ಮಲೆ ಮಹದೇಶ್ವರ ಬೆಟ್ಟದಲ್ಲೂ ಈಗ ವನ್ಯಜೀವಿ ಸಫಾರಿ ಆರಂಭ! ಬುಕಿಂಗ್ ಹೇಗೆ? ಫೀ ಎಷ್ಟು? ಇಲ್ಲಿದೆ ಮಾಹಿತಿ

By Kannadaprabha NewsFirst Published Dec 3, 2023, 5:01 AM IST
Highlights

ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಶನಿವಾರದಿಂದ ಸಫಾರಿ ಆರಂಭವಾಗಿದೆ. ಪಿಜಿ ಪಾಳ್ಯ ವನ್ಯಜೀವಿ ವಲಯದ ಸಫಾರಿಗೆ ಲೊಕ್ಕನಹಳ್ಳಿ ಬಳಿ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.

ಚಾಮರಾಜನಗರ (ಡಿ.3) :  ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಶನಿವಾರದಿಂದ ಸಫಾರಿ ಆರಂಭವಾಗಿದೆ. ಪಿಜಿ ಪಾಳ್ಯ ವನ್ಯಜೀವಿ ವಲಯದ ಸಫಾರಿಗೆ ಲೊಕ್ಕನಹಳ್ಳಿ ಬಳಿ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಶಾಸಕ ಮಂಜುನಾಥ್‌, ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಸಫಾರಿ ಆರಂಭವಾಗಿರುವುದರಿಂದ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಅವಕಾಶವಾಗಲಿದೆ. ಕೊಳ್ಳೇಗಾಲ ಪಟ್ಟಣದಿಂದ ಸಫಾರಿ ಪ್ರದೇಶಕ್ಕೆ 24 ಕಿ.ಮೀ ದೂರವಿದೆ. ಮೈಸೂರಿನಿಂದ ಪಿಜಿ ಪಾಳ್ಯಕ್ಕೆ 90 ಕಿ.ಮೀ ಅಂತರವಿರುವುದರಿಂದ ಪ್ರವಾಸಿಗರು ಸಫಾರಿಗೆ ಬರಲು ಅನುಕೂಲವಾಗಲಿದೆ ಎಂದರು.

ಮದುವೆ ಭಾಗ್ಯಕ್ಕೆ ಮಲೆ ಮಹದೇಶ್ವರನ ಮೊರೆ ಹೋದ ಬ್ರಹ್ಮಚಾರಿಗಳು!

ಹನೂರು ಭಾಗದಲ್ಲಿ ಗುಂಡಾಲ್ ಜಲಾಶಯ, ಇನ್ನಿತರ ಪ್ರವಾಸಿ ತಾಣಗಳನ್ನು ಪ್ರವಾಸಿಗರು ವೀಕ್ಷಿಸಬಹುದಾಗಿದೆ. ಈ ಭಾಗದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ. ಹೀಗಾಗಿ ಸಫಾರಿ ಆರಂಭವಾಗಿರುವುದು ಉತ್ತಮ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಡು ಉಳಿಯಬೇಕು. ಪರಿಸರ ಸ್ನೇಹಿ ಪ್ರವಾಸೋದ್ಯಮವು ಅಭಿವೃದ್ದಿಯಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆರಂಭಿಸಿರುವ ಸಫಾರಿ ಯಶಸ್ವಿಯಾಗಿ ಮುಂದುವರೆಯಲೆಂದು ಶಾಸಕ ಎಂ.ಆರ್. ಮಂಜುನಾಥ್ ಹಾರೈಸಿದರು.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9481995509 ಮತ್ತು 9008581495 ಸಂಪರ್ಕಿಸುವಂತೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್ ಕುಮಾರ್ ಹೇಳಿದ್ದಾರೆ.

ಎಲ್ಲಿ ಸಫಾರಿ

ಮಲೆ ಮಹದೇಶ್ವರ ವನ್ಯಜೀವಿ ವಿಭಾಗವು ಕೊಳ್ಳೇಗಾಲ ಮತ್ತು ಹನೂರು ತಾಲೂಕಿನಲ್ಲಿ 949.469 ಚದರ ಕಿ.ಮೀ ಗಳಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕರಡಿ, ತೆರಕರಡಿ, ತೋಳ, ನರಿ ಮುಂತಾದ ಪ್ರಾಣಿಗಳು ಸಫಾರಿ ಕೈಗೊಳ್ಳುವ ಪ್ರದೇಶದಲ್ಲಿ ವಾಸಿಸುತ್ತಿವೆ. ಪಿಜಿ ಪಾಳ್ಯ ವನ್ಯಜಿವಿ ವಲಯದ ಲೊಕ್ಕನಹಳ್ಳಿ ಕಳ್ಳಬೇಟೆ ತಡೆ ಶಿಬಿರದ ಮಾರ್ಗದ ಒಟ್ಟು 18 ಕಿ.ಮೀ ವ್ಯಾಪ್ತಿಯಲ್ಲಿ ಸಫಾರಿ ಕೈಗೊಳ್ಳಲಾಗುತ್ತದೆ ಎಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಾಣಾಧಿಕಾರಿ ಡಾ. ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಸಮಯ, ಶುಲ್ಕ

ಬೆಳಿಗ್ಗೆ 6 ರಿಂದ 9ರ ವರೆಗೆ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ಸಫಾರಿಗೆ ಸಮಯ ನಿಗದಿಪಡಿಸಲಾಗಿದೆ. ವಯಸ್ಕರಿಗೆ 400 ರು., ಮಕ್ಕಳಿಗೆ 200 ರು., ಸಫಾರಿ ಶುಲ್ಕ ಇದೆ.

click me!