
ಬೆಂಗಳೂರು (ಸೆ.8): ನಾಲ್ವರ ನಾಮನಿರ್ದೇಶನದೊಂದಿಗೆ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದ ಹೊಸ್ತಿಲಿಗೆ ಬಂದ ಬೆನ್ನಲ್ಲೇ, ಸಭಾಪತಿ ಸ್ಥಾನ ಹಿರಿಯ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಅಥವಾ ಹಾಲಿ ಸಭಾನಾಯಕ ಎನ್.ಎಸ್. ಬೋಸರಾಜು ಪೈಕಿ ಒಬ್ಬರಿಗೆ ಒಲಿಯುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಮುಂಬರುವ ದಿನಗಳಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಪುನಾರಚನೆ ಆಧರಿಸಿ, ಸಭಾಪತಿ ಸ್ಥಾನಕ್ಕೆ ಈ ಇಬ್ಬರ ಪೈಕಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಉನ್ನತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಈ ವರ್ಷಾಂತ್ಯದ ವೇಳೆಗೆ ಸಚಿವ ಸಂಪುಟ ಪುನಾರಚನೆ ನಡೆದರೆ ಆಗ ಸಂಪುಟಕ್ಕೆ ಸೇರ್ಪಡೆಯಾಗುವ ಆಕಾಂಕ್ಷೆ ಹರಿಪ್ರಸಾದ್ ಅವರಿಗೆ ಇದೆ ಎನ್ನಲಾಗುತ್ತಿದೆ. ಇದನ್ನು ಕಾಂಗ್ರೆಸ್ ನಾಯಕತ್ವ ಪರಿಗಣಿಸಿದರೆ ಆಗ ಹಾಲಿ ಸಚಿವರಾಗಿರುವ ಬೋಸರಾಜು ಅವರು ಸಂಪುಟ ಸ್ಥಾನ ತೆರವು ಮಾಡಬೇಕಾಗಬಹುದು. ಹೀಗಾದಲ್ಲಿ ಬೋಸರಾಜು ಅವರಿಗೆ ಸಭಾಪತಿ ಹುದ್ದೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆದರೆ, ಆಪ್ತರ ಪ್ರಕಾರ ಬೋಸರಾಜು ಅವರಿಗೆ ಸಂಪುಟದಲ್ಲೇ ಮುಂದುವರೆಯುವ ಮನಸ್ಥಿತಿಯಿದೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಬೋಸರಾಜು ಅವರು ಸಂಪುಟದಲ್ಲೇ ಉಳಿದುಕೊಳ್ಳುವ ಸ್ಥಿತಿ ಎದುರಾದರೇ ಆಗ ಹರಿಪ್ರಸಾದ್ ಅವರನ್ನು ಸಭಾಪತಿ ಹುದ್ದೆಗೆ ಪರಿಗಣಿಸಬಹುದು ಎನ್ನಲಾಗುತ್ತಿದೆ.
ಬೆಳಗಾವಿ ಅಧಿವೇಶನದ ವೇಳೆಗೆ ತೀರ್ಮಾನ!
ಹೊಸ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆ ಪ್ರಕ್ರಿಯೆ ಅಧಿವೇಶನ ಸಂದರ್ಭದಲ್ಲಿ ನಡೆಯಬೇಕಾಗುತ್ತದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದವರೆಗೆ ಈ ಎರಡು ಹುದ್ದೆಗಳ ಬದಲಾವಣೆ ಸಾಧ್ಯತೆ ಕಡಿಮೆ.
ರಾಜೀನಾಮೆಗೆ ಒಲವು:
ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಹಿಂದೆಯೇ ಹಲವಾರು ಬಾರಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಣ್ಣ ಸುಳಿವು ದೊರೆತರೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಸಾಮಾನ್ಯವಾಗಿ ಅವಿಶ್ವಾಸ ನಿರ್ಣಯದ ಮೂಲಕ ಸಭಾಪತಿ ಅಥವಾ ಉಪಸಭಾಪತಿಗಳನ್ನು ಹುದ್ದೆಯಿಂದ ಕೆಳಗಿಳಿಸಿದ ಪ್ರಸಂಗ ನಡೆದಿಲ್ಲ. ಈ ಹಿಂದೆ ಡಿ.ಎಚ್. ಶಂಕರಮೂರ್ತಿ ಅವರ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದರೂ ಅದಕ್ಕೆ ಸೋಲಾಗಿತ್ತು. ಹೀಗಾಗಿ ಸದನದ ಅತ್ಯಂತ ಹಿರಿಯ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇಲ್ಲ. ಬದಲಾಗಿ ರಾಜೀನಾಮೆ ಪಡೆದು ಹೊಸ ಸಭಾಪತಿ ಆಯ್ಕೆ ಮಾಡುವುದೊಂದೇ ದಾರಿ ಉಳಿದಿದೆ.
ನಿರ್ಣಾಯಕ ಲಖನ್ ಜಾರಕಿಹೊಳಿ:
75 ಸದಸ್ಯರ ಒಟ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ 37, ಬಿಜೆಪಿ 29, ಜೆಡಿಎಸ್ 7 ಸದಸ್ಯರ ಬಲ ಹೊಂದಿದೆ. ತಲಾ ಒಬ್ಬರು ಪಕ್ಷೇತರ ಹಾಗೂ ಸಭಾಪತಿ ಇದ್ದಾರೆ. ಬಹುಮತಕ್ಕೆ 38 ಸದಸ್ಯರ ಅವಶ್ಯಕತೆ ಇದೆ. ಬಿಜೆಪಿ-ಜೆಡಿಎಸ್‌ನ 36 ಸದಸ್ಯರು ಹಾಗೂ ಸಭಾಪತಿ ಹೊರಟ್ಟಿ ಅವರನ್ನು ಪರಿಗಣಿಸಿದರೆ ಒಟ್ಟು ಸಂಖ್ಯೆ 37 ಆಗುತ್ತದೆ. ಬಹುಮತ ಪಡೆಯಲು ಒಬ್ಬ ಸದಸ್ಯರ ಕೊರತೆಯಾಗುತ್ತದೆ. ಹೀಗಾಗಿ ಪಕ್ಷೇತರ ಸದಸ್ಯರಾಗಿರುವ ಲಖನ್ ಜಾರಕಿಹೊಳಿ ಅವರು ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತಾರೋ ಅಂತಹ ಪಕ್ಷ ಪೂರ್ಣ ಬಹುಮತ ಪಡೆಯುತ್ತದೆ. ಆದರೆ ಲಖನ್ ಜಾರಕಿಹೊಳಿ ಅವರು ಆಡಳಿತ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿರುವುದರಿಂದ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯುವುದು ಖಚಿತ ಎಂದೇ ಹೇಳಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ