ಸಚಿವ ಮಲ್ಲಿಕಾರ್ಜುನ ವಿರುದ್ಧ ವನ್ಯಜೀವಿ ಪೋಷಣೆ ಕೇಸ್ ರದ್ದು

By Ravi Janekal  |  First Published Oct 20, 2023, 6:33 AM IST

ದಾವಣಗೆರೆ ತೋಟದ ಮನೆಯಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಪೋಷಣೆ ಮಾಡುತ್ತಿದ್ದ ಆರೋಪ ಸಂಬಂಧ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌, ಸಹೋದರ ಎಸ್.ಎಸ್. ಗಣೇಶ್‌ ಸೇರಿದಂತೆ ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.


ಬೆಂಗಳೂರು (ಅ.20): ದಾವಣಗೆರೆ ತೋಟದ ಮನೆಯಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಪೋಷಣೆ ಮಾಡುತ್ತಿದ್ದ ಆರೋಪ ಸಂಬಂಧ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌, ಸಹೋದರ ಎಸ್.ಎಸ್. ಗಣೇಶ್‌ ಸೇರಿದಂತೆ ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌, ಅವರ ಸಹೋದರ ಎಸ್.ಎಸ್.ಗಣೇಶ್‌, ಸಂಪಣ್ಣ ಮುತಾಲಿಕ್ ಹಾಗೂ ಜಿ.ಎಂ. ಕರಿಬಸಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

Latest Videos

undefined

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್‌ ತೇಜೋವಧೆ ಯತ್ನ; ಸಿಇಎನ್‌ ಠಾಣೆಗೆ ದೂರು

ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಕಾಯ್ದೆಯಡಿ ನಿಯಮಗಳನ್ನು ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಜತೆಗೆ, ಅರಣ್ಯಾಧಿಕಾರಿಗಳ ದೂರಿನ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದು ತನಿಖೆಗೆ ಆದೇಶಿಸುವಲ್ಲಿ ಲೋಪವೆಸಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ದಾವಣಗೆರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್ (ವಿಚಾರಣೆಗೆ ಅಂಗೀಕರಿಸಿರುವುದು) ತೆಗೆದುಕೊಂಡಿರುವುದು ಗೊಂದಲಮಯವಾಗಿದೆ. ನಿಯಮಗಳ ಪಾಲನೆಯಲ್ಲಿ ಸರಿಪಡಿಸಲಾಗದಷ್ಟು ದೋಷಗಳು ನಡೆದಿವೆ. ಆದ್ದರಿಂದ ಪ್ರಕರಣದ ವಿಚಾರಣೆ ಮುಂದುವರಿಕೆಗೆ ಅನುಮತಿ ನೀಡಿದರೆ, ಅದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ:

ಸಿಸಿಬಿ ಪೊಲೀಸರು 2022ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಸೆಂಥಿಲ್ ಎಂಬುವರಿಂದ ಜಿಂಕೆ ಚರ್ಮ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ತನಿಖೆ ಮುಂದುವರೆಸಿದ್ದ ಪೊಲೀಸರು, ಆರೋಪಿ ಸೆಂಥಿಲ್ ಅವರು ಜಿಂಕೆ ಚರ್ಮವನ್ನು ತಂದ ಸ್ಥಳವನ್ನು ಹುಡುಕಿಕೊಂಡು ಬಂದಾಗ ದಾವಣಗೆರೆ ಮಲ್ಲಿಕಾರ್ಜುನ್ ತೋಟದ ಮನೆಯನ್ನು ಪರಿಶೀಲಿಸಿದ್ದರು. ಆಗ ಅಲ್ಲಿ ಹತ್ತು ಕೃಷ್ಣ ಮೃಗಗಳು, ಏಳು ಚುಕ್ಕಿ ಜಿಂಕೆಗಳು, ಏಳು ಕಾಡು ಹಂದಿಗಳು, ಮೂರು ಮುಂಗಸಿಗಳು ಹಾಗೂ ಎರಡು ನರಿಗಳನ್ನು ಕಂಡುಬಂದಿದ್ದು, ಅವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದರು.

ದಲಿತ ವಿರೋಧಿ ಹೇಳಿಕೆ: ನಟ ಉಪೇಂದ್ರ ವಿರುದ್ಧ ಎಫ್‌ಐಆರ್‌: ಸಚಿವ ಮಲ್ಲಿಕಾರ್ಜುನ ವಿರುದ್ಧ ಕೇವಲ ಎನ್‌ಸಿಆರ್

ಈ ರೀತಿ ಕಾಡು ಪ್ರಾಣಿಗಳನ್ನು ಸಾಕುವ ಮೂಲಕ ವನ್ಯಜೀವ ಸಂರಕ್ಷಣಾ ಕಾಯ್ದೆಯಡಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಅರ್ಜಿದಾರರ ವಿರುದ್ಧ ದಾವಣಗೆರೆ ಅರಣ್ಯ ವಲಯ ಅಧಿಕಾರಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

click me!