ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲ ಹೇಗೆ?: ಇಂದು ಸಂಪುಟ ನಿರ್ಧಾರ

By Kannadaprabha NewsFirst Published Apr 20, 2020, 7:35 AM IST
Highlights

ಲಾಕ್‌ ಸಡಿಲ ಹೇಗೆ?: ಇಂದು ಸಂಪುಟ ನಿರ್ಧಾರ| ಲಾಕ್‌ಡೌನ್‌ ಇದ್ದರೂ ಹೆಚ್ಚುತ್ತಿರುವ ಕೊರೋನಾ ಕೇಸು| ಆರ್ಥಿಕ ಬಿಕ್ಕಟ್ಟು ನಿವಾಹರಣೆ ಬಗ್ಗೆಯೂ ಚರ್ಚೆ

ಬೆಂಗಳೂರು(ಏ.20): ರಾಜ್ಯದ ಆರ್ಥಿಕ ಪುನಶ್ಚೇತನಕ್ಕಾಗಿ ಲಾಕ್‌ಡೌನ್‌ ಸಡಿಲಗೊಳಿಸುವುದು ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಸಚಿವ ಸಂಪುಟ ಸಭೆ ಕರೆದಿದ್ದು, ಮಹತ್ವ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಹಾಟ್‌ಸ್ಪಾಟ್‌ ಪ್ರದೇಶದಲ್ಲಿ ತೀವ್ರ ಅವಲೋಕನ ನಡೆಸಲಾಗಿದೆ. ಈ ವೇಳೆಯೂ ಕೊರೋನಾ ವೈರಸ್‌ ತಹಬದಿಗೆ ಬಂದಿಲ್ಲ. ಈ ನಡುವೆ ರಾಜ್ಯದ ಆರ್ಥಿಕತೆಯು ಸಂಕಷ್ಟದಲ್ಲಿದ್ದು, ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಲಾಕ್‌ಡೌನ್‌ ಸಡಿಲಗೊಳಿಸಲು ನಿರ್ಧರಿಸಲಾಗಿದೆ. ಯಾವ ರೀತಿಯಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಬೇಕು ಎಂಬುದರ ಬಗ್ಗೆ ಈಗಾಗಲೇ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅದಕ್ಕೆ ವಿಧಿಸಬೇಕಾದ ನಿಬಂಧನೆಗಳ ಕುರಿತು ಹಾಗೂ ನಿಬಂಧನೆಗಳ ಪಾಲನೆಯಾಗುತ್ತಿರುವ ಬಗ್ಗೆ ಮೇಲ್ವಿಚಾರಣೆ ವಹಿಸಲು ತಂಡಗಳನ್ನು ರಚಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಲಾಕ್‌ಡೌನಲ್ಲೂ ರಾಜ್ಯ ಸರ್ಕಾರಕ್ಕೆ 'ಲಾಭ'!

ಆದಾಯ ತಂದುಕೊಡಬಲ್ಲ ಮದ್ಯ ಮಾರಾಟ ಮೇ 3ರವರೆಗೆ ನಿಷೇಧಿಸಲಾಗಿದೆ. ಹೀಗಾಗಿ ಅಬಕಾರಿ ಇಲಾಖೆ ಹೊರತುಪಡಿಸಿ ಸರಕು ಮತ್ತು ಸೇವಾ ತೆರಿಗೆ, ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುಂದ್ರಾಕ ಇಲಾಖೆಗಳಿಗೆ ಕೆಲವು ನಿಬಂಧನೆಗಳೊಂದಿಗೆ ಕೆಲಸ ಮಾಡಲು ಅನುವು ಮಾಡಿಕೊಡಲಾಗುವುದು. ಈಗಾಗಲೇ ಸರ್ಕಾರ ಘೋಷಣೆ ಮಾಡಿರುವಂತೆ ಶೇ.33ರಷ್ಟುಸಿಬ್ಬಂದಿ ಕಾರ್ಯನಿರ್ವಹಣೆಗೆ ಅವಕಾಶ ಮಾಡುವ ಕುರಿತು ಸಮಾಲೋಚನೆ ನಡೆಯುವ ಸಾಧ್ಯತೆ ಇದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಆರ್ಥಿಕ ಚಟುವಟಿಕೆಯನ್ನು ಪ್ರಾರಂಭಿಸುವ ಬಗ್ಗೆ ಆಲೋಚನೆ ಮಾಡಲಾಗಿದೆ. ಅಗತ್ಯ ಸೇವೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಮೇ 3ರವರೆಗೆ ಲಾಕ್‌ಡೌನ್‌ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಟೈನ್ಮೆಂಟ್‌ ವಲಯ ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕೆಲಸ ನಡೆಸಲಾಗುತ್ತಿದೆ. ಸೋಂಕು ಪೀಡಿತ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇತರೆ ಪ್ರದೇಶದಲ್ಲಿ ಸಡಿಲಗೊಳಿಸಿ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ. ಸಚಿವ ಸಂಪುಟದಲ್ಲಿ ಈ ಬಗ್ಗೆ ಸಾಧಕ-ಬಾಧಕ ಕುರಿತು ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಇನ್ಮುಂದೆ ಧಾರವಾಡದ ಡಿಮ್ಹಾನ್ಸ್‌ನಲ್ಲೂ ಕೊರೋನಾ ಟೆಸ್ಟಿಂಗ್‌

ಲಾಕ್‌ಡೌನ್‌ ಸಡಿಲಿಕೆ ಅವಧಿಯಲ್ಲಿ ಜನರಿಗೆ ಸಾರಿಗೆ ವ್ಯವಸ್ಥೆ ಮಾಡುವುದು, ಕೈಗಾರಿಕೆ, ಕಾರ್ಖಾನೆಗಳಲ್ಲಿ ಶೇ.33ರಷ್ಟುಸಿಬ್ಬಂದಿ ಹಾಜರಾತಿ ಪಾಲನೆಯಾಗುತ್ತಿದೆಯೇ ಎಂಬುದನ್ನು ಗಮನಿಸುವುದು, ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿಯಮಾವಳಿಗಳನ್ನು ತಯಾರಿಸುವ ಕುರಿತು ಚರ್ಚೆ ನಡೆಸಲಾಗುವುದು. ಇದಲ್ಲದೇ, ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿಗೆ ಅಗತ್ಯ ನೆರವು ನೀಡುವ ಕುರಿತು ಸಮಾಲೋಚನೆ ನಡೆಯುವ ಸಾಧ್ಯತೆ ಎಂದು ಹೇಳಲಾಗಿದೆ.

click me!