ಜಗಳವಾಡಲು ನಾವೇನು ಮಕ್ಕಳಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

By Web DeskFirst Published Dec 28, 2018, 12:57 PM IST
Highlights

ವೇಣು ಎದುರೇ ಜಟಾಪಟಿ ಕುರಿತ ವರದಿ ಅಲ್ಲಗಳೆದ ಇಬ್ಬರೂ ನಾಯಕರು| ಖಾತೆ ವಿಚಾರದಲ್ಲಿ ಬಿಕ್ಕಟ್ಟಿಲ್ಲ ಎಂದು ಸ್ಪಷ್ಟನೆ| ಜಗಳವಾಡಲು ನಾವೇನು ಮಕ್ಕಳಲ್ಲ: ಸಿದ್ದು

ಬೆಂಗಳೂರು[ಡಿ.28]: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಖಾತೆ ಮರು ಹಂಚಿಕೆ ಕುರಿತ ಸಭೆಯಲ್ಲಿ ನಮ್ಮ ನಡುವೆ ತಿಕ್ಕಾಟ ಉಂಟಾಗಿದೆ ಎಂದು ಅಪಪ್ರಚಾರ ನಡೆಯುತ್ತಿದೆ. ಜಗಳವಾಡಲು ನಾವೇನು ಮಕ್ಕಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಟ್ವೀಟ್‌ ಮಾಡಿ, ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಖಾತೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ನಡುವೆ ತಿಕ್ಕಾಟ ನಡೆದಿದೆ ಎನ್ನುವ ಸುದ್ದಿಗಳಿಗೆ ಸಂಬಂಧಿಸಿ ಸ್ಪಷ್ಟನೆ ನೀಡಿದರು.

ನಮ್ಮ ನಡುವಿನ ಸಂಬಂಧ ಕೆಡಿಸುವ ಯತ್ನ ನಾನು ಮುಖ್ಯಮಂತ್ರಿಯಾಗಿದ್ದಾಗ ಐದು ವರ್ಷಗಳ ಕಾಲ ನಡೆಯಿತು. ಅದನ್ನು ವಿರೋಧಪಕ್ಷಗಳು ಈಗಲೂ ಮುಂದುವರೆಸಿವೆ. ವಿರೋಧ ಪಕ್ಷಗಳ ಕೆಲ ನಾಯಕರು ಹತಾಶರಾಗಿ ಹರಡುತ್ತಿರುವ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಇಂತಹ ಸುದ್ದಿಗಳನ್ನು ಪ್ರಕಟಿಸುವ ಮೊದಲು ಪರಾಮರ್ಶಿಸುವುದು ಒಳ್ಳೆಯದು. ಎಲ್ಲ ಸಚಿವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದಲೇ ಖಾತೆಗಳು ಹಂಚಿಕೆಯಾಗಲಿವೆ. ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗಿಲ್ಲ, ಎಲ್ಲವೂ ಸಸೂತ್ರವಾಗಿಯೇ ನಡೆದಿದೆ. ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ ಎಂದರು.

ಟ್ವಿಟರ್‌ನಲ್ಲಿ ಕಿಡಿ:

‘ನನ್ನ ಹಾಗೂ ಪರಮೇಶ್ವರ್‌ ಕುರಿತು ಬರುವ ಸುದ್ದಿಗಳನ್ನು ನೋಡಿ ನಕ್ಕು ಸುಮ್ಮನಾಗುತ್ತೇವೆ. ಖಾತೆ ಮರು ಹಂಚಿಕೆ ಕುರಿತ ಸಭೆಯಲ್ಲಿ ಸೌಹಾರ್ದಯುತ ಮಾತುಕತೆ ನಡೆದಿದ್ದು, ಚರ್ಚೆ ಕುರಿತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೈಕಮಾಂಡ್‌ಗೆ ವರದಿ ನೀಡುತ್ತಾರೆ. ಅಂತಿಮ ತೀರ್ಮಾನವನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ತೆಗೆದುಕೊಳ್ಳುತ್ತಾರೆ. ಸಭೆಯಲ್ಲಿ ಎಲ್ಲರೂ ಹಿರಿಯ ನಾಯಕರು ಭಾಗವಹಿಸಿದ್ದೆವು. ಜಗಳವಾಡಲು ಅಲ್ಲಿ ಯಾರೂ ಮಕ್ಕಳಿರಲಿಲ್ಲ’ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಟಾಂಗ್‌ ನೀಡಿದ್ದಾರೆ.

click me!