ಕೆಆರ್‌ಎಸ್ ಬೃಂದಾವನದಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರಿದ ಪ್ರವಾಸಿಗನಿಗೆ ಥಳಿತದಿಂದ ಸಾವು. ಹುಬ್ಬಳ್ಳಿಯಲ್ಲಿ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದುರ್ಮರಣ.
ಶ್ರೀರಂಗಪಟ್ಟಣ (ಏ.70: ಪ್ರವಾಸಿತಾಣ ಕೆಆರ್‌ಎಸ್ ಬೃಂದಾವನದಲ್ಲಿ ಶನಿವಾರ ಪ್ರವಾಸಕ್ಕೆ ಬಂದಿದ್ದ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರಿದ ಕೇರಳದ ಪ್ರವಾಸಿಗನಿಗೆ ಸಾರ್ವಜನಿಕರು ಥಳಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ನಡೆದಿದೆ.
ಕೇರಳ ಮೂಲದ ಪ್ರವಾಸಿಗ ಜಾರ್ಜ್ ಜೋಸೆಫ್ (45) ಮೃತ ವ್ಯಕ್ತಿ. ಜಾರ್ಜ್ ತನ್ನ ಸ್ನೇಹಿತರೊಂದಿಗೆ ಕೇರಳದಿಂದ ಬೃಂದಾವನ ವೀಕ್ಷಣೆಗೆ ಶನಿವಾರ ಆಗಮಿಸಿದ್ದರು. ಸಂಗೀತ ಕಾರಂಜಿ ನೋಡುವಾಗ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಥಳಿಸಿದ್ದಾರೆ.
ಇದರಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಡಿಕೇರಿಯಲ್ಲಿ ವಿನಯ್ ಸೋಮಯ್ಯ ಆತ್ಮಹತ್ಯೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ನಿಯಂತ್ರಣ ತಪ್ಪಿ ತಡೆಗೋಡೆಗೆ ಕಾರು ಡಿಕ್ಕಿ: ನಾಲ್ವರ ಸಾವು
ಹುಬ್ಬಳ್ಳಿ: ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನೂಲ್ವಿ ಕ್ರಾಸ್ ಬಳಿ ಭಾನವಾರ ನಡೆದಿದೆ.
ಇಲ್ಲಿಯ ಲಿಂಗರಾಜ ನಗರ ಹಾಗೂ ವಿದ್ಯಾನಗರ ನಿವಾಸಿಗಳಾದ ಸುಜಾತಾ ಹಿರೇಮಠ (60), ಶಕುಂತಲಾ ಹಿರೇಮಠ (72) ಮತ್ತು ಗಾಯತ್ರಿ (67) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಕೆಎಂಸಿಆರ್‌ಐ ದಾಖಲಾಗಿದ್ದ ಸಂಪತಕುಮಾರಿ (68) ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿರುವ ವೀರಬಸಯ್ಯ ಹಿರೇಮಠ (65)ಗೆ ಚಿಕಿತ್ಸೆ ಮುಂದುವರಿದಿದೆ.
ಕುಟುಂಬಸ್ಥರೆಲ್ಲರೂ ಹಾವೇರಿಯ ಸಂಬಂಧಿಕರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುಬ್ಬಳ್ಳಿಗೆ ವಾಪಸ್ಸಾಗುತ್ತಿದ್ದರು. ನೂಲ್ವಿ ಕ್ರಾಸ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮೂವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿತ್ತು. ಈ ಪೈಕಿ ಮತ್ತೊಬ್ಬ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಾವಿಗೆ ಶರಣಾಗುವ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್ ಸೋಮಯ್ಯ: ಹೃದಯ ಹಿಂಡಿದ ಭಾವನಾತ್ಮಕ ಪತ್ರ!
ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಸಿಪಿಐ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ: ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಕೆಎಂಸಿಆರ್‌ಐಗೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಘಾತದಲ್ಲಿ ತಾಯಿ, ಅಜ್ಜಿಯನ್ನು ಕಳೆದುಕೊಂಡ ಮಕ್ಕಳು, ಮೊಮ್ಮಕ್ಕಳು ದೇವರಿಗೆ ಹಿಡಿಶಾಪ ಹಾಕುತ್ತಾ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು