Wild Anilmals Death: ಕಪ್ಪತಗುಡ್ಡದಲ್ಲಿ ಕಾಡು ಪ್ರಾಣಿಗಳ ನಿಗೂಢ ಸಾವು; ಅರಣ್ಯ ಇಲಾಖೆಗೆ ಮಾಹಿತಿಯೇ ಇಲ್ಲ!

Kannadaprabha News, Ravi Janekal |   | Kannada Prabha
Published : Jul 14, 2025, 08:25 AM ISTUpdated : Jul 14, 2025, 09:55 AM IST
kappatagudda

ಸಾರಾಂಶ

ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದಲ್ಲಿ ಕಾಡುಬೆಕ್ಕುಗಳು ಸೇರಿದಂತೆ ಹಲವು ಪ್ರಾಣಿಗಳು ನಿಗೂಢವಾಗಿ ಸಾವನ್ನಪ್ಪಿವೆ. ರಾಸಾಯನಿಕ ಗೊಬ್ಬರ ಅಥವಾ ಇಲಿ ಪಾಷಾಣ ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಗೆ ಈ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಗದಗ (ಜುಲೈ.14): ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದ ಅಂಚಿನ ಗ್ರಾಮಗಳ ಸಮೀಪದಲ್ಲಿ ಕಾಡು ಪ್ರಾಣಿಗಳು ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ ವರದಿಯಾಗಿದೆ. ಈಗಾಗಲೇ ಹುಲಿ, ಚಿರತೆ ಸಾವುಗಳಿಂದ ಆತಂಕಕ್ಕೆ ಒಳಗಾಗಿದ್ದ ವನ್ಯಜೀವಿ, ಪರಿಸರ ಪ್ರೇಮಿಗಳಲ್ಲಿ ಗದಗ ಜಿಲ್ಲೆಯ ಘಟನೆ ಮತ್ತಷ್ಟು ದುಗುಡ ಹೆಚ್ಚಿಸಿದೆ.

ಕಳೆದ ಒಂದು ವಾರದಲ್ಲಿ ಎರಡಕ್ಕೂ ಹೆಚ್ಚು ಕಾಡು ಬೆಕ್ಕುಗಳು ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ವರವಿ ಗ್ರಾಮದ ವ್ಯಾಪ್ತಿಯಲ್ಲಿ ಸತ್ತು ಬಿದ್ದಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಕಾಡು ಬೆಕ್ಕುಗಳ ಜೊತೆಗೆ ಗೂಬೆ, ಹಾವು ಸಹ ಸತ್ತು ಬಿದ್ದಿವೆ.

ಕಾರಣ ನಿಗೂಢ:

ಕಪ್ಪತಗುಡ್ಡದ ಸಮೀಪದಲ್ಲಿರುವ ಗ್ರಾಮಗಳ ಕೃಷಿಕರು ಬಳಸುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳಿಂದಾಗಿ ಈ ರೀತಿ ಕಾಡು ಬೆಕ್ಕುಗಳ ಸಾವು ಸಂಭವಿಸುತ್ತಿವೆ ಎಂದು ಕೆಲವರು ಪ್ರತಿಪಾದಿಸುತ್ತಾರೆ. ಇನ್ನು ಕೆಲವರು ಜಿಲ್ಲೆಯಲ್ಲಿ ಮೆಣಸಿನಕಾಯಿ ಬಿತ್ತುವ ರೈತರು, ಇಲಿ, ಹೆಗ್ಗಣಗಳಿಂದ ಬೀಜವನ್ನು ರಕ್ಷಿಸಲು ತಮ್ಮ ಜಮೀನುಗಳಲ್ಲಿ ಇಲಿ ಪಾಷಾಣ ಇಡುತ್ತಾರೆ. ಅದನ್ನು ತಿಂದು ಸಾವನ್ನಪ್ಪಿದ ಇಲಿ ಹೆಗ್ಗಣಗಳನ್ನು ಈ ಕಾಡು ಬೆಕ್ಕುಗಳು, ಗೂಬೆಗಳು ತಿಂದು ಅವೂ ಕೂಡ ಸಾವನ್ನಪ್ಪುತ್ತಿವೆ ಎನ್ನುತ್ತಾರೆ. ಆದರೆ ಈ ಬಗ್ಗೆ ಯಾವುದೇ ನಿಖರತೆ ಮಾತ್ರ ಇಲ್ಲ. ಸಾವನ್ನಪ್ಪಿದ ಕಾಡು ಪ್ರಾಣಿಗಳ ಮರಣೋತ್ತರ ಪರೀಕ್ಷೆಗಳು ನಡೆದಿಲ್ಲ.

ಇಲಿಗಳಿಗೆ ಇಡುವ ವಿಷದಲ್ಲಿ ಆರ್ಸೆನಿಕ್ ಮತ್ತು ಥಾಲಿಯಮ್ ಎನ್ನುವ ವಿಷಕಾರಿ ಅಂಶಗಳಿರುತ್ತವೆ. ಈ ಅಂಶಗಳು ಅಧಿಕ ಪ್ರಮಾಣದಲ್ಲಿ ಕಾಡು ಬೆಕ್ಕುಗಳು, ಗೂಬೆ ಮತ್ತು ಹಾವುಗಳ ದೇಹ ಸೇರಿಕೊಂಡರೆ, ಆಂತರಿಕ ರಕ್ತಸ್ರಾವವಾಗಿ ಸಾವನ್ನಪ್ಪುತ್ತವೆ.

-ಮಂಜುನಾಥ ನಾಯಕ, ಜೀವ ವೈವಿಧ್ಯ ಸಂಶೋಧಕ

ಅರಣ್ಯ ಇಲಾಖೆಗೆ ಮಾಹಿತಿಯೇ ಇಲ್ಲ!

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಕಪ್ಪತಗುಡ್ಡ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡುಬೆಕ್ಕುಗಳು ಸಾವನ್ನಪ್ಪಿರುವುದರ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಕಾಡು ಬೆಕ್ಕುಗಳು ನಿಗೂಢವಾಗಿ ಸಾವನ್ನಪ್ಪಿದ್ದರೆ, ಅವುಗಳ ಮೃತದೇಹಗಳಾದರೂ ಸಿಗಬೇಕಿತ್ತು. ಆದರೆ ಇಲಾಖೆಗೆ ನಿಗೂಢವಾಗಿ ಪ್ರಾಣಿಗಳು ಸಾವನ್ನಪ್ಪುತ್ತಿರುವುದರ ಬಗ್ಗೆ ಮಾಹಿತಿಯನ್ನು ಗ್ರಾಮಸ್ಥರು ನೀಡದೇ ಇರುವುದು ಹಲವು ಆಶ್ಚರ್ಯಕ್ಕೆ ಕಾರಣವಾಗಿದೆ.

ಕಪ್ಪತಗುಡ್ಡದ ಅಂಚಿನ ಗ್ರಾಮಗಳಲ್ಲಿ ಕಾಡುಬೆಕ್ಕುಗಳು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಆದರೆ ನಿರ್ದಿಷ್ಟವಾಗಿ ಎಲ್ಲಿ ಮೃತಪಟ್ಟಿವೆ. ಅವುಗಳ ಕಳೇಬರ ಎಲ್ಲಿವೆ ಎನ್ನುವ ಮಾಹಿತಿ ಇಲ್ಲ. ವನ್ಯಜೀವಿಗಳ ಕಳೇಬರ ಸಿಕ್ಕ ನಂತರ ಮರಣೋತ್ತರ ಪರೀಕ್ಷೆ ನಡೆಸಿದ ನಂತರವೇ, ಸಾವಿಗೆ ನಿರ್ದಿಷ್ಟ ಕಾರಣ ತಿಳಿಯುತ್ತದೆ.

-ಸಂತೋಷಕುಮಾರ ಕೆಂಚಪ್ಪನವರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗದಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ