
ನವದೆಹಲಿ/ ಕಲಬುರಗಿ: ತೊಗರಿ ಬೆಳೆ ನಷ್ಟದ ಬಗ್ಗೆ ತಮ್ಮ ಬಳಿ ಗೋಳು ತೋಡಿಕೊಂಡ ಕಲಬುರಗಿ ಅನ್ನದಾತನ ಮೇಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತರಾಟೆ ತೆಗೆದುಕೊಂಡ ಘಟನೆಯನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಇದು ಕಾಂಗ್ರೆಸ್‌ನ ದರ್ಪ, ಅಹಂಗೆ ಉದಾಹರಣೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರವಿಶಂಕರ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತು ಕೇಂದ್ರ ಸಚಿವ, ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಖರ್ಗೆಗೆ ದುರಂಹಕಾರ:
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ‘ರೈತ ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಬಂದರೆ ಇದು ಯಾವ ರೀತಿಯ ದುರಂಹಕಾರ? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಹಾಗಾಗಿ ನಿಮ್ಮ ಬಳಿ ಬಂದಿದ್ದಾರೆ. ಈ ರೀತಿ ಹೇಳುವುದಾದರೆ ಕಾಂಗ್ರೆಸ್ ಸರ್ಕಾರ ಅನ್ನದಾತರ ಪರವಾಗಿ ನಿಲ್ಲುತ್ತದೆ ಎಂದು ಯಾಕೆ ಸುಳ್ಳು ಹೇಳುತ್ತೀರಿ? ’ ಎಂದು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಕೂಡ ಎಕ್ಸ್‌ನಲ್ಲಿ ಕಿಡಿ ಕಾರಿದ್ದು, ‘ 40 ಎಕರೆ ಬೆಳೆವ ನಿಮಗೂ, ಒಂದು ಅಥವಾ ಎರಡು ಎಕರೆಯಲ್ಲಿ ಬೆಳೆವ ಆ ಬಡ ರೈತನಿಗೂ ಹೋಲಿಕೆ ಸರಿಯೇ ಸಾಹೇಬರೇ? ಬೆಳೆ ಹಾಳಾದರೂ ನೀವು ಸಹಿಸಿಬಲ್ಲಿರಿ, ಆದರೆ, ಬಡ ರೈತರ ಪರಿಸ್ಥಿತಿ ಏನಾಗಬೇಕು’ ಎಂದು ಹರಿಹಾಯ್ದಿದ್ದಾರೆ.
ದರ್ಪಕ್ಕೆ ಕೈಗನ್ನಡಿ:
ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್‌ಡಿಕೆ, ‘ಹಿರಿಯರಿಂದ ಇಂಥ ವರ್ತನೆ ನಿರೀಕ್ಷಿಸಿರಲಿಲ್ಲ. ನೀವು ರಾಜ್ಯಸಭೆ ಪ್ರತಿಪಕ್ಷ ನಾಯಕರು ಎಂಬುದನ್ನು ಮರೆತು ಮಾತನಾಡಿದ್ದೀರಿ. ಕಣ್ಣೀರು ಒರೆಸಬಹುದಿತ್ತು. ನಿಮ್ಮ ವರ್ತನೆ ಕಾಂಗ್ರೆಸ್‌ನ ದರ್ಪ, ಅಹಂಗೆ ಕೈಗನ್ನಡಿಯಾಗಿದೆ. 40 ಎಕರೆಯಲ್ಲಿ ಬೆಳೆವ ತಮಗೂ, ಎರಡು ಎಕರೆಯಲ್ಲಿ ಬೆಳೆವ ರೈತನಿಗೂ ಹೋಲಿಕೆಯೇ? ನಷ್ಟ ಭರಿಸುವ ಶಕ್ತಿ ನಿಮಗಿರುತ್ತದೆ, ರೈತನಿಗೆ ಇರಬೇಕಲ್ಲವೇ?’ ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಖರ್ಗೆ ಹೇಳಿದ್ದೇನು:
ಭಾನುವಾರ ಖರ್ಗೆ ನಿವಾಸಕ್ಕೆ ಆಗಮಿಸಿದ್ದ ರೈತನೊಬ್ಬ ಅತಿವೃಷ್ಟಿಯಿಂದ ಹಾಳಾಗಿದ್ದ ತೊಗರಿ ಬೆಳೆ ತೋರಿಸಿ, ‘ನಾಲ್ಕು ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆ ಹಾಳಾಗಿದೆ, ಸರ್’ ಎಂದು ಗೋವು ತೋಡಿಕೊಂಡಿದ್ದ. ಈ ವೇಳೆ ಕೋಪಗೊಂಡ ಖರ್ಗೆ, ‘ನಿನ್ನದು ನಾಲ್ಕು ಎಕರೆ ಹಾಳಾಗಿರಬಹುದು, ನನ್ನದು ನಲವತ್ತು ಎಕರೆಯ ಬೆಳೆ ಹಾಳಾಗಿದೆ. ಬರೀ ತೊಗರಿ ಮಾತ್ರವಲ್ಲ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಬೆಳೆಗಳೂ ಸಹ ಹಾಳಾಗಿವೆ. ಬರೀ ಪ್ರಚಾರಕ್ಕಾಗಿ ಈ ರೀತಿ ಬರಬೇಡ. ಆರು ಹಡೆದವಳ ಮುಂದೆ ಮೂರು ಹಡೆದವಳು ಬಂದು ಹೇಳಿದಂಗೆ ನನಗೆ ಹೇಳುತ್ತಿರುವೆ’ ಎಂದು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ