ಪ್ರಜ್ವಲ್ ರೇವಣ್ಣಗೆ ಧ್ವನಿ ಪರೀಕ್ಷೆ: ಲೈಂಗಿಕ ವಿಡಿಯೋದಲ್ಲಿರುವ ಪುರುಷ ಧ್ವನಿ ಪತ್ತೆಹಚ್ಚಲು ಟೆಸ್ಟ್‌!

By Kannadaprabha News  |  First Published Jun 9, 2024, 5:33 AM IST

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಶೇಷ ತನಿಖಾ ದಳವು (ಎಸ್‌ಐಟಿ) ಧ್ವನಿ ಪರೀಕ್ಷೆಗೊಳಪಡಿಸಿದೆ.
 


ಬೆಂಗಳೂರು (ಜೂ.09): ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಶೇಷ ತನಿಖಾ ದಳವು (ಎಸ್‌ಐಟಿ) ಧ್ವನಿ ಪರೀಕ್ಷೆಗೊಳಪಡಿಸಿದೆ. ಪ್ರಜ್ವಲ್ ಅವರಿಂದ ಸಂಗ್ರಹಿಸಲಾದ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಎಸ್‌ಐಟಿ ರವಾನಿಸಿದ್ದು, ಈ ಬಗ್ಗೆ ಎಫ್ಎಸ್‌ಎಲ್‌ ವರದಿ ಆಧರಿಸಿ ಲೈಂಗಿಕ ವಿಡಿಯೋಗಳಲ್ಲಿರುವ ಅಪರಿಚಿತ ಪುರುಷನ ದನಿ ಬಗ್ಗೆ ಸ್ಪಷ್ಟವಾಗಲಿದೆ. ಅಲ್ಲದೆ ಪ್ರಜ್ವಲ್ ಅವರಿಗೆ ಧ್ವನಿ ಪರೀಕ್ಷೆ ಸಂಬಂಧ ಮಾದರಿ ಸಂಗ್ರಹಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.  

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್‌ ಡ್ರೈವ್ ಬಹಿರಂಗವಾಗಿತ್ತು. ಈ ಪೆನ್‌ ಡ್ರೈವ್‌ನಲ್ಲಿ ಪತ್ತೆಯಾದ ಕೆಲ ಅಶ್ಲೀಲ ವಿಡಿಯೋಗಳಲ್ಲಿ ಪುರುಷ ಧ್ವನಿ ಕೇಳಿ ಬಂದಿತ್ತು. ಆದರೆ ಪುರುಷನ ಮುಖಚಹರೆ ಕಂಡು ಬಂದಿರಲಿಲ್ಲ. ಹೀಗಾಗಿ ಆ ಪುರುಷ ಧ್ವನಿ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರಜ್ವಲ್ ಅವರಿಗೆ ಎಸ್‌ಐಟಿ ಧ್ವನಿ ಪರೀಕ್ಷೆ ನಡೆಸಿದೆ. ಈ ಅಶ್ಲೀಲ ವಿಡಿಯೋದ ಪುರುಷ ಧ್ವನಿಗೂ ಪ್ರಜ್ವಲ್ ಅವರ ಧ್ವನಿಗೂ ಹೋಲಿಕೆಯಾದರೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿಗೆ ಮಹತ್ವದ ವೈದ್ಯಕೀಯ ಪುರಾವೆ ಸಿಗಲಿದೆ ಎನ್ನಲಾಗಿದೆ.

Tap to resize

Latest Videos

ಮತ್ತೆ 4 ದಿನ ಎಸ್‌ಐಟಿ ಕಸ್ಟಡಿಗೆ: ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ಮತ್ತೆ ವಿಶೇಷ ತನಿಖಾ ದಳವು (ಎಸ್‌ಐಟಿ) ಗುರುವಾರ ವಶಕ್ಕೆ ಪಡೆದಿದೆ. ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ವಿಚಾರಣೆ ಸಲುವಾಗಿ ಆರೋಪಿಯನ್ನು ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಜೂ.10ರವರೆಗೆ ಪ್ರಜ್ವಲ್‌ರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಬಳಿಕ ನ್ಯಾಯಾಲಯ ಕಲಾಪ ಮುಗಿಸಿ ಸಿಐಡಿ ಕಚೇರಿಗೆ ಕರೆತಂದು ಮಾಜಿ ಸಂಸದರನ್ನು ಎಸ್ಐಟಿ ವಿಚಾರಣೆ ಮುಂದುವರೆಸಿದೆ.

ರೇಪ್ ಕೇಸ್: ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸಿದ ವೈದ್ಯರು

ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ: ಅತ್ಯಾಚಾರ ಪ್ರಕರಣದ ಮಹಜರ್‌ ಸಂಬಂಧ ಹಾಸನ ಜಿಲ್ಲೆ ಪ್ರಜ್ವಲ್ ಅವರನ್ನು ಎಸ್‌ಐಟಿ ಕರೆದೊಯ್ಯುವ ಸಾಧ್ಯತೆಯಿದೆ. ಅತ್ಯಾಚಾರ ಕೃತ್ಯ ನಡೆದಿದೆ ಎನ್ನಲಾದ ಹಾಸನ ನಗರದಲ್ಲಿರುವ ಸಂಸದರ ಅತಿಥಿ ಗೃಹ ಹಾಗೂ ಹೊಳೆನರಸೀಪುರದ ಮಾಜಿ ಸಂಸದರ ಮನೆ ಮಾತ್ರವಲ್ಲದೆ ಅವರಿಗೆ ಸೇರಿದ ತೋಟದ ಮನೆಗಳಲ್ಲಿ ಮಹಜರ್ ನಡೆಯಲಿದೆ ಎನ್ನಲಾಗಿದೆ.

click me!