ವಿಚಾರಣೆಗೆ ಅಮೆರಿಕದಿಂದ ಬರುವ ಪತಿಗೆ ಪತ್ನಿ ಹಣ ಕೋಡಬೇಕಿಲ್ಲ: ಹೈಕೋರ್ಟ್‌

By Kannadaprabha News  |  First Published Jun 21, 2023, 8:46 AM IST

ವಿಚ್ಛೇದನ ಮಂಜೂರಾತಿಗೆ ಕೋರಿದ ಪ್ರಕರಣದಲ್ಲಿ ಪಾಟಿ ಸವಾಲು ಎದುರಿಸಲು ಅಮೆರಿಕಾದಿಂದ ಬರಬೇಕಿರುವ ಪತಿಯ ಪ್ರಯಾಣದ ವೆಚ್ಚ 1.65 ಲಕ್ಷ ರು. ಭರಿಸುವಂತೆ ಪತ್ನಿಗೆ ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.


ಬೆಂಗಳೂರು (ಜೂ.21): ವಿಚ್ಛೇದನ ಮಂಜೂರಾತಿಗೆ ಕೋರಿದ ಪ್ರಕರಣದಲ್ಲಿ ಪಾಟಿ ಸವಾಲು ಎದುರಿಸಲು ಅಮೆರಿಕಾದಿಂದ ಬರಬೇಕಿರುವ ಪತಿಯ ಪ್ರಯಾಣದ ವೆಚ್ಚ 1.65 ಲಕ್ಷ ರು. ಭರಿಸುವಂತೆ ಪತ್ನಿಗೆ ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ದಂಪತಿಗೆ ಅನುಕೂಲವಿರುವಂತೆ ಪಾಟಿ ಸವಾಲು ವ್ಯವಸ್ಥೆ ಮಾಡಬೇಕು. ಮುಂದಿನ ನಾಲ್ಕು ತಿಂಗಳಲ್ಲಿ ವಿಚ್ಛೇದನ ಕೋರಿಕೆ ಅರ್ಜಿ ಇತ್ಯರ್ಥಪಡಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಗೀತಾ ಮತ್ತು ಸೂರ್ಯ (ಇಬ್ಬರ ಹೆಸರು ಬದಲಿಸಲಾಗಿದೆ) 2014ರ ಜೂ.15ರಂದು ಮದುವೆಯಾಗಿದ್ದರು. ಇಬ್ಬರ ನಡುವೆ ಸಂಬಂಧ ಹಳಸಿದ ಪರಿಣಾಮ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇದನ ಕೋರಿ ಸೂರ್ಯ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಸದ್ಯ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಅವರನ್ನು ಪಾಟಿ ಸವಾಲಿಗೆ ಒಳಪಡಿಸಬೇಕೆಂಬ ಗೀತಾ ಮನವಿಗೆ ನಗರದ 6ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ ಒಪ್ಪಿತ್ತು. ಆದರೆ, ಸೂರ್ಯ ಅಮೆರಿಕಾದಿಂದ ಬಂದು ಹೋಗಲು ತಗಲುವ ಪ್ರಯಾಣ ವೆಚ್ಚ 1.65 ಲಕ್ಷ ರು. ಭರಿಸುವಂತೆ ಗೀತಾಗೆ 2022ರ ನ.16ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಗೀತಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

Tap to resize

Latest Videos

ಸತೀಶ್‌ ಜಾರಕಿಹೊಳಿ ಹೇಳಿಕೆ ಹಾಸ್ಯಾಸ್ಪದ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ವಿಚಾರಣೆ ನಡೆಸಿದ ನ್ಯಾಯಪೀಠ, ಗೀತಾಗೆ ಮಾಸಿಕ 20 ಸಾವಿರ ರು. ಜೀವನಾಂಶ ಪಾವತಿಸಲು ಸೂರ್ಯ ಅವರಿಗೆ ಕೌಟುಂಬಿಕ ನ್ಯಾಯಾಲಯವೇ ಆದೇಶಿಸಿದೆ. ಅದರರ್ಥ ಗೀತಾ ಜೀವನಾಧಾರಕ್ಕೆ ಇತರೆ ಯಾವುದೇ ಆದಾಯವಿಲ್ಲ ಎಂಬುದು ತಿಳಿಯುತ್ತದೆ. ಇಂತಹ ಸಂದರ್ಭದಲ್ಲಿ ಅಮೆರಿಕಾದಲ್ಲಿ ಉದ್ಯೋಗ ಮಾಡುತ್ತಾ ಆದಾಯ ಗಳಿಸುತ್ತಿರುವ ಸೂರ್ಯ ಅವರು ನಗರದ ಕೌಟುಂಬಿಕ ನ್ಯಾಯಾಲಯದ ಪಾಟಿ ಸವಾಲಿಗೆ ಬಂದು ಹೋಗಲು ಪ್ರಯಾಣ ವೆಚ್ಚ ಭರಿಸುವಂತೆ ಗೀತಾಗೆ ಆದೇಶಿಸಿರುವುದಲ್ಲಿ ಯಾವುದೇ ತರ್ಕವಿಲ್ಲ. ಗೀತಾ ಇಷ್ಟುದೊಡ್ಡ ಮೊತ್ತ ಭರಿಸಲು ಹೇಗೆ ಸಮರ್ಥರಿದ್ದಾರೆ ಎಂಬುದನ್ನು ಕೌಟುಂಬಿಕ ನ್ಯಾಯಾಲಯ ಯೋಚಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ವಿವಾಹ ವಿಚ್ಛೇದನದಂತಹ ಗಂಭೀರ ಪ್ರಕರಣದಲ್ಲಿ ಪತಿಯನ್ನು ಪಾಟಿ ಸವಾಲಿಗೆ ಗುರಿಪಡಿಸುವುದು ಗೀತಾ ಅವರ ಹಕ್ಕು ಆಗಿರುತ್ತದೆ. ಭಾರ ಹೊರಲು ಸಾಧ್ಯವಾಗದ ಪಕ್ಷಗಾರರ ಮೇಲೆ ನ್ಯಾಯಾಲಯ ಭಾರ ಹೊರಿಸಬಾರದು. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ಕಾನೂನು ಬಾಹಿರವಾಗಿದೆ. ಸ್ವತಃ ಸೂರ್ಯ ವಿಚ್ಛೇದನ ಕೋರಿದ್ದಾರೆ. ಅಮೆರಿಕಾದಿಂದ ಬಂದು ಹೋಗಲು ಪ್ರಯಾಣ ವೆಚ್ಚ ಭರಿಸಲಾಗದ ಬಡತನದಲ್ಲಿ ಅವರಿಲ್ಲ ಎಂದು ಹೈಕೋರ್ಟ್‌ ನುಡಿದಿದೆ.

ಘನ ತ್ಯಾಜ್ಯ ಕಂಪನಿ ಹಣ ದುರ್ಬಳಕೆ: ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

ಸೂರ್ಯ ಅವರಿಗೆ ಬಹಳ ಅನುಕೂಲಕಾರಿಯಾಗಿರುವ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪಾಟಿ ಸವಾಲು ಮಾಡಲು ಗೀತಾ ಒಪ್ಪಿಲ್ಲ ಎನ್ನುವ ಪರಿಸ್ಥಿತಿ ಸಹ ಇಲ್ಲ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲಾಗುತ್ತಿದೆ. ಗೀತಾ ಮತ್ತು ಸೂರ್ಯಗೆ ಅನುಕೂಲವಿರುವಂತೆ ಪಾಟಿ ಸವಾಲು ವ್ಯವಸ್ಥೆಯನ್ನು ಕೌಟುಂಬಿಕ ನ್ಯಾಯಾಲಯ ಏರ್ಪಡಿಸಬೇಕು. ಮುಂದಿನ ನಾಲ್ಕು ತಿಂಗಳಲ್ಲಿ ವಿಚ್ಛೇದನ ಕೋರಿಕೆ ಅರ್ಜಿಯನ್ನು ಇತ್ಯರ್ಥಪಡಿಸಬೇಕು ಎಂದು ನಿರ್ದೇಶಿಸಿದೆ.

click me!