ಕಾರಕ್ಕೂ ಮತ್ತು ಇಲಾಖೆಗೂ ಮೋಸ ಮಾಡಿರುವ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಆಶ್ರಯ ಯೋಜನೆ ನಿವೇಶನಗಳಿಗೆ ಸುಳ್ಳು ದಾಖಲೆ ಸೃಷ್ಟಿ :

ಯಾದಗಿರಿ ನಗರದ ಯಾದಗಿರಿ (ಅ) ಸರ್ವೆ ನಂ. 151 ರಲ್ಲಿಯ ಆಶ್ರಯ ಯೋಜನೆಯ ನಿವೇಶನಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣ ಆರೋಪ ಈ ಮೂವರ ಮೇಲಿದೆ. ಇದರ ದೂರಿಗೆ ಸಂಬಂಧಿಸಿದಂತೆ ಜಂಟಿ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಒಂದು ತಂಡ ರಚಿಸಲಾಗಿತ್ತು.

ಇದರಂತೆ, ತಂಡ ಸಲ್ಲಿಸಿದ ಸದರಿ ವರದಿಯಲ್ಲಿ ಸರ್ವೆ ನಂ. 151/1 ರ ಆಶ್ರಯ ಲೇಔಟ್‌ನಲ್ಲಿರುವ ಒಟ್ಟು 96 ನಿವೇಶನಗಳಲ್ಲಿ ಆಶ್ರಯ ನಿವೇಶನ ಹಂಚಿಕೆ ಪುಸ್ತಕ ಪರಿಶೀಲಿಸಿದಾಗ, ಒಟ್ಟು 45 ನಿವೇಶನಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಉಳಿದ ಒಟ್ಟು 51 ನಿವೇಶನಗಳನ್ನು ನಗರಸಭೆಯಿಂದ ಹಂಚಿಕೆ ಮಾಡದಿರುವುದು ಕಂಡು ಬಂದಿರುತ್ತದೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ . ಆದರೂ ಸಹ, ಕೆಲವೊಂದು ನಿವೇಶನಗಳಿಗೆ ಇ-ಆಸ್ತಿ ತಂತ್ರಾಂಶದ ಮೂಲಕ ನಮೂನೆ-3 ನೀಡಿರುವುದು ಕಂಡು ಬಂದಿರುತ್ತದೆ.

ಆದರೆ, ಸದರಿ ಕಡತಗಳನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಪ್ರಯುಕ್ತ ಸರ್ವೆ ನಂ. 151/1 ರ ಆಶ್ರಯ ಲೇಔಟ್‌ನಲ್ಲಿನ ಮೂಲ ಫಲಾನುಭವಿಗಳ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ, ಮೂಲ ಫಲಾನುಭವಿಗಳು ಅಥವಾ ಅನಧಿಕೃತ ಫಲಾನುಭವಿಗಳು ಇರುವ ಕುರಿತು ಸಮಗ್ರ ವರದಿಯನ್ನು ತಯಾರಿಸಿ ಸಲ್ಲಿಸುವುದು ಹಾಗೂ ಹಂಚಿಕೆಯಾಗದ ಕೆಲವೊಂದು ನಿವೇಶನಗಳಿಗೆ ಯಾವ ಆಧಾರದ ಮೇಲೆ ನಮೂನೆ-3 ಮತ್ತು ಪಿ.ಐ.ಡಿ. ಸಂಖ್ಯೆ ನೀಡಲಾಗಿರುತ್ತದೆ ಎಂಬುದರ ಕುರಿತು ಸಂಪೂರ್ಣ ವರದಿಯನ್ನು ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಇದರನ್ವಯ, ಪೌರಾಯುಕ್ತರು ವರದಿ ಸಲ್ಲಿಸಿ ದೂರು ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ