ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆ ಕೈ ಕೊಟ್ಟಿದೆ ಪರಿಣಾಮ ಬರ ತಾಂಡವವಾಡ್ತಿದೆ. ಹೀಗಾಗಿ ರೈತರ ಸಂಕಷ್ಟಕ್ಕೆ ಸರ್ಕಾರ ಮರುಗಬೇಕಿದೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಬರಪೀಡಿತ ಪ್ರದೇಶವೆಂದು ಘೋಷಿಸಿ ಮದ್ಯಕರ್ನಾಟಕದ ರೈತರಿಗೆ ನೆರವಾಗಬೇಕಿದೆ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.25) ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಈ ಬಾರಿ ಸಕಾಲಕ್ಕೆ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಲ್ಲದೆ ಬೆಳೆದ ಬೆಳೆಗಳು ಒಣಗಿನಿಂತಿವೆ. ಜಿಲ್ಲೆಯಲ್ಲಿ ಬರ ತಾಂಡವವಾಡ್ತಿದ್ದು, ಈ ವೇಳೆಗೆ ಹಚ್ಚು ಹಸಿರಾಗಿರಬೇಕಿದ್ದ ಜಮೀನುಗಳು ಬರಡು ಭೂಮಿಯಂತಾಗಿವೆ. ಹೀಗಾಗಿ ಅನ್ನದಾತರು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಹೋರಾಟಕ್ಕೆ ಇಳಿದಿದ್ದಾರೆ.
undefined
ಕಣ್ಣಾಯಿಸಿದಷ್ಟೂ ದೂರಕ್ಕೆ ಕಾಣುವ ಖಾಲಿ ಜಮೀನುಗಳು. ನೀರಿಲ್ಲದೇ ಒಣಗಿ ನಿಂತ ಬೆಳೆಗಳು.ಈ ದೃಶ್ಯಗಳು ಕಂಡು ಬಂದಿದ್ದು,ಚಿತ್ರದುರ್ಗದಲ್ಲಿ. ಹೌದು ಹೇಳಿ ಕೇಳಿ ಚಿತ್ರದುರ್ಗ ಶಾಶ್ವತ ಬರದನಾಡು. ಆದ್ರೆ ಕಳೆದ ಬಾರಿ ಸುರಿದ ಅತಿಯಾದ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಭರ್ತಿಯಾಗಿದ್ವು. ಹೀಗಾಗಿ ಈವರೆಗೆ ನೀರಿನ ಹಾಹಾಕಾರ ಇಲ್ಲದೇ ಅಲ್ಲಿನ ಜನರು ಆಯಾಗಿದ್ರು. ಆದ್ರೆ ಈ ಬಾರಿ ಸಕಾಲಕ್ಕೆ ಮಳೆ ಆಗದೇ ಮೆಕ್ಕೆಜೋಳ, ಹತ್ತಿ, ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಗಳು ನೀರಿನ ಕೊರತೆಯಿಂದ ಒಣಗಿ ನಾಶವಾಗಿವೆ. ಹೀಗಾಗಿ ಕಳೆದ ಮೂರು ತಿಂಗಳಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಬರ ತಾಂಡವ ಆಡುತ್ತಿದೆ. ನೀರಿನ ಅಭಾವ ತೀವ್ರವಾಗಿದೆ. ಇದರಿಂದಾಗಿ ದಾರಿ ಕಾಣದೇ ಕಂಗಾಲಾಗಿರೋ ರೈತರು, ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಅಗತ್ಯ ಸೌಲಭ್ಯ ಹಾಗು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ವಿಮೆ ಕಂಪನಿಗಳಿಂದ ಬೆಳೆವಿಮೆ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಜಿಟಿ ಜಿಟಿ ಮಳೆಗೆ ಕಂಗಾಲಾದ ಮೆಕ್ಕೆಜೋಳ ಬೆಳೆದ ಕ್ಯಾಸಾಪುರ ಗ್ರಾಮದ ರೈತ
ಇನ್ನು ಸತತ ಬರದಿಂದಾಗಿ ಕೊಳವೆ ಬಾವಿಯಲ್ಲಿನ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಅಲ್ಲದೇ ಜಮೀನಿನಲ್ಲಿನ ಬೆಳೆನಾಶವಾದ ಪರಿಣಾಮ ದನಕರುಗಳಿಗೆ ಮೇವಿನ ಕೊರತೆ ಕೂಡ ಎದುರಾಗಿದೆ. ಸರ್ಕಾರದ ಗೋಮಾಳದಲ್ಲಿ ಬೃಹತ್ ಸಂಶೋಧನ ಕೇಂದ್ರಗಳು ನಿರ್ಮಾಣವಾಗಿದ್ದು,ರೈತರ ದನಕರುಗಳ ಮೇವಿಗೆ ಸಮಸ್ಯೆ ಎದುರಾಗಿದೆ. ಹೀಗಾಗಿ ಜಿಲ್ಲೆಯ ರೈತರ ಜಾನುವಾರುಗಳ ರಕ್ಷಣೆಗಾಗಿ ಹೋಬಳಿಗೊಂದು ಗೋಶಾಲೆ ತೆರೆಯುವಂತೆ ಕೋಟೆನಾಡಿನ ರೈತ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಒಟ್ಟಾರೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆ ಕೈ ಕೊಟ್ಟಿದೆ ಪರಿಣಾಮ ಬರ ತಾಂಡವವಾಡ್ತಿದೆ. ಹೀಗಾಗಿ ರೈತರ ಸಂಕಷ್ಟಕ್ಕೆ ಸರ್ಕಾರ ಮರುಗಬೇಕಿದೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಬರಪೀಡಿತ ಪ್ರದೇಶವೆಂದು ಘೋಷಿಸಿ ಮದ್ಯಕರ್ನಾಟಕದ ರೈತರಿಗೆ ನೆರವಾಗಬೇಕಿದೆ
Karnataka rains: ಮಳೆಗೆ ಮತ್ತೆ 5 ಬಲಿ; ವಿವಿಧೆಡೆ ಭೂ ಕುಸಿತ