ಕೊಟ್ಟ ಮಾತಿನಂತೆ ನಡೆದುಕೊಳ್ಳಿ: ಡಿ.ಕೆ. ಶಿವಕುಮಾರ್‌ಗೆ ಸಿಎಂ ಪಟ್ಟ ನೀಡಲು ನಂಜಾವಧೂತ ಸ್ವಾಮೀಜಿ ಆಗ್ರಹ!

Published : Nov 27, 2025, 02:59 PM IST
Nanjavadhutha Mahaswamiji DK Shivakumar

ಸಾರಾಂಶ

ಕರ್ನಾಟಕ ಸಿಎಂ ಕುರ್ಚಿ ಗೊಂದಲದ ಕುರಿತು ನಂಜಾವಧೂತ ಸ್ವಾಮೀಜಿಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಮತ್ತು ಒಕ್ಕಲಿಗ ಸಮುದಾಯವನ್ನು ಲಘುವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು (ನ.27): ಕರ್ನಾಟಕ ರಾಜಕಾರಣದಲ್ಲಿ ಮುಂದುವರಿದಿರುವ ಮುಖ್ಯಮಂತ್ರಿ ಗಾದಿಯ ಗೊಂದಲ ಮತ್ತು ಅಧಿಕಾರ ಹಂಚಿಕೆ ಸೂತ್ರದ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ  ನಂಜಾವಧೂತ ಸ್ವಾಮೀಜಿ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಹಿರಿಯರು ಕೊಟ್ಟ ಮಾತಿನಂತೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಗೆ ಒಂದು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಒಳ್ಳೆಯದಲ್ಲ. ಈ ಗೊಂದಲಗಳು ಆಡಳಿತದ ಮೇಲೆ ಹಾಗೂ ಶ್ರೀ ಸಾಮಾನ್ಯರ ಮೇಲೆ ಪರಿಣಾಮ ಬೀರಬಾರದು ಎಂದು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಮಾತು ತಪ್ಪಿದರೆ ಪರಮಾತ್ಮ ಮೆಚ್ಚುವುದಿಲ್ಲ

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಅವಕಾಶ ನೀಡಬೇಕು ಎಂಬುದು ಒಕ್ಕಲಿಗ ಸಮುದಾಯದ ಪ್ರಬಲ ಆಶಯವಾಗಿದೆ. ಮಾತು ಕೊಟ್ಟಿದ್ದೇ ಆದರೆ, ಮಾತಿನಂತೆ ನಡೆದುಕೊಳ್ಳಬೇಕು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ವಾಕ್ಯವನ್ನು ನಾವು ಪರಿಪಾಲಿಸಿಕೊಂಡು ಬಂದವರು. ಆ ಪಕ್ಷದ ಹಿರಿಯರು ಮಾತು ಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಸ್ವಾಮೀಜಿ ಒತ್ತಿ ಹೇಳಿದರು.

ಸಮುದಾಯವನ್ನು 'ಗ್ರಾಂಟೆಡ್' ಆಗಿ ಪರಿಗಣಿಸಬೇಡಿ

ಒಕ್ಕಲಿಗ ಸಮುದಾಯವನ್ನು ರಾಜಕೀಯ ಪಕ್ಷಗಳು 'ಗ್ರಾಂಟೆಡ್' ಆಗಿ ಪರಿಗಣಿಸಿವೆ ಎಂಬ ಅನುಮಾನ ಕಾಡುತ್ತಿದೆ. 'ಇದು ಇವತ್ತಿನ ಅನುಮಾನ ಅಲ್ಲ. ಹಿಂದೆ ದೇವೇಗೌಡರು ಪಕ್ಷ ಕಟ್ಟಿ ಅಧಿಕಾರಕ್ಕೆ ತಂದಾಗಲೂ ಗೊಂದಲಗಳಾದವು. ಎಸ್.ಎಂ. ಕೃಷ್ಣ ಅವರು ಅಧಿಕಾರ ಪಡೆಯಲು 32 ವರ್ಷ ಶ್ರಮಿಸಬೇಕಾಯಿತು. ನಂತರ ಕುಮಾರಣ್ಣ ಅವರು ಸಾಲ ಮನ್ನಾ ಮಾಡಿದಾಗಲೂ ಅವರನ್ನು ಇಳಿಸಲು ಏನೆಲ್ಲ ಘಟನೆಗಳು ನಡೆದವು. ಇವೆಲ್ಲವೂ ಆರೋಗ್ಯಕರ ಬೆಳವಣಿಗೆಗಳಲ್ಲ' ಎಂದು ಸ್ವಾಮೀಜಿ ಸಮುದಾಯದ ನಾಯಕರಿಗೆ ಹಿಂದಿನಿಂದಲೂ ಆಗಿರುವ ಅನ್ಯಾಯದ ಬಗ್ಗೆ ಬೆಳಕು ಚೆಲ್ಲಿದರು.

ಬೇಗನೆ ಗೊಂದಲ ಬಗೆಹರಿಸಿ

ಈ ವಿಚಾರದಲ್ಲಿ ಹೈಕಮಾಂಡ್‌ನವರು ಸ್ವತಃ ಬಂದು ಮಾತುಕತೆ ನಡೆಸಿರುವ ವಾಸ್ತವಾಂಶವನ್ನು ಜನರಿಗೆ ತಿಳಿಸಬೇಕು. ಸುಮ್ಮನೆ ಜನರನ್ನು ಗೊಂದಲದಲ್ಲಿ ಇಡುವುದು ಬೇಡ. ಶಿವಕುಮಾರ್ ಕೂಡ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದಾರೆ. ಹಿಂದೆ ಸಿದ್ದರಾಮಯ್ಯ 5 ವರ್ಷ ಹಾಗೂ ಈಗ ಎರಡುವರೆ ವರ್ಷ ಅಧಿಕಾರ ನಡೆಸಿದ್ದಾರೆ. ಪಕ್ಷದ ಹಿರಿಯರು ಒಂದು ಅವಕಾಶವನ್ನು ಡಿ.ಕೆ. ಶಿವಕುಮಾರ್‌ಗೆ ಮಾಡಿಕೊಡಲಿ. ಗೊಂದಲ ಹೆಚ್ಚಾಗದಂತೆ ಬೇಗ ಬಗೆಹರಿಸುವುದು ಸೂಕ್ತ' ಎಂದು ನಂಜಾವಧೂತ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ