
ಬೆಂಗಳೂರು : ಕಳೆದ ಐದು ತಿಂಗಳಿಂದ ಹಂಗಾಮಿ ಸಭಾಪತಿ ನೇತೃತ್ವದಲ್ಲಿ ನಡೆಯುತ್ತಿರುವ ವಿಧಾನಪರಿಷತ್‌ಗೆ ಈವರೆಗೆ ಕಾಯಂ ಸಭಾಪತಿ ಆಯ್ಕೆ ಮಾಡದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲೂ ಮತ್ತೆ ಪ್ರತಿಧ್ವನಿಸುವ ಸಾಧ್ಯತೆ ಇದೆ.
ಹಿಂದಿನ ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಹಂಗಾಮಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿಅವರು ಕಾರ್ಯನಿರ್ವಹಿಸುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ದೀರ್ಘ ಚರ್ಚೆಗೆ ಕಾರಣವಾಗಿತ್ತು. ಇದು ಸಭಾಪತಿ ಹೊರಟ್ಟಿಅವರ ಬೇಸರಕ್ಕೂ ಕಾರಣವಾಗಿತ್ತು. ಅಂತಿಮವಾಗಿ ಕಾನೂನು ಸಚಿವ ಕೃಷ್ಣ ಬೈರೇಗೌಡ ಸಹ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ವಿಧಾನಪರಿಷತ್ತಿಗೆ ನೂತನ ಕಾಯಂ ಸಭಾಪತಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಬೇಕು. ಸರ್ಕಾರ ಮನಸ್ಸು ಮಾಡಿದರೆ ಬೆಳಗಾವಿ ಅಧಿವೇಶನದ ವೇಳೆ ಒಂದು ದಿನ ಸಭಾಪತಿ ಆಯ್ಕೆ ನಡೆಸಿ ಅಧಿವೇಶನ ನಡೆಸಬಹುದಾಗಿದೆ. ಆದರೆ ಅಂತಹ ಇಚ್ಛಾಶಕ್ತಿಯನ್ನು ಸರ್ಕಾರ ತೋರುತ್ತಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ.
75 ಸದಸ್ಯರು ಇರುವ ವಿಧಾನಪರಿಷತ್‌ನಲ್ಲಿ ಸದ್ಯ ಸಭಾಪತಿ ಹೊರತುಪಡಿಸಿದರೆ ಕಾಂಗ್ರೆಸ್ 40 ಸದಸ್ಯರು, ಜೆಡಿಎಸ್ 14, ಬಿಜೆಪಿ 18 ಸದಸ್ಯರನ್ನು ಹೊಂದಿವೆ. ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಪರಿಷತ್ ಸದಸ್ಯರಾಗಿದ್ದ ವಿ.ಎಸ್.ಉಗ್ರಪ್ಪ ಈಗ ಸಂಸದರಾಗಿ ಚುನಾಯಿತರಾಗಿರುವುದರಿಂದ ಕಾಂಗ್ರೆಸ್‌ನ ಸಂಖ್ಯೆ 39ಕ್ಕೆ ಇಳಿದಂತಾಗಿದೆ. ಹೀಗಿದ್ದರೂ ಸಮ್ಮಿಶ್ರ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಸಭಾಪತಿಯಾಗಿ ಆಯ್ಕೆ ಮಾಡಬಹುದಾಗಿದೆ.
ಸಭಾಪತಿ ಸ್ಥಾನಕ್ಕೆ ಯಾರನ್ನು ಬೇಕಾದರೂ ಆಯ್ಕೆ ಮಾಡಬಹುದಾದರೂ ಹಿರಿಯರು ಹಾಗೂ ಅನುಭವಿಗಳನ್ನು ಮಾತ್ರ ಆಯ್ಕೆ ಮಾಡುವುದು ಸಂಪ್ರದಾಯವಾಗಿದೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಚ್.ಎಂ.ರೇವಣ್ಣ ಹಿರಿಯ ಸದಸ್ಯರೆಂದು ಹೇಳಬಹುದು. ಜೆಡಿಎಸ್ ಪಕ್ಷದಲ್ಲಿ ಪುಟ್ಟಣ್ಣ, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ ಹಿರಿಯರಾಗಿದ್ದಾರೆ. ಈ ಎಲ್ಲ ಸದಸ್ಯರು ಉಪ ಸಭಾಪತಿಗಳಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದ ನಾಲ್ವರು ಸದಸ್ಯರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹಾಗಾಗಿ ಇವರು ಸಭಾಪತಿ ಸ್ಥಾನಕ್ಕೆ ಸುಲಭವಾಗಿ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ. ಇನ್ನು ಜೆಡಿಎಸ್‌ನ ಮೂವರು ಸದಸ್ಯರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ಪರಿಷತ್‌ನ ಉಪಸಭಾಪತಿಯಾಗಿರುವುದರಿಂದ ಸಹಜವಾಗಿ ಹೆಚ್ಚು ಸ್ಥಾನ ಹೊಂದಿರುವ ತಮ್ಮ ಪಕ್ಷಕ್ಕೆ ಸಭಾಪತಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದರೆ ಅನಿವಾರ್ಯವಾಗಿ ಜೆಡಿಎಸ್ ಬೆಂಬಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರ ಪೈಕಿ ಒಬ್ಬರನ್ನು ಸಭಾಪತಿ ಮಾಡಬೇಕಾಗುತ್ತದೆ.
ಪರಿಷತ್‌ನಲ್ಲಿ ಹೆಚ್ಚಿನ ಸ್ಥಾನ ಹೊಂದಿರುವ ಕಾಂಗ್ರೆಸ್‌ಗೆ ಸಭಾಪತಿ ಸ್ಥಾನ ನೀಡಬೇಕು ಎಂಬುದು ಕಾಂಗ್ರೆಸ್‌ನ ನಿಲುವು. ಇದಕ್ಕೆ ಪೂರಕವಾಗಿ ಸಭಾಪತಿ ಸ್ಥಾನಕ್ಕೆ ಎಸ್.ಆರ್. ಪಾಟೀಲ್ ಅವರನ್ನು ಆಯ್ಕೆ ಮಾಡಬೇಕೆಂಬುದು ಸಿದ್ದರಾಮಯ್ಯ ಅವರ ಬಲವಾದ ಒತ್ತಾಯವಿದೆ. ಇದೇ ವೇಳೆ ಜೆಡಿಎಸ್ ಕೂಡ ಸಭಾಪತಿ ಹುದ್ದೆ ತಮಗೆ ಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದೆ ಇಟ್ಟಿದೆ. ಈ ಚೌಕಾಸಿಯು ಬೆಳಗಾವಿ ಅಧಿವೇಶನ ಆರಂಭವಾಗುವ ವೇಳೆಗೆ ಬಗೆಹರಿಯಬೇಕಿದೆ.
ಹಿರಿಯರಿಗೆ ಮಂತ್ರಿಗಿರಿ ಮೇಲೆ ಕಣ್ಣು
ಸಭಾಪತಿ ಸ್ಥಾನಕ್ಕೆ ಹಿರಿಯರು, ಅನುಭವಿಗಳನ್ನು ಮಾತ್ರ ಆರಿಸುವುದು ಸಂಪ್ರದಾಯ. ಕಾಂಗ್ರೆಸ್‌ನಲ್ಲಿ ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಚ್.ಎಂ.ರೇವಣ್ಣ, ಜೆಡಿಎಸ್‌ನಲ್ಲಿ ಪುಟ್ಟಣ್ಣ, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ ಹಿರಿಯರಾಗಿದ್ದಾರೆ. ಆದರೆ ಈ ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ