ಈ ಸಲ ಬೇಸಿಗೆ ಕಳೆದ ವರ್ಷಕ್ಕಿಂತಲೂ ಸುಡಲಿದೆ ! ಬೆಂಗಳೂರು ಗತಿ ಏನು?

By Kannadaprabha News  |  First Published Mar 13, 2020, 10:17 AM IST

 ಈ ಸಲದ ಬೇಸಿಗೆಯೂ ಅತ್ಯಂತ ಬಿಸಿಯಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಕಳೆದ ಬಾರಿಗಿಂತಲೂ ಬೆಂಗಳೂರು ಸುಡಲಿದೆ ಎಂದು ಹೇಳಿದೆ.


ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು [ಮಾ.13]:  ರಾಜ್ಯದ ಜನತೆ ಈ ಬಾರಿಯ ಬೇಸಿಗೆ ಅವಧಿಯಲ್ಲಿ ಸಾಮಾನ್ಯಕ್ಕಿಂತ ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟುಹೆಚ್ಚಿನ ಬಿಸಿಲು ಎದುರಿಸಲು ಸಿದ್ಧರಾಗಬೇಕಿದೆ.

Latest Videos

ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಅಂದರೆ 0.5 ಡಿಗ್ರಿ ನಿಂದ 1.0 ಡಿಗ್ರಿ ಸೆಲ್ಸಿಯಸ್‌ ವರೆಗೆ ಗರಿಷ್ಠ ಉಷ್ಣಾಂಶ, ಇನ್ನು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆಗಿಂತ 0.5 ಡಿಗ್ರಿ ಸೆಲ್ಸಿಯಸ್‌ ಅಷ್ಟುಗರಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕೇವಲ ಗರಿಷ್ಠ ಉಷ್ಣಾಂಶ ಮಾತ್ರವಲ್ಲ ಕನಿಷ್ಠ ಉಷ್ಣಾಂಶದಲ್ಲಿಯೂ ಏರುಪೇರು ಆಗಲಿದ್ದು, ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾರ್ಚಿಂದ  ಮೇ ಅವಧಿಯಲ್ಲಿ ಕನಿಷ್ಠ ಉಷ್ಣಾಂಶ ವಾಡಿಕೆ ಪ್ರಮಾಣಕ್ಕಿಂತ 1 ಡಿಗ್ರಿ ಸೆಲ್ಸಿಯಸ್‌, ದಕ್ಷಿಣ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ 0.5 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಲಿದೆ ಎಂದು ಆತಂಕಕಾರಿ ಮಾಹಿತಿ ನೀಡಿದೆ.

ಬೇಸಿಗೆಯಲ್ಲಿ ವಿಸಿಟ್ ಮಾಡಬಹುದಾದ ಬೆಸ್ಟ್ ಕೂಲ್‌ ಕೂಲ್‌ ತಾಣಗಳು...

ಹವಾಮಾನ ಇಲಾಖೆಯ ಈವರೆಗಿನ ಅಂಕಿ ಅಂಶಗಳ ಪ್ರಕಾರ 1928ರ ಮೇ 23ರಂದು ರಾಯಚೂರಿನಲ್ಲಿ 45.6 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಇಡೀ ರಾಜ್ಯದಲ್ಲಿ ಈವರೆಗೆ ದಾಖಲಾದ ಅತಿ ಹೆಚ್ಚು ಉಷ್ಣಾಂಶವಾಗಿದೆ. ಪ್ರಸ್ತುತ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 35-36 ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟಿದ್ದು, ಮಾಚ್‌ರ್‍ ಮೂರನೇ ವಾರದ ನಂತರ 40ರ ಗಡಿ ದಾಟಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಮೇಲ್ಮೈ ಸುಳಿಗಾಳಿ ಹಾಗೂ ಗಾಳಿಯ ಒತ್ತಡ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಬಿಸಿಲು ಕಡಿಮೆ ಇದೆ. ಜತೆಗೆ ಕಳೆದ ಮಳೆಗಾಲದಲ್ಲಿ ಉತ್ತಮ ಮಳೆಯಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದೆ. ಮಾಚ್‌ರ್‍ ಮೂರನೇ ವಾರದಿಂದ ಉಷ್ಣಾಂಶ ಹೆಚ್ಚಾಗಿ ಬಿಸಿಲ ಧಗೆ ಅಧಿಕಗೊಳ್ಳಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ಕುಮಾರ್‌ ಮಾಹಿತಿ ನೀಡಿದ್ದಾರೆ.

ರಾಜಧಾನಿಯಲ್ಲಿ 35 ಡಿಗ್ರಿ ಸೆಲ್ಸಿಯಸ್‌

ಪ್ರಸಕ್ತ ವರ್ಷದ ಮಾಚ್‌ರ್‍ನಲ್ಲಿ ಅತಿ ಹೆಚ್ಚಿನ ಉಷ್ಣಾಂಶ ಗುರುವಾರ ನಗರದಲ್ಲಿ ದಾಖಲಾಗಿದ್ದು, ಗರಿಷ್ಠ ಉಷ್ಣಾಂಶ 34.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಏಪ್ರಿಲ್‌ ನಂತರದಿಂದ ನಗರದಲ್ಲಿ ಉಷ್ಣಾಂಶದ ಪ್ರಮಾಣ ಏರಿಕೆಯಾಗುತ್ತಲೇ ಸಾಗಲಿದೆ. 2017ರ ಮಾ.26 ರಂದು ಅತಿ ಹೆಚ್ಚು 37.2 ಡಿಗ್ರಿಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಬೇಸಿಗೆ ಅವಧಿಯಲ್ಲಿ ಬೇಸಿಲು, ಧಗೆ, ಸೆಕೆ ಹೆಚ್ಚಾಗುವುದರಿಂದ ಸಂಜೆ ಅಥವಾ ರಾತ್ರಿಯಾಗುತ್ತಿದ್ದಂತೆ ವಾತಾವರಣ ಏಕಾಏಕಿ ತಂಪಾಗುವುದರಿಂದ ಮಳೆಯಾಗುವ ಸಾಧ್ಯತೆಯೂ ಇರಲಿದೆ. ಉಷ್ಣಾಂಶ ಈ ಬಾರಿ ಹೆಚ್ಚಾಗುವುದರಿಂದ ಮಳೆಯ ಸಾಧ್ಯತೆಯೂ ಹೆಚ್ಚಾಗಿರಲಿದೆ.

- ಸಿ.ಎಸ್‌.ಪಾಟೀಲ್‌, ನಿರ್ದೇಶಕ, ಭಾರತೀಯ ಹವಾಮಾನ ಇಲಾಖೆ

ಬೆಂಗಳೂರಿನಲ್ಲಿ ವಾಡಿಕೆ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌ನಲ್ಲಿ)

ತಿಂಗಳು ಗರಿಷ್ಠ ಕನಿಷ್ಠ

ಮಾಚ್‌ರ್‍ 31.1 20.0

ಏಪ್ರಿಲ್‌ 34.0 22.0

ಮೇ 33.3 21.7

ಮಾರ್ಚ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!