
ಚಿತ್ರದುರ್ಗ (ಮೇ.13): ಚಳ್ಳಕೆರೆ ಹಾಗೂ ಹಿರಿಯೂರಿನಲ್ಲಿ ಶಾಸಕರಾಗಿ ಎರಡು ಬಾರಿ ಮಂತ್ರಿಗಳಾಗಿದ್ದ ಸಚಿವ ಸುಧಾಕರ್ ಅನಾರೋಗ್ಯದಿಂದ ಅಕಾಲಿಕ ಮರಣದಿಂದ ಪಂಚಭೂತಗಳಲ್ಲಿ ಲೀನವಾದರು.
ಸುಧಾಕರ್ ಬದುಕಿನ ಅಂತಿಮ ವಿದಾಯಕ್ಕೆ ಸರ್ಕಾರದ ಬಹುತೇಕ ಸಚಿವರು ಸೇರಿದಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಇಕ್ಕಟ್ಟಾದ ಪ್ರದೇಶದಲ್ಲಿರುವ ಜೈನ ರುದ್ರಭೂಮಿಯ ಅಂಗಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಈ ನಡುವೆ ಅವರ ಸಾವು, ಅನಾರೋಗ್ಯದ ಕುರಿತು ಚರ್ಚೆಗಳು ನಡೆದಿದೆ.
ಚಳ್ಳಕೆರೆ ಪಟ್ಟಣದ ಸಚಿವರ ನಿವಾಸದ ಸಮೀಪ, ಬೋರ್‌ವೆಲ್ ಬಳಿ ಕೆಲವು ವಿಚಿತ್ರ ವಸ್ತುಗಳು ಪತ್ತೆಯಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಮ್ರದ ಪತ್ರ, ನಿಂಬೆಹಣ್ಣು, ಮಾಂಸದ ತುಂಡು ಸೇರಿದಂತೆ ಕೆಲವು ವಾಮಾಚಾರಕ್ಕೆ ಬಳಸಲಾಗುವ ವಸ್ತುಗಳು ಕಂಡುಬಂದಿರುವ ವಿಡಿಯೋ ವೈರಲ್ ಆಗಿದೆ.
ಈ ವಸ್ತುಗಳನ್ನು ಮೊದಲಿಗೆ ಮನೆ ಕೆಲಸಗಾರ ಚಂದ್ರು ಗಮನಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಅವನು ಅವುಗಳನ್ನು ಹೊರತೆಗೆದು ಜನರಿಗೆ ತೋರಿಸಿದ ವಿಡಿಯೋ ಈಗ ಹಿರಿಯೂರು ಹಾಗೂ ಚಳ್ಳಕೆರೆ ಭಾಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 'ಇದು ಸಾಮಾನ್ಯ ಪೂಜೆ ಅಲ್ಲ… ಯಾರೋ ಉದ್ದೇಶಪೂರ್ವಕವಾಗಿ ವಾಮಾಚಾರ ಮಾಡಿದ್ದಾರೆ' ಎಂದು ಕೆಲವರು ಹೇಳುತ್ತಿದ್ದರೆ, 'ಇದು ಕೇವಲ ಮೂಢನಂಬಿಕೆ… ಸಾವಿಗೆ ಇದನ್ನು ಜೋಡಿಸುವುದು ಸರಿಯಲ್ಲ'ಎಂದು ಇನ್ನೂ ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ತಮಗಾಗದ ಶತ್ರುಗಳ ವಿರುದ್ಧ ಸೇಡು ತೀರಿಸಲು ನಿಂಬೆಹಣ್ಣು, ತಾಮ್ರದ ಪತ್ರ, ರಕ್ತ ಅಥವಾ ಮಾಂಸದ ತುಂಡುಗಳನ್ನು ಬಳಸಿಕೊಂಡು ನಿಗೂಢ ಶಕ್ತಿಗಳ ಆರಾಧನೆ ನಡೆಸುತ್ತಾರೆ. ಇದೀಗ ಪತ್ತೆಯಾಗಿರುವ ವಸ್ತುಗಳನ್ನ ನೋಡಿದರೆ ಮೃತ ಸುಧಾಕರ್ ವಿರುದ್ಧವೂ ವಾಮಾಚಾರ ನಡೆದಿತ್ತಾ ಎಂಬ ಅನುಮಾನ ಮೂಡಿಸಿದೆ. ಆದರೆ ವೈದ್ಯಕೀಯವಾಗಿ ನೋಡಿದರೆ, ಸಚಿವ ಸುಧಾಕರ್ ಅವರು ಅನಾರೋಗ್ಯದಿಂದಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಈಗಾಗಲೇ ಹೊರಬಂದಿದೆ. ಆದರೂ ಮನೆ ಬಳಿ ಪತ್ತೆಯಾದ ವಸ್ತುಗಳು ಜನರಲ್ಲಿ ಕುತೂಹಲ, ಭಯ ಮತ್ತು ಸಂಶಯ ಮೂಡಿಸಿರುವುದು ಸತ್ಯ.
ಸದ್ಯ ವಾಮಾಚಾರದ ವಿಡಿಯೋ ವೈರಲ್ ಆಗಿದ್ದು, ಚಿತ್ರದುರ್ಗ ಜಿಲ್ಲೆಯ ರಾಜಕೀಯ ವಲಯದಲ್ಲೂ ಚರ್ಚೆ ಜೋರಾಗಿದೆ. ನಿಜವಾಗಿಯೂ ವಾಮಾಚಾರ ನಡೆದಿತ್ತಾ..? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ