ಪಾದರಾಯನಪುರ ಪುಂಡರ ವಿರುದ್ಧ ನೈಟ್ ಆಪರೇಷನ್: ಹಲವರ ವಶ!

By Kannadaprabha News  |  First Published Apr 20, 2020, 9:27 AM IST

ಪುಂಡರ ವಿರುದ್ಧ ರಾತ್ರಿ ಕಾರ್ಯಾಚರಣೆ| ಗಲಭೆ ಎಬ್ಬಿಸಿದವರ ಪತ್ತೆಗೆ ಇಬ್ಬರು ಡಿಸಿಪಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚನೆ| ವಿಡಿಯೋ ಸಹಾಯದಿಂದ ಹಲವರ ವಶ| ಈ ಹಿಂದೆ ಜೆ.ಜೆ.ನಗರ ಠಾಣೆಯಲ್ಲಿ ಕೆಲಸ ಮಾಡಿದ್ದ ಇನ್‌ಸ್ಪೆಕ್ಟರ್‌ಗಳೂ ಶೋಧನಾ ತಂಡಕ್ಕೆ


ಬೆಂಗಳೂರು(ಏ. 20): ಕೊರೋನಾ ವಾರಿಯ​ರ್‍ಸ್ ವಿರುದ್ಧ ಪುಂಡಾಟಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪಾದರಾಯನಪುರದಲ್ಲಿ ಭಾನುವಾರ ರಾತ್ರೋರಾತ್ರಿ ಕಿಡಿಗೇಡಿಗಳ ಪತ್ತೆ ಕಾರ್ಯಾಚರಣೆ ಆರಂಭಿಸಿದರು.

ಈ ಗಲಭೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸೌಮೆಂದು ಮುಖರ್ಜಿ ಅವರು, ಪುಂಡರ ಪತ್ತೆಗೆ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿ ಕೂಡಲೇ ಆಪರೇಷನ್‌ ಶುರು ಮಾಡಿಸಿದರು. ಈ ಹಿಂದೆ ಜೆ.ಜೆ.ನಗರ ಠಾಣೆಯಲ್ಲಿ ಕೆಲಸ ಮಾಡಿದ್ದ ಇನ್‌ಸ್ಪೆಕ್ಟರ್‌ಗಳನ್ನು ಕರೆಸಿಕೊಂಡ ಹೆಚ್ಚುವರಿ ಆಯುಕ್ತರು, ಅವರನ್ನು ಶೋಧನಾ ತಂಡದಲ್ಲಿ ಸೇರಿಸಿದರು.

Tap to resize

Latest Videos

ಬಿಬಿಎಂಪಿ ಅಧಿಕಾರಿ, ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣದ ವಿಡಿಯೋಗಳನ್ನು ಪರಿಶೀಲಿಸಿದ ಪೊಲೀಸರು, ತಡರಾತ್ರಿ ಹೊತ್ತಿಗೆ ಕೆಲವರನ್ನು ಗುರುತು ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಪಾದರಾಯನಪುರದಲ್ಲಿ ಪುಂಡಾಟ; ಪೊಲೀಸರು, ಆರೋಗ್ಯ ಸಿಬ್ಬಂದಿ ಮೇಲೆ ಎರಗಿದ್ರು!

ಸೀಲ್‌ಡೌನ್‌ ಭಾಗಶಃ ಧ್ವಂಸ:

ಸೀಲ್‌ಡೌನ್‌ ಹಿನ್ನೆಲೆಯಲ್ಲಿ ಪಾದರಾಯನಪುರ ಜನ ಸಂಚಾರಕ್ಕೆ ಹಾಕಲಾಗಿದ್ದ ಅಡೆತಡೆಗಳನ್ನು ಪುಂಡರು ಧ್ವಂಸಗೊಳಿಸಿದ್ದಾರೆ. ಕ್ರಿಕೆಟ್‌ ಬ್ಯಾಟ್‌, ಕಲ್ಲು ಸೇರಿದಂತೆ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡ ಉದ್ರಿಕ್ತರ ಗುಂಪು, ನಿರ್ಬಂಧ ತಡೆಗೋಡೆಗಳನ್ನು ಕೆಡವಿ ಹಾಕಿದ್ದಾರೆ.

ಕೊರೋನಾ ಸೋಂಕಿತ ಪತ್ತೆ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಹಾಟ್‌ಸ್ಪಾಟ್‌ ಎಂದು ಗುರುತಿಸಿದ ಬಿಬಿಎಂಪಿ, ಪೊಲೀಸರ ಸಹಕಾರದಲ್ಲಿ ಸೀಲ್‌ಡೌನ್‌ ಮಾಡಿತ್ತು. ಈಗ ಪುಂಡರ ಹಾವಳಿ ಪರಿಣಾಮ ಬಿಬಿಎಂಪಿ ಕಾರ್ಯ ವ್ಯರ್ಥವಾಗಿದೆ.

ಕಾವೇರಿ ನದಿಯಲ್ಲಿ ಮೂವರು ವಿದ್ಯಾರ್ಥಿಗಳು ಜಲಸಮಾಧಿ

ಗಲಭೆಗೆ ಮಹಿಳೆಯರು ಸಾಥ್‌!

ಪಾದರಾಯನಪುರದಲ್ಲಿ ಕೊರೋನಾ ವಾರಿಯ​ರ್‍ಸ್ ವಿರುದ್ಧ ಗಲಾಟೆಯಲ್ಲಿ ಮಹಿಳೆಯರು ಸಹ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದ್ದು, ಪುಂಡಾಟಿಕೆ ನಡೆಸಿದ ಮಹಿಳೆಯರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಗಲಭೆ ಸಂಬಂಧ ಬಹಿರಂಗವಾಗಿರುವ ವಿಡಿಯೋಗಳನ್ನು ಮಹಿಳೆಯರು ಸಹ ಕಂಡು ಬಂದಿದ್ದಾರೆ. ಈ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದ್ದು, ತಪ್ಪು ಮಾಡಿದ್ದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

click me!