
ಬೆಂಗಳೂರು(ನ.07): ಉದ್ಯೋಗಿಯು ಉದ್ಯೋಗದಾತರಿಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಆತನ ಪರವಾಗಿ ಪತ್ನಿ ಅಥವಾ ಮಕ್ಕಳು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಪತ್ನಿಯ ಮನವಿ ಮೇರೆಗೆ ತನ್ನ ರಾಜೀನಾಮೆ ಪತ್ರವನ್ನು ಅಂಗೀಕರಿಸದಿರಲು ಉದ್ಯೋಗದಾತ ಸಂಸ್ಥೆ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಮದ್ದೂರಿನ ಡಿ.ವೆಂಕಟೇಶ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಸ್ವತಃ ನೌಕರನೇ ಉದ್ಯೋಗದಲ್ಲಿರಲು ಸಿದ್ಧರಿಲ್ಲದೆ ರಾಜೀನಾಮೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಆತನ ಪತ್ನಿ ಅಥವಾ ಮಕ್ಕಳು ಉದ್ಯೋಗಿ ಸೇವೆಯಲ್ಲಿ ಮುಂದುವರಿಯಲು ಹೇಗೆ ಕಾರಣವಾಗುತ್ತಾರೆ? ರಾಜೀನಾಮೆ ನೀಡುವುದು ಉದ್ಯೋಗಿಯ ಸ್ವಯಂ ನಿರ್ಧಾರವಾಗಿರುತ್ತದೆ. ರಾಜೀನಾಮೆ ಸಲ್ಲಿಸುವ ಮೂಲಕ ಆತ ಸೇವೆಯನ್ನು ತೊರೆಯಲು ಪ್ರಯತ್ನಿಸುತ್ತಾನೆ. ಹೀಗಾಗಿ, ಉದ್ಯೋಗದಾತ ಸಂಸ್ಥೆಯು ಅಂಗೀಕರಿಸುವ ಮೊದಲೇ ರಾಜೀನಾಮೆಯನ್ನು ಸ್ವತಃ ಉದ್ಯೋಗಿ ಹಿಂಪಡೆಯಬೇಕು. ಅದನ್ನು ಹೊರತುಪಡಿಸಿ ಪತ್ನಿ ಮತ್ತು ಮಕ್ಕಳು ಉದ್ಯೋಗಿಯ ಪರವಾಗಿ ರಾಜೀನಾಮೆ ಹಿಂಪಡೆಯಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ವಿವಾಹ ನಂತರ ಮತಾಂತರವಾದ್ರೆ ವೈವಾಹಿಕ ಹಕ್ಕಿಲ್ಲ: ಮದ್ವೆಯೂ ಅಸಿಂಧು ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್
ಪ್ರಕರಣದ ಹಿನ್ನೆಲೆ:
ಮಂಡ್ಯದ ಮದ್ದೂರಿನ ಡಿ. ವೆಂಕಟೇಶ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉದ್ಯೋಗಿಯಾಗಿದ್ದು, 2021ರ ನ.11ರಂದು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕರಿಸುವ ನಿರ್ಣಯವನ್ನು ಸಂಘ ಕೈಗೊಂಡಿತ್ತು. ಬಳಿಕ ಉದ್ಯೋಗಿಯ ಪತ್ನಿ ರಾಜೀನಾಮೆ ಪತ್ರ ಹಿಂಪಡೆಯಲು ಅನುಮತಿ ಕೋರಿ ಉದ್ಯೋಗ ಸಂಸ್ಥೆಗೆ ಪತ್ರ ಸಲ್ಲಿಸಿದ್ದರು. ಅದನ್ನು ಆಧರಿಸಿ ರಾಜೀನಾಮೆ ಅಂಗೀಕರಿಸದಿರಲು ಸಂಘ ನಿರ್ಣಯ ತೆಗೆದುಕೊಂಡಿತ್ತು.
ಅದನ್ನು ಪ್ರಶ್ನಿಸಿ ಸಂಘದ ಮತ್ತೋರ್ವ ಉದ್ಯೋಗಿ ಹೈಕೋರ್ಟ್‌ಗೆ ತರಕಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ನ್ಯಾಯಪೀಠ, ವೆಂಕಟೇಶ್ ಅವರ ರಾಜೀನಾಮೆ ಅಂಗೀಕರಿಸದಿರಲು ಸಂಘ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಿ 2022ರ ಅ.13ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ವೆಂಕಟೇಶ್ ವಿಭಾಗೀಯ ಪೀಠದ ಮೊರೆ ಹೋಗಿದ್ದರು.
ಇದೀಗ ಮೇಲ್ಮನವಿಯನ್ನು ವಜಾಗೊಳಿಸಿರುವ ವಿಭಾಗೀಯ ಪೀಠ, ಉದ್ಯೋಗಿಯೇ ರಾಜೀನಾಮೆ ಪತ್ರ ಹಿಂಪಡೆಯಬೇಕು. ಹಿಂಪಡೆಯುವ ಮನವಿಯು ಉದ್ಯೋಗಿಯಿಂದಲೇ ಸಲ್ಲಿಕೆಯಾಗಬೇಕು. ಈ ಪ್ರಕರಣದಲ್ಲಿ ನೌಕರನ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಆತನ ಪತ್ನಿ ಕೋರಿದ್ದಾರೆ. ಉದ್ಯೋಗಿಯ ಪತ್ನಿಯು ಅಂತಹ ಹಕ್ಕು ಹೊಂದಿರುವುದನ್ನು ದೃಢೀಕರಿಸುವ ಯಾವುದೇ ನಿಯಮವನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಇಂತಹ ಪರಿಕಲ್ಪನೆಯು ಸೇವಾ ಕಾನೂನಿಗೆ ವಿರುದ್ಧವಾಗಿದೆ ಎಂದು ಆದೇಶಿಸಿ, ಏಕ ಸದಸ್ಯ ಪೀಠದ ತೀರ್ಪನ್ನು ಪುರಸ್ಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ