ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುತ್ತೇನೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುತೂಹಲ ಮೂಡಿಸಿದ್ದಾರೆ.
ಮೈಸೂರು (ಫೆ.11): ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ (Chamundeshwari Constituency) ನಾನೇ ಬರುತ್ತೇನೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಕುತೂಹಲ ಮೂಡಿಸಿದ್ದಾರೆ. ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ (GT Devegowda) ಅವರು ಪಕ್ಷ ತೊರೆಯುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾರು ಬರುತ್ತಾರೆ ಎಂದು ಗುರುವಾರ ಪ್ರಶ್ನಿಸಿದಾಗ, ನಾನೇ ಬರುತ್ತೇನೆಂದು ಹೇಳಿ ಅಚ್ಚರಿ ಮೂಡಿಸಿದರು.
ಅನಿತಾ ಸ್ಪರ್ಧೆ ಬೇಡವೆಂದು ಚರ್ಚೆ: ಇದೇ ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ (Anita Kumaraswamy) ಸ್ಪರ್ಧಿಸುವುದು ಬೇಡ ಎಂದು ಚರ್ಚಿಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು. ಕುಟುಂಬ ರಾಜಕಾರಣದ ಹೆಸರಿನಲ್ಲಿ ನಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇಂಥ ಅಪಪ್ರಚಾರದಿಂದ ದೂರವಾಗಲು ನಾನು-ಅನಿತಾ ಮುಂದಿನ ವಿಧಾನಸಭೆ ಚುನಾವಣೆಯಲ್ಲಿನ ಸ್ಪರ್ಧೆ ಕುರಿತು ಚರ್ಚೆ ಮಾಡಿದ್ದೇವೆ.
ಈ ಬಗ್ಗೆ ಅಂತಿಮ ತೀರ್ಮಾನವನ್ನು ಚುನಾವಣೆ ಘೋಷಣೆಯಾದ ನಂತರವೇ ಮಾಡುತ್ತೇವೆ ಎಂದು ಹೇಳಿದರು. ಪುತ್ರ ನಿಖಿಲ್‌ನನ್ನು (Nikhil Kumaraswamy) ರಾಜಕಾರಣಕ್ಕೆ ಕರೆ ತರಲು ನನಗೆ ಇಷ್ಟವಿರಲಿಲ್ಲ. ಮುಖಂಡರ ಒತ್ತಡದ ಮೇರೆಗೆ ಕರೆ ತಂದೆ. ಕುಟುಂಬ ರಾಜಕಾರಣದ ವಿಚಾರದಲ್ಲಿ ನಾನು ಈಗ ಕೇವಲ ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾನು-ನನ್ನ ಸೋದರರು ಬೇರೆಯಾಗಿದ್ದೇವೆ. ಹೀಗಾಗಿ ನಾನು, ನನ್ನ ಪತ್ನಿ, ನನ್ನ ಮಗನ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
HD Kumaraswamy: ಕನ್ನಡ ಸಂಘಟನೆಗಳು ಚುನಾವಣೆಗೆ ನಿಂತರೆ ಜೆಡಿಎಸ್ ಬೆಂಬಲ
ಸಿದ್ದು, ಡಿಕೆಶಿ ಇಬ್ಬರಿಗೂ ಸಿಎಂ ಆಗುವ ಹುಚ್ಚು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಬ್ಬರಿಗೂ ಮುಖ್ಯಮಂತ್ರಿಯಾಗುವ ಹುಚ್ಚು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೂಕ್ಷ್ಮ ವಿಚಾರಗಳಲ್ಲಿ ಕಾಂಗ್ರೆಸ್ (Congress) ಪಕ್ಷ ರಾಜಕೀಯ (Politics) ಮಾಡುವುದನ್ನು ಬಿಡಬೇಕು. ಇಬ್ಬರಿಗೂ ಓಟು ಪಡೆಯುವ ಹಾಗೂ ಸಿಎಂ ಆಗುವ ಹುಚ್ಚುತನ ಹತ್ತಿಕೊಂಡಿದೆ. ಸಮಾಜಕ್ಕೆ ಒಳ್ಳೆಯದಾಗಲಿ ಎನ್ನುವುದು ಅವರಿಗಿಲ್ಲ. ಬಿಜೆಪಿಯವರಿಗೆ ಕೂಡ ಮತ ಪಡೆಯುವ ಹುಚ್ಚು ಬಂದಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಮಾತು ಹೇಳುತ್ತಾರೆ. ಸಿದ್ದರಾಮಯ್ಯ ಒಂದು ಮಾತು ಹೇಳಿದೆ, ಡಿ.ಕೆ.ಶಿವಕುಮಾರ್ ಒಂದು ಮಾತು ಹೇಳುತ್ತಾರೆ. ಇವರಲ್ಲಿ ಒಬ್ಬರಿಗೆ ಮುಸ್ಲಿಮರ(Muslim) ಮತಗಳನ್ನು ಪಡೆಯುವ ಉಮೇದು. ಮತ್ತೊಬ್ಬರಿಗೆ ಮುಸ್ಲಿಮರ ಪರ ಮಾತಾಡಿದರೆ ಏನು ಹೆಚ್ಚು ಕಡಿಮೆಯಗುತ್ತದೋ ಎಂಬ ಭಯ ಎಂದು ವಾಗ್ದಾಳಿ ನಡೆಸಿದರು.
ಮಹದಾಯಿ ಬಗ್ಗೆ ಎರಡು ನಾಲಿಗೆ: ಮಹದಾಯಿ (Mahadayi) ನದಿ ನೀರಿನ ವಿವಾದ ಬಗ್ಗೆ ಕಾಂಗ್ರೆಸ್ ಎರಡು ನಾಲಿಗೆ ನೀತಿ ಅನುಸರಿಸುತ್ತಿದೆ. ಮಹದಾಯಿ ಬಗ್ಗೆ ಆ ಪಕ್ಷದ ನಾಯಕ ಸತೀಶ್ ಜಾರಕಿಹೊಳಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ ಗೋವಾ ಚುನಾವಣೆ ಪ್ರಣಾಳಿಕೆಯಲ್ಲಿ ಯಾವುದೇ ಕಾರಣಕ್ಕೂ ಮಹದಾಯಿ ನೀರನ್ನು ಗೋವಾದಿಂದ ಬಿಟ್ಟುಕೊಡಲ್ಲ ಎಂದು ಹೇಳಿಕೊಂಡಿದ್ದಾರೆ. ಇದು ಅವರ ದ್ವಿಮುಖ ನೀತಿ ತೋರಿಸುತ್ತದೆ ಎಂದು ಹೇಳಿದರು.
Karnataka JDS ಅನಿತಾ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಅಧಿಕೃತ ಘೋಷಣೆ
ಕಾಂಗ್ರೆಸ್ ತೊರೆಯಲು ಮುಂದಾಗಿರುವ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ (CM Ibrahim) ಅವರು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಇಬ್ರಾಹಿಂ ಮೊದಲಿನಿಂದಲೂ ಜೆಡಿಎಸ್ ಜತೆ ಗುರುತಿಸಿಕೊಂಡವರು. ನಡುವೆ ಕೆಲ ವ್ಯತ್ಯಾಸಗಳಾಗಿದ್ದವು. ಈಗ ಮತ್ತೆ ಜೆಡಿಎಸ್ ಜತೆ ಸೇರಿ ಮತ್ತೊಂದು ರಂಗ ರಚನೆ ಬಗ್ಗೆ ಅವರು ಮುಂದಾದರೆ ಸ್ವಾಗತ ಮಾಡುತ್ತೇನೆ ಎಂದರು.