ರಾಜಕೀಯ ಲಾಭಕ್ಕೆ ದರ್ಶನ್‌ರನ್ನು ಬಳಸಿಕೊಂಡ ಸುಮಲತಾ ಇವಾಗ ಮೌನವಾಗಿದ್ದಾರೆ ಯಾಕೆ? ಎಂದು ನಟ ಚೇತನ್ ಅಹಿಂಸಾ ಪ್ರಶ್ನಿಸಿದ್ದಾರೆ.
ಬೆಂಗಳೂರು (ಜೂ.24): ಒಂದು ಕಾಲದಲ್ಲಿ "ದರ್ಶನ್ ನನ್ನ ಸ್ವಂತ ಮಗ" ಎಂದಿದ್ದ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೌನ ವಹಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದೀಗ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದು, ರಾಜಕೀಯ ಲಾಭಕ್ಕೆ ದರ್ಶನ್‌ರನ್ನು ಬಳಸಿಕೊಂಡ ಸುಮಲತಾ ಇವಾಗ ಮೌನವಾಗಿದ್ದಾರೆ ಯಾಕೆ? ಎಂದಿದ್ದಾರೆ.
ದರ್ಶನ್ ನನ್ನನ್ನು ‘ಮದರ್ ಇಂಡಿಯಾ’ ಎಂದೇ ಕರೆಯೋದು ಎಂದು ಈ ಹಿಂದೆ ಸುಮಲತಾ ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು. ದರ್ಶನ್ ನನ್ನ ಹಿರಿಯ ಮಗ ಎಂದೇ ಹೇಳಿಕೊಂಡಿದ್ದರು. ಆದರೆ ಇಂದು ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದರ್ಶನ್ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಾತ್ರವಲ್ಲ ಎಲ್ಲೂ ಸುಮಲತಾ ಅವರು ಬಹಿರಂಗವಾಗಿ ಕಾಣಿಸಿಕೊಂಡೇ ಇಲ್ಲ.
ಇನ್ನು ಇತ್ತೀಚೆಗೆ ಚೇತನ್ ಅವರು, ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದಲ್ಲ. ಸಹಾಯಕ ಛಾಯಾಗ್ರಾಹರಾಗಿದ್ದರು ಎಂದು ಹೇಳಿದ್ದು, ಈ ಬಗ್ಗೆ ಟ್ವೀಟ್ ನಲ್ಲಿ ಬರೆದುಕೊಂಡಿದ್ದರು. ದರ್ಶನ್ ಶ್ರೀನಿವಾಸ್ ಅವರು ಛಾಯಾಗ್ರಾಹಕ ಸಹಾಯಕರಾಗಿ ಕೆಲಸ ಮಾಡಿರುವ 'ಜನುಮದ ಜೋಡಿ' (1996) ಚಿತ್ರದ ಶೀರ್ಷಿಕೆ ಕಾರ್ಡ್ ಇಲ್ಲಿದೆ. ಇದೇ ಸಾಕ್ಷಿ ನಟ ದರ್ಶನ್ ಲೈಟ್ ಬಾಯ್ ಅಲ್ಲ ಚಲನಚಿತ್ರೋದ್ಯಮದ ಉದ್ಯೋಗ ಶ್ರೇಣಿಯಲ್ಲಿ, ಲೈಟ್ ಬಾಯ್ ಕೆಳ ಭಾಗದಲ್ಲಿದ್ದಾನೆ ಮತ್ತು ಕ್ಯಾಮೆರಾ ಸಹಾಯಕ ಎಲ್ಲೋ ಮಧ್ಯದಲ್ಲಿದ್ದಾನೆ ಎಂದು ಬರೆದುಕೊಂಡು, ಜನುಮದ ಜೋಡಿ ಶೀರ್ಷಿಕೆ ಕಾರ್ಡ್ ಫೋಟವನ್ನು ಕೂಡ ಚೇತನ್ ಹಂಚಿಕೊಂಡು, ಚಿತ್ರದ ಛಾಯಾಗ್ರಹಕ ಬಿ.ಸಿ. ಗೌರಿಶಂಕರ್ ಅವರಿಗೆ ದರ್ಶನ್ ತೂಗುದೀಪ ಅವರು ಸಹಾಯಕರಾಗಿ ಕೆಲಸ ಮಾಡಿದ್ದರು ಎಂದು ಹೇಳಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ವಿಕೃತವಾಗಿ ಕೊಲೆ ಮಾಡಿರುವ ಆರೋಪದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರಲ್ಲಿ ಜೈಲು ಕಂಬಿ ಎಣಿಸುತ್ತಿದೆ. ಆದ್ರೆ ದರ್ಶನ್ ಬಳಗದಲ್ಲಿ ಆಪ್ತರಾಗಿ ಗುರುತಿಸಿಕೊಂಡಿರುವ ಯಾರೂ ಕೂಡ ಈವರೆಗೆ ತುಟಿಕ್ ಪಿಟಿಕ್ ಅನ್ನದೆ ಅಂತರ ಕಾಯ್ದುಕೊಂಡಿದ್ದಾರೆ.