ಯಾದಗಿರಿ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಬರ ಪರಿಹಾರವನ್ನು ಬೆಳೆಸಾಲಕ್ಕೆ ಕಡಿತ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದು, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಕನ್ನಡಪ್ರಭ ಬುಧವಾರ ವರದಿ ಪ್ರಕಟಿಸಿದ್ದು, ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು ಇಂಥದ್ದೊಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಯಾದಗಿರಿ/ಹುಬ್ಬಳ್ಳಿ(ಮೇ.16): ಬರ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಕಡಿತ ಮಾಡುವ ಬ್ಯಾಂಕ್‌ಗಳ ಕ್ರಮಕ್ಕೆ ಸರ್ಕಾರ ಬ್ರೇಕ್ ಹಾಕುವ ಕೆಲಸ ಮಾಡಿದೆ. ಈ ರೀತಿ ಬರ ಪರಿಹಾರದ ಹಣವನ್ನು ಸಾಲಕ್ಕೆ ಕಡಿತ ಮಾಡುವಂಥ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಬುಧವಾರ ಪತ್ರ ಬರೆದು ಎಚ್ಚರಿಸಿದ್ದಾರೆ.
ಯಾದಗಿರಿ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಬರ ಪರಿಹಾರವನ್ನು ಬೆಳೆಸಾಲಕ್ಕೆ ಕಡಿತ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದು, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಕನ್ನಡಪ್ರಭ ಬುಧವಾರ ವರದಿ ಪ್ರಕಟಿಸಿದ್ದು, ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು ಇಂಥದ್ದೊಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬರ ಪರಿಹಾರ ಹಣ ರೈತರ ಸಾಲಕ್ಕೆ ಜಮೆ..!
ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಬರಪರಿಹಾರದ ಹಣವನ್ನು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ ಹಾಗೂ ಸಿದ್ದಾಪೂರ ಭಾಗದ ಹಲವು ರೈತರ ಬೆಳೆಸಾಲಕ್ಕೆ ಬ್ಯಾಂಕ್‌ಗಳು ಕಡಿತಗೊಳಿಸಿದ್ದವು. ರೈತರ ಉಳಿತಾಯ ಖಾತೆಯನ್ನು ಸ್ಥಗಿತಗೊಳಿಸಿ, ಪರಿಹಾರದ ಹಣವನ್ನು ಬ್ಯಾಂಕಿನ ಅಧಿಕಾರಿಗಳು ಸಾಲದ ಖಾತೆಗೆ ಜಮೆ ಮಾಡಿಕೊಂಡಿದ್ದರು. ಈ ಕುರಿತು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದೇ ರೀತಿ, ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಚಿಕ್ಕನರ್ತಿ, ಹಿರೇನರ್ತಿ, ಬೆನಕನಹಳ್ಳಿ ಸೇರಿ ಹಲವು ಗ್ರಾಮಗಳಲ್ಲೂ ಬರಪರಿಹಾರವನ್ನು ಬೆಳೆಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಗಂಭೀರವಾಗಿ ಪರಿಗಣನೆ:
ಸರ್ಕಾರದಿಂದ ಹಣವನ್ನು ರೈತರಿಗೆ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಆದರೆ ಬ್ಯಾಂಕ್ ಅಧಿಕಾರಿಗಳು ಪರಿಹಾರದ ಮೊತ್ತವನ್ನು ಸಾಲ ರೂಪದಲ್ಲಿ ಕಡಿತಗೊಳಿಸುತ್ತಿರುವುದಾಗಿ ರೈತರು ದೂರುತ್ತಿದ್ದಾರೆ. ಪ್ರಕೃತಿ ವಿಕೋಪದಡಿ ಸಂದಾಯವಾಗುವ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡುವಂತಿಲ್ಲವೆಂದು ಸರ್ಕಾರದ ಸ್ಪಷ್ಟ ನಿರ್ದೇಶನವಿದೆ. ಒಂದು ಪರಿಹಾರದ ಹಣವನ್ನು ಸಾಲಕ್ಕೆ ಕಡಿತ ಮಾಡಿದರೆ ಸರ್ಕಾರದ ನಿರ್ದೇಶನ ಉಲ್ಲಂಘಿಸಿದಂತಾಗುತ್ತದೆ. ಆಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಯಾದಗಿರಿ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.