
ಶ್ರೀರಂಗಪಟ್ಟಣ (ಏ.7): ಸ್ವಾತಂತ್ರ್ಯದ ನಂತರ ಇಲ್ಲಿವರೆಗೂ ಯಾವುದೇ ಸರ್ಕಾರಗಳು ಮಾಡದಂತಹ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಜಿಲ್ಲೆಗೆ ಕೇಂದ್ರ ಸಚಿವರ ಕೊಡುಗೆ ಏನು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯ ಅಂಗವಾಗಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿ, ರೈತರಿಗೆ ಸಾಲ ಮನ್ನ ಮಾಡುವುದಕ್ಕಿಂತ ಹೆಚ್ಚಿನ ಹಣವನ್ನು ಗ್ಯಾರಂಟಿ ಯೋಜನೆ ಮೂಲಕ ಅವರ ಮನೆಗಳಿಗೆ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ತಲುಪುವಂತೆ ನಮ್ಮ ಸರ್ಕಾರ ಮಾಡಿದೆ ಎಂದರು.
ಸಾಲ ಮನ್ನ ಗ್ರಾಮದ ಕೇವಲ ಏಳೆಂಟು ಮಂದಿಗೆ ಮಾತ್ರ ತಲುಪುತಿತ್ತು. ಆದರೆ, 5 ಗ್ಯಾರಂಟಿಗಳಿಂದ ಶ್ರೀರಂಗಪಟ್ಟಣ ಕ್ಷೇತ್ರದಾದ್ಯಂತ ಪ್ರತಿ ವರ್ಷ 230 ಕೋಟಿ ರು. ಹಣ ನೀಡಲಾಗುತ್ತಿದೆ. ಜಿಲ್ಲೆಗೆ 1750 ಕೋಟಿಯಷ್ಟು ಹಣ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಮಡಿಕೇರಿಯಲ್ಲಿ ವಿನಯ್ ಸೋಮಯ್ಯ ಆತ್ಮಹತ್ಯೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳ ಪಡೆದು ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿಗೆ ಮತ ನೀಡಿ ನಿತ್ಯ ನಮ್ಮ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವಂತೆ ಮಾಡಿದ್ದೀರಿ. ಇಲ್ಲಿವರೆಗೆ ಜಿಲ್ಲೆಗೆ ನಾನು ಬಂದ ನಂತರ ಹಲವು ಕೊಡುಗೆ ನೀಡಿದ್ದೇವೆ. ಅದಕ್ಕೆ ದಾಖಲೆಗಳಿವೆ. ಆದರೆ, ಈಗಿರುವ ಕೇಂದ್ರ ಸಚಿವರ ಕೊಡುಗೆ ಜಿಲ್ಲೆಗೆ ಏನು ಎಂದು ಪ್ರಶ್ನೆ ಮಾಡಿದರು.
ಇಷ್ಟೆಲ್ಲ ಕೊಟ್ಟರು ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮತ ನೀಡಿ ಕೇಂದ್ರ ಮಂತ್ರಿ ಮಾಡಿದ್ದೀರಿ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿ ಎಂದರೆ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಗಳು ಸೇರಿ ನಮ್ಮ ವಿರುದ್ಧ ಮಾತನಾಡುವಂತೆ ಮಾಡಿದ್ದು ಸರಿನಾ ಎಂದು ಅಸಮಾಧಾನ ತೋಡಿಕೊಂಡರು.ಬಾಬಣ್ಣ ನಮ್ಮನ್ನು ನೋಡಿಲ್ಲ, ಮಾತನಾಡಿಸಿಲ್ಲ ಎಂದು ಅಸಮಾಧಾನ ಬೇಡ. ಚುನಾವಣೆಗಳು ಬಂದಾಗ ನಮ್ಮವರನ್ನು ಗೆಲ್ಲಿಸಿಕೊಳ್ಳಬೇಕು ಎಂದು ಶ್ರಮ ವಹಿಸುತ್ತಾರೆ. ಕಳೆದ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ, ಪೀಕಾರ್ಡ್ ಬ್ಯಾಂಕ್ ಚುನಾವಣೆ ಎಲ್ಲದಲ್ಲೂ ಶ್ರಮ ವಹಿಸಿ ನಮ್ಮ ಪಕ್ಷಕ್ಕೆ ಅಧಿಕಾರ ತಂದಿದ್ದಾರೆ. ಮುಂದೆ ಸ್ಥಳೀಯ ಚುನಾವಣೆಗಳಲ್ಲಿ ನಮ್ಮವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿಧಾನಸೌಧದಲ್ಲಿ ಕೂತು ಲೂಟಿ; ಸಿದ್ದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ!
ಇದೇ ವೇಳೆ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರಸ್ತಾವಿಕ ಭಾಷಣ ಮಾಡಿದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಕಾಂಗ್ರೆಸ್ ಪಕ್ಷದ ಸರ್ಕಾರದ ಅಭಿವೃದ್ಧಿಗಳ ಕುರಿತು ಮಾತನಾಡಿದರು. ಎಂಎಲ್‌ಸಿ ದಿನೇಶ್ ಗೂಳಿಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಮನ್ಮುಲ್ ಅಧ್ಯಕ್ಷ ಬೋರೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಾಲಹಳ್ಳಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಗ್ರಾಮಾಂತರ ಅಧ್ಯಕ್ಷ ರಮೇಶ್ ಮಿತ್ರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಅಂಜನ ಶ್ರೀಕಾಂತ್, ಮುಖಂಡರಾದ ಚಿದಂಬರ್, ಪಲ್ಲವಿ ಸೇರಿದಂತೆ ಇತರರ ಪದಾಧಿಕಾರಿಗಳು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ