ಪಶ್ಚಿಮ ಘಟ್ಟ ಜಗತ್ತಿನಲ್ಲೇ ಶ್ರೀಮಂತ ತಾಣ: ಉಪ ರಾಷ್ಟ್ರಪತಿ ಜಗದೀಪ್ ಧನಕರ್

Published : May 06, 2025, 09:13 AM IST
ಪಶ್ಚಿಮ ಘಟ್ಟ ಜಗತ್ತಿನಲ್ಲೇ ಶ್ರೀಮಂತ ತಾಣ: ಉಪ ರಾಷ್ಟ್ರಪತಿ ಜಗದೀಪ್ ಧನಕರ್

ಸಾರಾಂಶ

ಪಶ್ಚಿಮ ಘಟ್ಟ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ. ಇಡೀ ಜಗತ್ತಿನಲ್ಲೇ ಶ್ರೀಮಂತ ಜೀವ ವೈವಿಧ್ಯ ಹೊಂದಿರುವ ತಾಣವಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅಭಿಪ್ರಾಯಪಟ್ಟರು. 

ಕಾರವಾರ (ಮೇ.06): ಪಶ್ಚಿಮ ಘಟ್ಟ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ. ಇಡೀ ಜಗತ್ತಿನಲ್ಲೇ ಶ್ರೀಮಂತ ಜೀವ ವೈವಿಧ್ಯ ಹೊಂದಿರುವ ತಾಣವಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅಭಿಪ್ರಾಯಪಟ್ಟರು. ಶಿರಸಿಯ ಅರಣ್ಯ ಕಾಲೇಜು ಆವರಣದಲ್ಲಿ "ದೇಶ ಕಟ್ಟುವಿಕೆಯಲ್ಲಿ ಅರಣ್ಯ ವಿಜ್ಞಾನದ ಪಾತ್ರ' ಕುರಿತ ಕಾರ್ಯಕ್ರಮದಲ್ಲಿ ಅರಣ್ಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ನಾಲ್ಕು ಗೋಡೆಯ ನಡುವೆ ಕಲಿಯುವುದಕ್ಕಿಂತ ವಿಸ್ತಾರವಾದ ಪಶ್ಚಿಮಘಟ್ಟದ ವಾತಾವರಣದಲ್ಲಿ ಅಧ್ಯಯನ ಮಾಡಬಹುದು ಎಂದರು.

ಪರಿಸರ ನಾಶ ಮಾಡಿ ಅಭಿವೃದ್ಧಿ ಚಟುವಟಿಕೆ ನಡೆಸುವ ಬದಲು ಪ್ರಾಕೃತಿಕ ಸೌಹಾರ್ದ ಇಂದಿನ ತುರ್ತು ಅಗತ್ಯವಾಗಿದೆ. ವೈದಿಕ ಯುಗದಿಂದಲೂ ಪರಿಸರ ಮತ್ತು ಅರ್ಥ ವ್ಯವಸ್ಥೆ ಪರಸ್ಪರ ಸಾಗಿದೆ. ಲಭ್ಯ ಇರುವ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿ ಹೊಂದುವ ಗ್ರಾಹಕರು ನಾವಲ್ಲ. ಅವುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಮುನ್ನಡೆಯುವ ಬಗ್ಗೆ ವಿಚಾರ ಮಾಡಬೇಕು ಎಂದು ಕಿವಿಮಾತು ಹೇಳಿದರು. ಇಲ್ಲಿಯ ಜನತೆ ಪರಿಸರದೊಂದಿಗೆ ಬದುಕುತ್ತಿದ್ದಾರೆ‌. ಏಲಕ್ಕಿ, ದಾಲ್ಚಿನ್ನಿ, ಕಾಳುಮೆಣಸು ಸೇರಿದಂತೆ ಹಲವು ಮಸಾಲೆ ಉತ್ಪನ್ನ ಬೆಳೆಯುವ ಫಲವತ್ತಾದ ಭೂಮಿ ಇದಾಗಿದೆ ಎಂದು ಬಣ್ಣಿಸಿದರು.

ಕೆಮಿಕಲ್‌ ತ್ಯಾಜ್ಯ ದುರ್ನಾತ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೂ ದೂರು!

ನಿಸರ್ಗ ಕೇವಲ ಮನುಷ್ಯನಿಗೆ ಸೀಮಿತವಾಗಿಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಪ್ರಾಣಿ ಪಕ್ಷಿಗಳಿಗೂ ಅದು ಸಲ್ಲಬೇಕು. ಈಗಿನ ಪೀಳಿಗೆ ಈ ಸತ್ಯದೊಂದಿಗೆ ಅಧ್ಯಯನ ನಡೆಸುತ್ತಾ, ಮುಂದಿನ ಪೀಳಿಗೆಗೂ ಅರಿವು ಮೂಡಿಸಬೇಕು ಎಂದರು. ಅರಣ್ಯ ಶ್ವಾಸಕೋಶ ಇದ್ದಂತೆ. ಶ್ವಾಸಕೋಶ ಸರಿಯಾಗಿದ್ದರೆ ಮಾತ್ರ ಉಸಿರಾಡಬಹುದು. ವಾತಾವರಣದ ಏರುಪೇರು ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ. ಈ ಸವಾಲು ಎದುರಿಸಲು ಪರಿಸರ ಉಳಿಸಬೇಕು‌. ಮನುಷ್ಯನ ಅತಿಯಾಸೆಗೆ ಪರಿಸರ ನಾಶವಾಗುತ್ತಿದ್ದರೆ ಭೂಮಿ ತಾಯಿ ಕ್ಷಮಿಸಲಾರಳು ಎಂದು ಎಚ್ಚರಿಸಿದರು. ಕಳೆದೊಂದು ದಶಕದಲ್ಲಿ ಭಾರತ ಆರ್ಥಿಕವಾಗಿ ಬೆಳವಣಿಗೆ ಹೊಂದಿದೆ. ಜಗತ್ತಿನ ದೃಷ್ಟಿ ನಮ್ಮ ಮೇಲಿದೆ. ದೇಶದ ಯುವಶಕ್ತಿ ಜಗತ್ತಿನ ಚಿತ್ರಣ ಬದಲಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ನೆನಪಿನಲ್ಲಿಡಿ ಎಂದರು.

ಭಾರತವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಪ್ರಾಚೀನ ಕಾಲದಿಂದಲೂ ಈ ನೆಲದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರಲಾಗಿತ್ತು. ಪರಿಸರದೊಂದಿಗೆ ಬದುಕುವ ಕಲೆಯನ್ನು ಪೂರ್ವಜರು ಕರಗತ ಮಾಡಿಕೊಂಡಿದ್ದರು ಎಂದರು. ಕೇವಲ ಸಸಿ ನಾಟಿ ಮಾಡುವುದನ್ನೇ ಅರಣ್ಯ ರಕ್ಷಣೆ ಎಂದು ಭಾವಿಸಬೇಕಿಲ್ಲ. ಸಸ್ಯ ಸಂಪತ್ತು, ಜೀವ ವೈವಿಧ್ಯತೆಯ ಉಳಿವು, ಗಾಳಿ, ನೀರನ್ನು ಸಂರಕ್ಷಿಸಬೇಕಾಗಿದೆ. ಗಾಳಿ, ನೀರು ಮನುಷ್ಯನ ಆರೋಗ್ಯಯುತ ಜೀವನಕ್ಕೆ ಅಗತ್ಯ. ಈ ಕಾರಣದಿಂದಲೇ ನಮ್ಮ ಪೂರ್ವಜರು ನೀರು ಮತ್ತು ಗಾಳಿಗೆ ದೇವರ ಸ್ಥಾನಮಾನ ನೀಡಿ ಪೂಜಿಸುತ್ತಿದ್ದರು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್. ಪಾಟೀಲ ಇದ್ದರು. ಅರಣ್ಯ ಕಾಲೇಜಿನ ಡೀನ್ ಆರ್.ವಾಸುದೇವ ಕಾರ್ಯಕ್ರಮ ನಿರ್ವಹಿಸಿದರು.

ಕನ್ನಡದ ಕೃತಿಗಳ ಭಾಷಾಂತರಕ್ಕೆ ಸಹಕಾರ: ಸಿಎಂ ಸಿದ್ದರಾಮಯ್ಯ

ತಾಯಿ ನೆನಪಿನಲ್ಲಿ ಸಸಿ ನಾಟಿ: ಕಾಲೇಜಿನ ಆವರಣದಲ್ಲಿ ಜಗದೀಪ್ ಧನಕರ್ ತಮ್ಮ ತಾಯಿ ಕೇಸರಿದೇವಿ ಹೆಸರಿನಲ್ಲಿ, ಅವರ ಪತ್ನಿ ಸುದೇಶ ಧನಕರ್ ಅವರು ಅವರ ತಾಯಿ ಭಗವತಿದೇವಿ ಹಾಗೂ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ತಮ್ಮ ತಾಯಿ ಸುಮನಬಾಯಿ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು. ಶಿರಸಿಯ ಅರಣ್ಯ ಕಾಲೇಜು ವಿದ್ಯಾರ್ಥಿಗಳನ್ನು ಧನಕರ್ ಸಂಸತ್ ಭವನಕ್ಕೆ ಆಹ್ವಾನಿಸಿದರು. ಅಲ್ಲಿ ಸಂವಾದ ನಡೆಸುವುದಾಗಿ ಘೋಷಿಸಿದರು. ಶಿರಸಿ ಸಮಾರಂಭದಲ್ಲಿ ಸಂವಾದ ನಡೆಸದೇ ಕೇವಲ ಭಾಷಣಕ್ಕಷ್ಟೇ ಸೀಮಿತಗೊಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌