ಬೆಂಗಳೂರಿನಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದ 65 ಮರಗಳು ಧರೆಗುರುಳಿದ್ದು, 202 ಮರದ ರೆಂಬೆಗಳು ಮುರಿದು ಬಿದ್ದಿವೆ. ಮಳೆಯಿಂದಾಗಿ ತಮಿಳುನಾಡು ಮೂಲದ ಮಗುವೊಂದು ಮೃತಪಟ್ಟಿದ್ದು, ಕುಟುಂಬಕ್ಕೆ ಪರಿಹಾರ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಬೆಂಗಳೂರು (ಮಾ.24) : ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಅಬ್ಬರಿಸಿದ ಮಳೆ-ಗಾಳಿಯಿಂದ ಸುಮಾರು 65 ಮರಗಳು ಧರೆಗುರುಳಿವೆ. 202 ಮರದ ರೆಂಬೆ-ಕೊಂಬೆ ಮುರಿದು ಬಿದ್ದಿದ್ದು, ಇವುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಶನಿವಾರ ಬೆಂಗಳೂರಿನ ಯಲಹಂಕ, ಮಹದೇವಪುರ, ದಾಸರಹಳ್ಳಿ ಹಾಗೂ ಬೆಂಗಳೂರಿನ ಪೂರ್ವ ಭಾಗದಲ್ಲಿ ಭಾರೀ ಮಳೆ ಸುರಿದು ಜನಜೀವನವನ್ನು ಅಸ್ತ ವ್ಯಸ್ತಗೊಳಿಸಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕೋಗಿಲು ಕ್ರಾಸ್ ಬಳಿ ಭಾರೀ ಪ್ರಮಾಣ ನೀರು ನಿಂತುಕೊಂಡು ವಾಹನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಜತೆಗೆ, ವೀರಣ್ಣನಪಾಳ್ಯ, ಜೋಗಪ್ಪ ಲೇಔಟ್, ಮಹದೇವಪುರದ ಸಜ್ಜಾಪುರ ಮುಖ್ಯ ರಸ್ತೆ, ಔಟರ್ ರಿಂಗ್ ರೋಡ್, ಇಬ್ಬಲು ಜಂಕ್ಷನ್ ಹಾಗೂ ಪೂರ್ವ ವಲಯದ ನಾಗವಾರದಲ್ಲಿ ನೀರು ನಿಂತು ಉಂಟಾಗಿದ್ದ ಸಮಸ್ಯೆಯನ್ನು ಬಿಬಿಎಂಪಿ ಪರಿಹಾರ ಮಾಡಿದೆ.
250ಕ್ಕೂ ಅಧಿಕ ಮರ ಹಾಗೂ ರಂಬೆ ಧರೆಗೆ:
ಒಂದೇ ದಿನದ ಮಳೆಗೆ 65 ಮರಗಳು ಸಂಪೂರ್ಣವಾಗಿ ಬುಡ ಮೇಲಾಗಿ ಧರೆಗುರುಳಿವೆ, 202 ಮರದ ರೆಂಬೆ-ಕೊಂಬೆ ಬಿದ್ದಿವೆ. ಈ ಪೈಕಿ 62 ಮರ ಹಾಗೂ 177 ಮರದ ರೆಂಬೆಕೊಂಬೆ ತೆರವುಗೊಳಿಸಲಾಗಿದೆ. ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಸ್ಥಳದಲ್ಲಿ ಮರ ಹಾಗೂ ರಂಬೆಕೊಂಬೆಗಳನ್ನು ಆದ್ಯತೆಯ ಮೇರೆಗೆ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತ ಮಗುವಿನ ಕುಟುಂಬಕ್ಕೆ ಪರಿಹಾರ
ಶನಿವಾರ ಮರದ ಕೊಂಬೆ ಬಿದ್ದು ಮೃತಪಟ್ಟ ತಮಿಳುನಾಡು ಮೂಲದ ಮಗುವಿನ ಕುಟುಂಬಕ್ಕೆ ಬಿಬಿಎಂಪಿಯಿಂದ ಪರಿಹಾರ ನೀಡಲು ತೀರ್ಮಾನಿಸಲಾಗಿದ್ದು, ಸೋಮವಾರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರ್ಚಲ್ಲಿ 24 ತಾಸಿನಲ್ಲಿ ಬಿದ್ದ 2ನೇ ಹೆಚ್ಚಿನ ಮಳೆ
ಶನಿವಾರ ಯಲಹಂಕ ವಾಯುನೆಲೆಯಲ್ಲಿ ಬರೋಬ್ಬರಿ 6 ಸೆ.ಮೀ ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಈವರೆಗೆ ಮಾರ್ಚ್ ತಿಂಗಳಿನ 24 ಗಂಟೆಯಲ್ಲಿ ಬಿದ್ದ ಎರಡನೇ ಅತಿ ಹೆಚ್ಚಿನ ಪ್ರಮಾಣ ಮಳೆಯಾಗಿದೆ.
ಇದನ್ನೂ ಓದಿ: ಬೆಂಗಳೂರು ಮಳೆ ಒಂದು ಮಗು ಸಾವು: ಮಳೆ ಅವಾಂತರಕ್ಕೆ ಬಿಬಿಎಂಪಿ ಸಹಾಯವಾಣಿ 1533ಗೆ ಕರೆ ಮಾಡಿ!
ಬೆಂಗಳೂರಿನ ಇತಿಹಾಸದಲ್ಲಿ 1981ರ ಮಾ.28 ರಂದು 6.1 ಸೆಂ.ಮೀ ಮಳೆಯಾಗಿರುವುದು ಈವರೆಗಿನ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ. ಅದನ್ನು ಹೊರತು ಪಡಿಸಿದರೆ ಶನಿವಾರ ಯಲಹಂಕ ವಾಯುನೆಲೆಯಲ್ಲಿ ದಾಖಲಾಗಿರುವ ಮಳೆಯ ಪ್ರಮಾಣ ಎರಡನೇ ಅತಿ ಹೆಚ್ಚಿನ ಮಳೆಯಾಗಿದೆ.
ಕಳೆದ 10 ವರ್ಷದಲ್ಲಿ ಬೆಂಗಳೂರಿನಲ್ಲಿ ಇಷ್ಟೊಂದು ಪ್ರಮಾಣದ ಮಳೆ ಬಿದ್ದ ಇತಿಹಾಸವಿಲ್ಲ. 2017ರ ಮಾ.17ರಂದು 3.8 ಸೆಂ.ಮೀ, 2017ರ ಮಾ.8ರಂದು 3.6 ಸೆಂ.ಮೀ. 20215ರ ಮಾ.3ರಂದು 2.2 ಸೆಂ.ಮೀ, 2020ರ ಮಾ.24ರಂದು 1.4 ಸೆಂ.ಮೀ ಮಳೆಯಾಗಿತ್ತು. ಉಳಿದ ವರ್ಷದಲ್ಲಿ ಒಂದು ಸೆಂ.ಮೀ.ಗೂ ಕಡಿಮೆ ಮಳೆ ದಾಖಲಾಗಿದೆ.
ಶನಿವಾರ ಮರ ಹಾಗೂ ರೆಂಬೆ-ಕೊಂಬೆ ಬಿದ್ದ ವಿವರ
ವಲಯಮರರೆಂಬೆ-ಕೊಂಬೆ
ಒಟ್ಟು65202