ಸಿದ್ದು ಜೊತೆ ಡಿಶುಂ ಡಿಶುಂ ನಡೆದಿಲ್ಲ: ಪರಮೇಶ್ವರ್

By Web DeskFirst Published Dec 28, 2018, 12:48 PM IST
Highlights

ಯಾವುದೇ ಖಾತೆ ಬಿಟ್ಟುಕೊಡಲು ನನಗೆ ತಕರಾರಿಲ್ಲ| ಗೃಹ ಖಾತೆ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರ ಅಂತಿಮ| ಈ ಸಂಬಂಧ ಜಟಾಪಟಿ ನಡೆದಿದೆ ಎಂಬುದು ಸುಳ್ಳು

ಬೆಂಗಳೂರು[ಡಿ.28]: ಬುಧವಾರ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ. ಇದೆಲ್ಲಾ ಸುಳ್ಳು ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.

ಗುರುವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಬಳಿ ಇರುವ ಗೃಹ ಇಲಾಖೆ ಸೇರಿದಂತೆ ಯಾವ ಖಾತೆ ಬಿಟ್ಟುಕೊಡಲೂ ನನಗೆ ತಕರಾರಿಲ್ಲ. ನನ್ನನ್ನೂ ಸೇರಿ ಎಲ್ಲ ಸಚಿವರಿಗೂ ಒಂದೇ ಫಾರ್ಮುಲಾ ಅನ್ವಯವಾಗುತ್ತದೆ. ಯಾರಿಗೆ ಯಾವ ಖಾತೆ ಎಂಬುದನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ’ ಎಂದು ಹೇಳಿದರು. ಗೃಹ ಖಾತೆ ಬಿಟ್ಟುಕೊಡಿ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಗರಂ ಆದ ಪರಮೇಶ್ವರ್‌, ಸಿದ್ದು ಮೇಲೆ ಕೂಗಾಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

‘ನನ್ನ ಖಾತೆಯಿಂದ ಖಾತೆ ಮರು ಹಂಚಿಕೆ ವಿಳಂಬವಾಗಿದೆ ಎಂಬುದು ಸುಳ್ಳು. ಖಾತೆಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್‌. ನನ್ನ ಯಾವ ಖಾತೆ ಬಿಟ್ಟುಕೊಡಲೂ ಯಾವ ತಕರಾರಿಲ್ಲ. ನಾನು ಯಾವ ಖಾತೆ ಬಗ್ಗೆಯೂ ಇಂತಹದ್ದೇ ಖಾತೆ ಇಟ್ಟುಕೊಳ್ಳಬೇಕು ಎಂದು ಹೇಳಿಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ನಾನು ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಚರ್ಚೆ ಮಾಡಿ ಹೈಕಮಾಂಡ್‌ಗೆ ಅಭಿಪ್ರಾಯ ತಿಳಿಸಿದ್ದೇವೆ. ಅವರ ಅಂತಿಮ ನಿರ್ಧಾರದಂತೆ ಎಲ್ಲರೂ ನಡೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಖಾತೆ ಮರು ಹಂಚಿಕೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಕೇರಳದಿಂದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಆಗಮಿಸಿದ್ದು ಎರಡು ದಿನ ತಡವಾಯಿತು. ಹೀಗಾಗಿ ಪ್ರಕ್ರಿಯೆ ವಿಳಂಬವಾಗಿದೆ. ನನ್ನ ಖಾತೆಗಳಿಗೂ ವಿಳಂಬಕ್ಕೂ ಸಂಬಂಧವಿಲ್ಲ. ನಮ್ಮಲ್ಲಿ ಹೈಕಮಾಂಡ್‌ ಸಂಸ್ಕೃತಿ ಇದೆ. ಖಾತೆ ಮರು ಹಂಚಿಕೆ ಬಗ್ಗೆ ನಾನು ಸಿದ್ದರಾಮಯ್ಯ ಹಾಗೂ ಕೆ.ಸಿ. ವೇಣುಗೋಪಾಲ್‌ ಕುಳಿತು ಚರ್ಚೆ ಮಾಡಿದ್ದೇವೆ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿದ್ದೇವೆ. ರಾಹುಲ್‌ಗಾಂಧಿ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ಸರ್ಕಾರ ಬೀಳುವುದು ಸುಳ್ಳು:

24 ಗಂಟೆಯಲ್ಲಿ ಸರ್ಕಾರ ಬೀಳುತ್ತದೆ ಎಂಬ ಬಿಜೆಪಿ ಶಾಸಕ ಉಮೇಶ್‌ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿ, ಉಮೇಶ್‌ ಕತ್ತಿ ಅವರು ಹೇಳಿದ 24 ಗಂಟೆ ಕಳೆದಿದೆ ಉಳಿದೆಲ್ಲವೂ ನಿಮಗೇ ಗೊತ್ತಿದೆ. ನಮ್ಮ ಶಾಸಕರೆಲ್ಲರೂ ನಮ್ಮ ಸಂಪರ್ಕದಲ್ಲೇ ಇದ್ದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು.

click me!