
ಮಂಡ್ಯ (ಜು.09): ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ ಅಣೆಕಟ್ಟೆಗೆ ಎರಡು ಅಡಿ ನೀರು ಹರಿದು ಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಕಾರಣ ಕೆಆರ್‌ಎಸ್ ಅಣೆಕಟ್ಟೆಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಣೆಕಟ್ಟೆಗೆ ಶನಿವಾರ ಬೆಳಗ್ಗೆ 13449 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 82 ಅಡಿಗೆ ಏರಿಕೆಯಾಗಿದೆ. ಅಣೆಕಟ್ಟೆಯ ನೀರಿನ ಸಂಗ್ರಹ 3.316 ಟಿಎಂಸಿ ಅಡಿಗೆ ಏರಿದೆ.
ಶುಕ್ರವಾರ ಬೆಳಿಗ್ಗೆ ಜಲಾಶಯದಲ್ಲಿ 79.50 ಅಡಿ ನೀರಿತ್ತು, ಸಂಜೆ ವೇಳೆಗೆ 80.40 ತಲುಪಿತ್ತು, ಇದೀಗ ಎರಡು ಅಡಿ ನೀರು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 119.44 ಅಡಿ ನೀರು ಸಂಗ್ರಹವಾಗಿತ್ತು. ಅಂದು ಅಣೆಕಟ್ಟೆಗೆ 38858 ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ 3453 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಜಲಾಶಯದಲ್ಲಿ 33.964 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಮಳೆಯಾಗಿ ಈ ವೇಳೆಗೆ ಉತ್ತಮ ಒಳಹರಿವು ದಾಖಲಾಗುತ್ತಿತ್ತು. ಆದರೆ ಈ ವರ್ಷ ಮುಂಗಾರು ದುರ್ಬಲದಿಂದ ಮಳೆ ಕೊರತೆಯಾಗಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿತ್ತು.
ಮತ್ತೆ ಸರ್ಕಾರದ ವಿರುದ್ಧ ಸಿಡಿದ್ದೆದ್ದ ಅಂಗನವಾಡಿ ಕಾರ್ಯಕರ್ತೆಯರು: ನಾಳೆಯಿಂದ ಪ್ರತಿಭಟನೆ
ಡೆಡ್ ಸ್ಟೋರೇಜ್ ಮಟ್ಟತಲುಪುವ ಸ್ಥಿತಿಯಲ್ಲಿತ್ತು. ಇದೀಗ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಒಂದೇ ದಿನದಲ್ಲಿ ಎರಡು ಅಡಿ ನೀರು ಹರಿದು ಬಂದಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಈ ಬಾರಿ ಮುಂಗಾರು ಬಿತ್ತನೆಗೆ ಮಳೆ ಅಡ್ಡಿಯಾಗುತ್ತದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದ್ದು, ಪೂರ್ವ ಮುಂಗಾರು ಕೈಕೊಟ್ಟಕಾರಣ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಜಲಾಶಯದಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಕಾಯ್ದಿರಿಸಲಾಗಿತ್ತು. ಇದೀಗ ಕೆಆರ್‌ಎಸ್ ಒಡಲಿಗೆ ಹೆಚ್ಚಿನ ನೀರು ಹರಿದುಬರುತ್ತಿರುವುದು ತುಸು ಸಮಾಧಾನ ಮೂಡಿಸಿದೆ.
ರಾಹುಲ್ ಕೇಸಲ್ಲಿ ‘ಕೈ’ ಹೋರಾಟ ಕೋರ್ಟ್ ವಿರುದ್ಧವೇ: ಪ್ರಲ್ಹಾದ್ ಜೋಶಿ ಪ್ರಶ್ನೆ
ಈ ಮಧ್ಯೆ ತಮಿಳುನಾಡು ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಮನವಿ ಮಾಡಿ ಜೂನ್ ತಿಂಗಳ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತ್ತು. ಈ ಬಗ್ಗೆ ಜಲ ಸಂಪನ್ಮೂಲ ಇಲಾಖೆ ಸಚಿವರು ಶೀಘ್ರ ಅಧಿಕಾರಿಗಳ ಸಭೆ ಕರೆದು ನೀರಿನ ಸಂಗ್ರಹದ ಕುರಿತು ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಒಳ ಹರಿವಿನ ಪ್ರಮಾಣ ಹೆಚ್ಚಿರುವುದು ತಮಿಳುನಾಡಿಗೂ ನೀರೊದಗಿಸುವ ಭರವಸೆ ಮೂಡಿಸಿದೆ. ಇನ್ನು 124.80 ಗರಿಷ್ಠ ಮಟ್ಟ ಹಾಗೂ 49.452 ಟಿಎಂಸಿ ಸಾಮಾರ್ಥ್ಯದ ಡ್ಯಾಂನಲ್ಲಿ 12.915 ಟಿಎಂಸಿ ನೀರಿದೆ. ಡ್ಯಾಂನ ಒಳಹರಿವು 14,556 ಕ್ಯೂಸೆಕ್ ಇದ್ದು, ಡ್ಯಾಂ ಹೊರಹರಿವು 367 ಕ್ಯೂಸೆಕ್ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ