ಕಾವೇರಿ ಹೋರಾಟದಿಂದ ಜೆಡಿಎಸ್‌ ದೂರ; ರೈತರ ಪರವಾಗಿ ಧ್ವನಿ ಎತ್ತದ ಮಣ್ಣಿನ ಮಕ್ಕಳು!

By Kannadaprabha News  |  First Published Aug 25, 2023, 8:14 PM IST

ಜೆಡಿಎಸ್‌ ಹಿಂದಿನಿಂದಲೂ ರೈತರ ಪರವಾದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸರ್ಕಾರದ ವಿರುದ್ಧ ತೊಡೆತಟ್ಟುತ್ತಿತ್ತು. ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡರು ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ರೈತ ಪರವಾದ ನಿಲುವು, ಹೋರಾಟಗಳಿಂದಲೇ ರಾಜಕೀಯ ಬೆಳವಣಿಗೆ ಸಾಧಿಸಿದವರು. ಅಂತಹವರು ಈ ಬಾರಿಯ ಕಾವೇರಿ ಹೋರಾಟದಲ್ಲಿ ರೈತರ ಪರ ಧ್ವನಿ ಎತ್ತಲೇ ಇಲ್ಲ!


- ಮಂಡ್ಯ ಮಂಜುನಾಥ

ಮಂಡ್ಯ (ಆ.25):  ನೀರಿನ ಸಂಕಷ್ಟಪರಿಸ್ಥಿತಿಯ ನಡುವೆ ತಮಿಳುನಾಡಿಗೆ ನೀರು ಹರಿಸುತ್ತಿದ್ದ ರಾಜ್ಯ ಸರ್ಕಾರದ ವಿರುದ್ಧ ಸಟೆದು ನಿಲ್ಲಬೇಕಿದ್ದ ಜೆಡಿಎಸ್‌ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ರೈತರ ಪರವಾಗಿ ಧ್ವನಿ ಏರಿಸಿ ನಿಲ್ಲಬೇಕಾದ ದಳಪತಿಗಳು ಮೌನಕ್ಕೆ ಶರಣಾದರು. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳನ್ನು ಪ್ರತಿರೋಧಿಸಬಹುದಾದ ಅವಕಾಶ ದೊರಕಿದ್ದರೂ ಅತ್ತ ಆಸಕ್ತಿ ವಹಿಸುತ್ತಿಲ್ಲ. ಸೋಲಿನ ಹತಾಶೆ ಇದಕ್ಕೆ ಕಾರಣ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.

Tap to resize

Latest Videos

ಜೆಡಿಎಸ್‌ ಹಿಂದಿನಿಂದಲೂ ರೈತರ ಪರವಾದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸರ್ಕಾರದ ವಿರುದ್ಧ ತೊಡೆತಟ್ಟುತ್ತಿತ್ತು. ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡರು ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ರೈತ ಪರವಾದ ನಿಲುವು, ಹೋರಾಟಗಳಿಂದಲೇ ರಾಜಕೀಯ ಬೆಳವಣಿಗೆ ಸಾಧಿಸಿದವರು. ಅಂತಹವರು ಈ ಬಾರಿಯ ಕಾವೇರಿ ಹೋರಾಟದಲ್ಲಿ ರೈತರ ಪರ ಧ್ವನಿ ಎತ್ತಲೇ ಇಲ್ಲ. 2023ರ ಸೋಲು ದಳಪತಿಗಳ ದೃತಿಗೆಡಿಸುವಂತೆ ಮಾಡಿದೆಯೇ ಎಂಬ ಪ್ರಶ್ನೆಯೂ ಮೂಡಿದೆ.

 

ಡಿಕೆ ಬ್ರದರ್ಸ್‌ ವಿರುದ್ಧ ನೈಸ್‌ ಅಕ್ರಮದ ದಾಖಲೆ ನಾಳೆ ರಿಲೀಸ್‌: ಎಚ್‌ಡಿಕೆ

ಜಿಲ್ಲೆಯೊಳಗೆ ಜೆಡಿಎಸ್‌-ಕಾಂಗ್ರೆಸ್‌ ಪ್ರಬಲ ಸಾಂಪ್ರದಾಯಿಕ ಎದುರಾಳಿಗಳಾಗಿದ್ದಾರೆ. ಈಗಲೂ ಅದೇ ಪರಿಸ್ಥಿತಿ ಇದೆ. ಕಾವೇರಿ ಹೋರಾಟದಿಂದ ಜೆಡಿಎಸ್‌ ದೂರ ಉಳಿದಿರುವ ಅವಕಾಶವನ್ನು ಬಿಜೆಪಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲಾರಂಭಿಸಿದೆ.

ಮುನಿಸು ಪ್ರದರ್ಶನ:

ಮಂಡ್ಯದಲ್ಲಿ ಕಾವೇರಿ ಚಳವಳಿ ನಡೆಸಿ ಜನರನ್ನು ಸಂಘಟಿಸುವ ಪ್ರಯತ್ನಕ್ಕಿಳಿದಿದೆ. ಇದೆಲ್ಲದರ ನಡುವೆ ಜೆಡಿಎಸ್‌ನ ಮಾಜಿ ಶಾಸಕರು ಬಹಿರಂಗವಾಗಿ ಹೊರಗೆ ಬಂದು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ. ದಳಪತಿಗಳೆನಿಸಿದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಕೂಡ ರೈತರ ಪರವಾಗಿ ನಾವಿದ್ದೇವೆ ಎಂದೂ ಹೇಳುತ್ತಿಲ್ಲ. ಜಿಲ್ಲೆಯ ಜನರ ತೀರ್ಪಿನ ಬಗ್ಗೆ ಮುನಿಸು ಪ್ರದರ್ಶಿಸುತ್ತಿರುವಂತೆ ಕಂಡುಬರುತ್ತಿದ್ದಾರೆ.

ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾಂಗ್ರೆಸ್‌ ಸರ್ಕಾರದ ನಿಲುವನ್ನು ಜೆಡಿಎಸ್‌ ಮಾಜಿ ಶಾಸಕರು ಖಂಡಿಸುವ ಗೋಜಿಗೆ ಹೋಗಲೇ ಇಲ್ಲ. ಕಾರ್ಯಕರ್ತರ ಸಂಘಟನೆ ಪ್ರಬಲವಾಗಿದ್ದರೂ ರೈತರನ್ನು ಜೊತೆಗೂಡಿಸಿಕೊಂಡು ಹೋರಾಟಕ್ಕಿಳಿಯುವ ಆಸಕ್ತಿಯನ್ನು ಸ್ಥಳೀಯ ನಾಯಕರು ತೋರ್ಪಡಿಸುತ್ತಿಲ್ಲ. ಚುನಾವಣಾ ಸೋಲು ಅವರನ್ನು ಕಂಗೆಡಿಸಿದೆ. ಬಹಿರಂಗವಾಗಿ ಜನರೆದುರು ಬರುವ ಧೈರ್ಯ ಮಾಡದೆ ತೆರೆಯ ಮರೆಗೆ ಸರಿದಿದ್ದಾರೆ. ಈ ಬೆಳವಣಿಗೆ ಕಾರ್ಯಕರ್ತರಲ್ಲೂ ಬೇಸರವನ್ನು ತರಿಸಿದೆ.

ಮಂಡ್ಯ ಕಡೆ ತಿರುಗಿ ನೋಡಿಲ್ಲ

ಹಾಸನ ಒಂದು ಕಣ್ಣಾದರೆ, ಮಂಡ್ಯ ಮತ್ತೊಂದು ಕಣ್ಣು ಎಂದು ಹೇಳುವ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡರು(HD Devegowda) ಮತ್ತು ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರೂ ಕೂಡ ಚುನಾವಣಾ ಸೋಲಿನ ನಂತರ ಮಂಡ್ಯದತ್ತ ಮುಖ ಮಾಡುತ್ತಿಲ್ಲ. ಸೋಲುಂಡಿರುವ ಮಾಜಿ ಶಾಸಕರಿಗೆ ಮತ್ತೆ ಆತ್ಮಸ್ಥೈರ್ಯವನ್ನು ತುಂಬಿ ಸಂಘಟನೆಗೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನೇ ನಡೆಸದೆ ಕೈಚೆಲ್ಲಿ ಕುಳಿತಿದ್ದಾರೆ. ಕಾವೇರಿ ಚಳವಳಿಯನ್ನು ಕೈಗೆತ್ತಿಕೊಂಡು ರೈತರ ಪರವಾಗಿ ಹೋರಾಟಕ್ಕಿಳಿದಿದ್ದರೆ ಜೆಡಿಎಸ್‌ ಮತ್ತೆ ಸಂಘಟನಾತ್ಮಕವಾಗಿ ಬೆಳವಣಿಗೆ ಸಾಧಿಸುವುದಕ್ಕೆ ಅವಕಾಶಗಳಿದ್ದವು. ಜೆಡಿಎಸ್‌ಗೆ ಈಗಲೂ ಪಕ್ಷದ ಮತದಾರರು ಸಾಕಷ್ಟುಸಂಖ್ಯೆಯಲ್ಲಿದ್ದರೂ ಚುನಾವಣಾ ಫಲಿತಾಂಶ ತಂದಿರುವ ಅಸಮಾಧಾನ ಅವರನ್ನು ಯಾವುದೇ ಹೋರಾಟಕ್ಕೂ ಪ್ರೇರೇಪಿಸದಂತೆ ಮಾಡಿದೆ.

ನಾಯಕತ್ವದ ಕೊರತೆ:

ವರ್ಗಾವಣೆ ವಿಚಾರವಾಗಿ ಸಾರಿಗೆ ನೌಕರನ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಆದಿಯಾಗಿ ಜಿಲ್ಲೆಯ ಜೆಡಿಎಸ್‌ನ ಮೂವರು ಮಾಜಿ ಶಾಸಕರು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಬಹಿರಂಗವಾಗಿ ಗುಡುಗಿದರು. ಅದೇ ತಮಿಳುನಾಡಿಗೆ ನೀರು ಹರಿಯುತ್ತಿರುವ ಸಮಯದಲ್ಲಿ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿದರು. ಈ ದ್ವಂದ್ವ ನಿಲುವುಗಳು ಸಾರ್ವಜನಿಕರಲ್ಲಿ ನಾನಾ ರೀತಿಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪ್ರಸ್ತುತ ಜೆಡಿಎಸ್‌ನೊಳಗೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಮಾಜಿ ಶಾಸಕರಲ್ಲೂ ಸಾಮೂಹಿಕ ನಾಯಕತ್ವ ಇಲ್ಲದಂತಾಗಿದೆ. ಒಬ್ಬೊಬ್ಬರದ್ದೂ ಒಂದೊಂದು ದಾರಿ ಎಂಬಂತಾಗಿದೆ. ಜೆಡಿಎಸ್‌ನೊಳಗೆ ಉಳಿದರೆ ಮುಂದೆ ನಮಗೆ ರಾಜಕೀಯ ಭವಿಷ್ಯವಿದೆಯೇ ಎಂದೆಲ್ಲಾ ಆಲೋಚಿಸುತ್ತಿದ್ದಾರೆ. ಪಕ್ಷದ ಹಿತಕ್ಕಿಂತಲೂ ವೈಯಕ್ತಿಕ ರಾಜಕೀಯ ನೆಲೆಯ ಬಗ್ಗೆ ಹೆಚ್ಚು ಚಿಂತಿಸುತ್ತಿರುವಂತೆ ಕಂಡುಬರುತ್ತಿದ್ದಾರೆ. ಇದು ಕಾವೇರಿ ಚಳವಳಿಯ ವಿರುದ್ಧ ರೈತರ ಪರನಿಲ್ಲದಿರುವುದಕ್ಕೆ ಪ್ರಮುಖ ಕಾರಣ ಎಂಬ ಮಾತುಗಳು ಪಕ್ಷದ ಮೊಗಸಾಲೆಯಲ್ಲಿ ಕೇಳಿಬರುತ್ತಿವೆ.

ಧೂಳೀಪಟವಾಗಿ ಪುಟಿದೆದ್ದ ಕಾಂಗ್ರೆಸ್‌

2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಸ್ಥಾನಗಳಲ್ಲೂ ಜೆಡಿಎಸ್‌ ವಿಜಯಪತಾಕೆ ಹಾರಿಸಿ ದಾಖಲೆ ಸೃಷ್ಟಿಸಿತ್ತು. ಆ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗಳಿಸಲಾಗದೆ ಕಾಂಗ್ರೆಸ್‌ ಧೂಳೀಪಟವಾಗಿತ್ತು. ಆದರೆ, 2023ರ ಚುನಾವಣೆಯಲ್ಲಿ ದಳದ ಲೆಕ್ಕಾಚಾರವೆಲ್ಲವೂ ತಲೆಕೆಳಗಾಯಿತು. 6 ಸ್ಥಾನಗಳನ್ನು ಕಳೆದುಕೊಂಡು ಒಂದು ಸ್ಥಾನಕ್ಕೆ ಮಾತ್ರ ಸೀಮಿತವಾಯಿತು. ಜಿಲ್ಲೆಯಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್‌ ಮತ್ತೆ ಪುಟಿದು ಮೇಲೆದ್ದಿತು.

ರಾಜಕೀಯ ನೆಲೆಯನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್‌ ಅದರಿಂದ ಎದೆಗುಂದಲಿಲ್ಲ. ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಜೆಡಿಎಸ್‌ ಮುಂದೆ ಒಂದೂ ಚುನಾವಣೆಯಲ್ಲೂ ಗೆಲ್ಲದಂತೆ ಮಾಡಲು ತಂತ್ರಗಾರಿಕೆ ರೂಪಿಸಿತು. ಅದರಂತೆ 2019ರ ಲೋಕಸಭೆ ಚುನಾವಣೆ, ಎರಡು ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಜೆಡಿಎಸ್‌ನ್ನು ಮಕಾಡೆ ಮಲಗಿಸಿತು. 2023ರ ಚುನಾವಣೆಯಲ್ಲೂ ಜೆಡಿಎಸ್‌ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸದಂತೆ ಚಾಣಕ್ಯ ರಣತಂತ್ರ ರೂಪಿಸಿದರು. ಇದರಲ್ಲಿ ಕಾಂಗ್ರೆಸ್‌ ನಾಯಕ ಎನ್‌.ಚಲುವರಾಯಸ್ವಾಮಿ ಹೆಣೆದ ರಾಜಕೀಯ ತಂತ್ರಗಾರಿಕೆಗಳೆಲ್ಲವೂ ಯಶಸ್ವಿಯಾದದ್ದು ಕೈ ಬಲವನ್ನು ಹೆಚ್ಚಿಸಿತು.

ಮತ್ತೆ ಹಾಸನದಿಂದ ಕಣಕ್ಕಿಳಿತಾರಾ ದೇವೇಗೌಡರು: ಒಕ್ಕಲಿಗ ಭದ್ರಕೋಟೆಯಿಂದ ಲೋಕಸಭೆಗೆ ಸ್ಪರ್ಧೆ..?

ಆದರೆ, ಚುನಾವಣಾ ಸೋಲನ್ನು ಕಾಂಗ್ರೆಸ್‌ ಮಾದರಿಯಲ್ಲಿ ಜೆಡಿಎಸ್‌ನವರು ಸ್ವೀಕರಿಸಿದಂತೆ ಕಂಡುಬರುತ್ತಿಲ್ಲ. ಅವರೆಲ್ಲರೂ ದಿಕ್ಕು ತೋಚದಂತಾಗಿದ್ದಾರೆ. ಜೆಡಿಎಸ್‌ನ ಪ್ರಭಾವಿ ಹಿರಿಯ ನಾಯಕ ಸಿ.ಎಸ್‌.ಪುಟ್ಟರಾಜು ತೆರೆಯ ಮರೆಗೆ ಸರಿದಿದ್ದಾರೆ. ಸುರೇಶ್‌ಗೌಡ ಆಗಾಗ ಅಲ್ಲಲ್ಲಿ ಚಲುವರಾಯಸ್ವಾಮಿ ಅವರನ್ನು ಗುರಿಯಾಗಿಸಿಕೊಂಡಷ್ಟೇ ಟೀಕಿಸುತ್ತಿದ್ದರೆ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಡಿ.ಸಿ.ತಮ್ಮಣ್ಣ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಚುನಾವಣಾ ಸಮಯದಲ್ಲೇ ಜೆಡಿಎಸ್‌ ವಿರುದ್ಧ ತೊಡೆ ತಟ್ಟಿದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್‌ ಪಕ್ಷದಿಂದ ದೂರವಾಗಿದ್ದಾರೆ. ಇನ್ನು ಕೆ.ಆರ್‌.ಪೇಟೆ ಕ್ಷೇತ್ರದ ಎಚ್‌.ಟಿ.ಮಂಜು ಜೆಡಿಎಸ್‌ ಶಾಸಕರಾಗಿದ್ದೂ ಇಲ್ಲದಂತಾಗಿದ್ದಾರೆ.

click me!