
ಬೆಂಗಳೂರು (ಏ.24): ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿ ಕಳವಳಕಾರಿಯಾಗಿದ್ದು, ಬಾಹ್ಯ ಶಕ್ತಿಗಳು ನಮ್ಮನ್ನು ಕೆರಳಿಸಿದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಇರುವುದು ಬಹಳ ಮುಖ್ಯ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಈ ದುರಂತವನ್ನು ಬುದ್ಧಿವಂತ ಮತ್ತು ಕಾರ್ಯತಂತ್ರದ ರೀತಿಯಲ್ಲಿ ನಿಭಾಯಿಸುತ್ತಿರುವ ಕೇಂದ್ರ ಸರ್ಕಾರದ ಜೊತೆ ನಾನು ಮತ್ತು ನನ್ನ ಪಕ್ಷ ನಿಲ್ಲುತ್ತೇವೆ ಎಂದಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಘಟನೆ ತುಂಬಾ ನೋಯಿಸಿದ್ದು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರ ಕುಟುಂಬಗಳು ಮತ್ತು ಸ್ನೇಹಿತರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹೀನ ಕೃತ್ಯ: ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೂವರು ಕರ್ನಾಟಕದವರು ಮೃತಪಟ್ಟಿದ್ದಾರೆ. ಇದು ಹೀನ ಕೃತ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಖಂಡಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು- ಕಾಶ್ಮೀರದಲ್ಲಿ ಚುನಾವಣೆ ನಡೆದ ನಂತರ ಓಮರ ಅಬ್ದುಲ್ಲಾ ಸಿಎಂ ಆಗಿದ್ದಾರೆ. ಲಕ್ಷಾಂತರ ಜನರು ಪ್ರತಿನಿತ್ಯ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಗುಂಡಿನ ದಾಳಿಯನ್ನ ಇಡೀ ಪ್ರಪಂಚವೇ ಖಂಡಿಸುತ್ತದೆ. ಎಲ್ಲಾ ಕನ್ನಡಿಗರು ಈ ದಾಳಿಯನ್ನ ಖಂಡಿಸುತ್ತೇವೆ ಎಂದರು. ಪತ್ನಿ, ಪುತ್ರ ಎದುರೇ ಶಿವಮೊಗ್ಗದ ಮಂಜುನಾಥ್ ರನ್ನ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಹಿಂದುಗಳನ್ನ ಟಾರ್ಗೆಟ್ ಮಾಡಿ ದಾಳಿ ನಡೆ ಸಿದ್ದಾರೆ. ಮೋದಿ, ಅಮಿತ್ ಶಾ ಈ ದಾಳಿಗೆ ತಕ್ಕ ಉತ್ತರ ಕೊಡುತ್ತಾರೆ. ಈಗಾಗಲೇ ಇಬ್ಬರು ಉಗ್ರರನ್ನ ಹತ್ಯೆ ಮಾಡಲಾಗಿದೆ. ಭಾರತೀಯ ಸೇನೆಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರುತ್ತದೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಅವರು ಹೇಳಿದರು.
ಬೃಹತ್ ಪ್ರತಿಭಟನೆ: ಬೆಲೆ ಏರಿಕೆಯ ಖಂಡಿಸಿ ಬೆಂಗಳೂರು ನಗರದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು. ಬೆಲೆ ಏರಿಕೆ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ. ಏ. 12ರಂದು ಬೆಂಗಳೂರು ನಗರದಲ್ಲಿ ಕುಮಾರಣ್ಣನ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಎರಡು ವರ್ಷದಲ್ಲಿ ನಿರಂತರವಾಗಿ ಬೆಲೆ ಏರಿಕೆ ಬರೆಯ ಶಾಕ್ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ರಾಜ್ಯದಲ್ಲಿ ಪ್ರಾರಂಭವಾಗಿದೆ. ಬೆಂಗಳೂರು ನಗರದಲ್ಲಿ ಬೃಹತ್ ರ‍್ಯಾಲಿ ಮೂಲಕ ಬೆಲೆ ಏರಿಕೆ ಖಂಡಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದು ಅವರು ತಿಳಿಸಿದರು.
ಸರಣಿ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಚಿವ ಈಶ್ವರ ಖಂಡ್ರೆ
ನಮ್ಮ ಮಿತ್ರ ಪಕ್ಷವಾದ ಬಿಜೆಪಿಯು ಅವರದ್ದೇ ಅದ ಬೆಲೆ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದರು. ವೈಯಕ್ತಿಕವಾಗಿ ದೇವೇಗೌಡರ ಕುಟುಂಬವನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇತಗಾನಹಳ್ಳಿ ಜಮೀನನ್ನ ಕುಮಾರಣ್ಣ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತನಿಖೆಗೆ ವಿಶೇಷ ತಂಡವನ್ನ ರಚನೆ ಮಾಡಿದ್ದಾರೆ. ಇದು ನ್ಯಾಯಾಲದ ಅಂಗಳದಲ್ಲಿದೆ ಅಲ್ಲದೆ, ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕುಮಾರಣ್ಣ ಅವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಲ್ಲ, ಅವರ ಹೆಸರಿಗೆ ಕಳಂಕ ತರಬೇಕು ಅನ್ನುವ ಕಾಂಗ್ರೆಸ್ ಉದ್ದೇಶ ಸಂಪೂರ್ಣ ವಿಫಲವಾಗುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ