ಹೊಸ ಕಾಮಗಾರಿಗೆ ಅನುದಾನ ಎಲ್ಲಿದೆ?: ಡಿಕೆಶಿ

Published : Jul 26, 2023, 07:00 AM IST
ಹೊಸ ಕಾಮಗಾರಿಗೆ ಅನುದಾನ ಎಲ್ಲಿದೆ?: ಡಿಕೆಶಿ

ಸಾರಾಂಶ

ಇನ್ನು ವರ್ಗಾವಣೆ ವಿಚಾರವಾಗಿ ನನ್ನ ಇಲಾಖೆಯಲ್ಲಿ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳದಂತೆ ಹೇಳಿದ್ದೇನೆ. ವರ್ಗಾವಣೆಗೆ ಸಮಯದ ಮಿತಿ ಇದೆ. ಸಮಯ ಮಿತಿಯಲ್ಲಿ ಮಾಡಲಾಗಿದೆ. ಉಳಿದಿದ್ದು ಮುಖ್ಯಮಂತ್ರಿ ಅವರಿಗೆ ಬಿಡಲಾಗಿದೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಜು.26): ಕಾಮಗಾರಿಗಳ ಬಿಲ್‌ ಹಾಗೂ ವರ್ಗಾವಣೆ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ‘ಮುಖ್ಯಮಂತ್ರಿ ಅವರು ಬಾಕಿ ಬಿಲ್‌ಗಳು, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಸದ್ಯ ಹೊಸ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಅನುದಾನ ಎಲ್ಲಿದೆ?’ ಎಂದು ಪ್ರಶ್ನಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ. ‘ನನ್ನ ಇಲಾಖೆಯಲ್ಲೂ ಸಣ್ಣ ಕೆಲಸ ಮಾಡಲೂ ಆಗುತ್ತಿಲ್ಲ. 1.25 ಲಕ್ಷ ಕೋಟಿ ರು. ಕೆಲಸ ನಡೆಯುತ್ತಿದೆ. ಇದಕ್ಕೆ ಹಣ ಬೇಕು, ಜೊತೆಗೆ ಸಂಬಳ, ಸಾಲ ಎಲ್ಲ ಕೊಡಬೇಕು. ಗ್ಯಾರಂಟಿಗಳ ಜಾರಿಗೆ ಅನುದಾನ ಕೊಡಬೇಕಿದೆ. ಈ ಬಜೆಟ್‌ನಲ್ಲಿ ಅನುದಾನ ಕಡಿಮೆಯಾಗಿದೆ. ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಬಹುದು. ಆದರೆ, ಹಣವನ್ನೂ ಕೊಡಬೇಕಲ್ವಾ? 16 ಸಾವಿರ ಕೋಟಿ ರು.ನಷ್ಟು ಬಾಕಿ ಬಿಲ್‌ ನನ್ನ ಹತ್ತಿರವೇ ಇದೆ. ಅದೇ ರೀತಿ ಇತರೆ ಸಚಿವರಿಗೂ ಸಮಸ್ಯೆ ಇರುತ್ತಲ್ವಾ? ಇದನ್ನೆಲ್ಲಾ ಶಾಸಕರೂ ಅರ್ಥಮಾಡಿಕೊಳ್ಳಬೇಕು’ ಎಂದರು.

ಸರ್ಕಾರ ಉರುಳಿಸಲು ಎಚ್‌ಡಿಕೆ ಪಿತೂರಿ: ಯಾವ ಶಾಸಕರಿಗೆ ಗಾಳ ಅಂತ ಗೊತ್ತಿದೆ -ಡಿಕೆಶಿ

‘ಇನ್ನು ವರ್ಗಾವಣೆ ವಿಚಾರವಾಗಿ ನನ್ನ ಇಲಾಖೆಯಲ್ಲಿ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳದಂತೆ ಹೇಳಿದ್ದೇನೆ. ವರ್ಗಾವಣೆಗೆ ಸಮಯದ ಮಿತಿ ಇದೆ. ಸಮಯ ಮಿತಿಯಲ್ಲಿ ಮಾಡಲಾಗಿದೆ. ಉಳಿದಿದ್ದು ಮುಖ್ಯಮಂತ್ರಿ ಅವರಿಗೆ ಬಿಡಲಾಗಿದೆ’ ಎಂದರು.

ನೈಸ್‌ಗೆ ಭೂಮಿ ಕಳಕೊಂಡ ರೈತರಿಗೆ ನಿವೇಶನ: ಡಿಕೆಶಿ

ನೈಸ್‌ ರಸ್ತೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಕೊಡಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು. ಮಂಗಳವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ ಸೋಂಪುರ ಗ್ರಾಮದ ರೈತರ ನಿಯೋಗಕ್ಕೆ ಸಚಿವರು ಭರವಸೆ ನೀಡಿದರು.

ನೈಸ್‌ ರಸ್ತೆಗೆಂದು ನಮ್ಮ ಜಮೀನು ಸ್ವಾಧೀನ ಮಾಡಿಕೊಂಡು 23 ವರ್ಷಗಳಾಗಿವೆ. ಭೂಮಿಗೆ ಪರಿಹಾರ ಮೊತ್ತ ಸಿಕ್ಕಿದೆ. ಆದರೆ ನಮಗೆ ನಿವೇಶನ ನೀಡುವ ಭರವಸೆ ಈವರೆಗೂ ಈಡೇರಿಲ್ಲ. ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಯಾವೊಬ್ಬ ರೈತರಿಗೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ರೈತರು ಅವಲತ್ತುಕೊಂಡರು.

ನೈಸ್‌ ರಸ್ತೆಯಲ್ಲಿ ಯಾರು ಭ್ರಷ್ಟಾಚಾರ ಮಾಡಿದ್ದಾರೆ ಗೊತ್ತಿಲ್ಲ. ಅದು ನೈಸ್‌ ಹಾಗೂ ಸರ್ಕಾರಕ್ಕೆ ಬಿಟ್ಟವಿಚಾರ. ಭೂಮಿ ಕಳೆದುಕೊಂಡಿರುವ ರೈತರಿಗೆ ನ್ಯಾಯ ಸಿಗಬೇಕು. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ನಾವು ಮನವಿ ಮಾಡಿದ್ದೆವು. ಆಗ ಸದನ ಸಮಿತಿ ಮಾಡಿ ವರದಿ ಪಡೆದಿದ್ದರು. ನಾವು ನಮ್ಮ ಸಮಸ್ಯೆಗಳನ್ನು ಎಲ್ಲಾ ಸರ್ಕಾರದ ಬಳಿ ಹೇಳಿಕೊಂಡಿದ್ದೇವೆ. ಯಾರಿಂದಲೂ ಪರಿಹಾರ ಸಿಕ್ಕಿಲ್ಲ. ನೀವು ಮುಂದೆ ನಿಂತು ಈ ಸಮಸ್ಯೆಗೆ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಬಿಕೆ ಹರಿಪ್ರಸಾದ್ ಭೇಟಿಯಾದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್

2003ರಲ್ಲಿ ಕೆಲವು ಸರ್ವೇಗಳ ಜಮೀನು ಸ್ವಾಧೀನಕ್ಕೆ ಮಾತ್ರ ಪರಿಹಾರ ನೀಡಲಾಗಿದ್ದು, ಮತ್ತೆ ಕೆಲವು ಸರ್ವೇ ನಂಬರ್‌ ಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿಲ್ಲ ಎಂಬ ಕಾರಣಕ್ಕೆ ಪರಿಹಾರ ನೀಡಿರಲಿಲ್ಲ. ಆದರೆ ಈಗ ಆ ಜಮೀನು ಭೂಸ್ವಾಧೀನಕ್ಕೆ 2003 ರಲ್ಲಿ ನಿಗದಿ ಮಾಡಿದ್ದ ದರದ ಮೊತ್ತಕ್ಕೆ ಬಡ್ಡಿ ಸೇರಿಸಿ ಪರಿಹಾರ ಹಣ ನೀಡಲು ಮುಂದಾಗಿದ್ದಾರೆ ಎಂದು ನಿಯೋಗದ ಸದಸ್ಯರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌ ಅವರು, ಈ ವಿಚಾರವಾಗಿ ಅಧಿಕಾರಿಗಳ ಜತೆ ಚರ್ಚಿಸಿದೆ. ಸುಪ್ರೀಂ ಕೋರ್ಚ್‌ನಲ್ಲಿ ಕೆಐಎಡಿಬಿ ಕಾಯ್ದೆ ಹಾಗೂ ಬಿಡಿಎ ಕಾಯ್ದೆಯಲ್ಲಿ ಹಳೆ ದರಕ್ಕೆ ಪರಿಹಾರ ನೀಡಬೇಕು ಎಂದು ಆದೇಶ ನೀಡಲಾಗಿದೆ. ನಿವೇಶನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ