ನವ ಭಾರತ ನಿರ್ಮಾಣ ಮಾಡಲು ಆಶೀರ್ವದಿಸಿ: ಸಿಎಂ ಬೊಮ್ಮಾಯಿ

By Kannadaprabha News  |  First Published Mar 5, 2023, 11:01 PM IST

ನವ ಕರ್ನಾಟಕ ನಿರ್ಮಾಣದ ಮೂಲಕ, ನವ ಭಾರತ ನಿರ್ಮಾಣ ಮಾಡಲು ನಮ್ಮ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದ್ದು, ಅಭಿವೃದ್ಧಿಯಲ್ಲಿ ದೇಶದಲ್ಲೇ ಕರ್ನಾಟಕವನ್ನು ನಂ. 1 ರಾಜ್ಯವನ್ನಾಗಿ ಮಾಡಲು ಆಶೀರ್ವದಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಲ್ಲಿ ಮನವಿ ಮಾಡಿದರು. 


ತುಮಕೂರು (ಮಾ.05): ನವ ಭಾರತ ನಿರ್ಮಾಣ ಮಾಡಲು ಆಶೀರ್ವಾದ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಲ್ಲಿ ಮನವಿ ಮಾಡಿದರು. ಭಾನುವಾರದಂದು ನಗರದ ಸಪಪೂ ಕಾಲೇಜು ಮೈದಾನದಲ್ಲಿ ನಡೆದ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ 600 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಸರ್ಕಾರಿ ಸವಲತ್ತು ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನವ ಕರ್ನಾಟಕ ನಿರ್ಮಾಣದ ಮೂಲಕ, ನವ ಭಾರತ ನಿರ್ಮಾಣ ಮಾಡಲು ನಮ್ಮ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದ್ದು, ಅಭಿವೃದ್ಧಿಯಲ್ಲಿ ದೇಶದಲ್ಲೇ ಕರ್ನಾಟಕವನ್ನು ನಂ. 1 ರಾಜ್ಯವನ್ನಾಗಿ ಮಾಡಲು ಆಶೀರ್ವದಿಸುವಂತೆ ಕೋರಿದರು.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ, ಕಾನೂನಿನಲ್ಲೇ ಪರಿಹಾರ ಹುಡುಕಿ, ನ್ಯಾಯಕ್ಕೆ ಮನ್ನಣೆ ಕೊಡುವ ಸರ್ಕಾರ ನಮ್ಮದು. ಯಾವ - ಯಾವ ಪ್ರಕರಣದಲ್ಲಿ ನಮ್ಮ ಬಿಜೆಪಿ ರಾಜ್ಯ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ಯಾರು ಬೇಕಾದರೂ ನೋಡಬಹುದಾಗಿದೆ. ನ್ಯಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ನ್ಯಾಯ ನಿಷ್ಟುರಿಯಾಗಿದ್ದೇವೆ. ಯಾವ ಪ್ರಕರಣಗಳಲ್ಲಿ ಬಿ ರಿಪೋರ್ಟ್‌ ಹಾಕಿಸಿದ್ದೇವೆ ಎಂಬುದನ್ನು ಪರಿಶೀಲಿಸಬಹುದಾಗಿದೆ ಎಂದ ಬೊಮ್ಮಾಯಿ, ಲೋಕಾಯುಕ್ತವನ್ನು ಬಲಪಡಿಸಿದ್ದೇವೆ ಎಂದರು.

Tap to resize

Latest Videos

ಆಡಳಿತಗಾರನಿಗೆ ತಲೆ ತಣ್ಣಗಿರಬೇಕು, ಹೃದಯ ವಿಶಾಲವಾಗಿರಬೇಕು: ಸಿಎಂ ಬೊಮ್ಮಾಯಿ

ಬದುಕು ಗೊತ್ತಿಲ್ಲದವರಿಂದ ಆಡಳಿತ: ಜನತೆಯ ಬದುಕು ಗೊತ್ತಿಲ್ಲದ, ಸುಳ್ಳನ್ನೇ ಸತ್ಯವೆಂದು ನಂಬಿಸಿ, ಕಳೆದ 65 ವರ್ಷಗಳಲ್ಲಿ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾ, ಎಸ್‌ಸಿ, ಎಸ್‌ಟಿ, ಹಿಂದುಳಿದವರಿರುವುದೇ ನಮಗಾಗಿ ಎಂದು ದರ್ಪದಿಂದ ಅಧಿಕಾರ ನಡೆಸಿದವರನ್ನು ನೋಡಿದ್ದೇವೆ ಎಂದು ಕಾಂಗ್ರೆಸ್‌ ಪಕ್ಷದ ಹೆಸರೇಳದೆ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನಮ್ಮ ಬಿಜೆಪಿ ಸರ್ಕಾರ ಬದಲಾವಣೆಯ ವಾಹನವಿದ್ದಂತೆ. ರೈತರು, ಕಾರ್ಮಿಕರು, ದೀನ-ದಲಿತರನ್ನು ದುಡಿಮೆಗೆ ಹಚ್ಚಿ, ಅವರ ಅಭ್ಯುದಯಕ್ಕಾಗಿ ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿಗೆ ಸಹಕರಿಸುವಂತೆ ಮಾಡುವ ಮೂಲಕ ಬದಲಾವಣೆಗೆ ಚಾಲನೆ ನೀಡಿದ್ದೇವೆ. ಅದರ ಪರಿಣಾಮವೇ ತುಮಕೂರಿನಲ್ಲಿ ನಡೆದಿರುವ ಸರ್ಕಾರಿ ಯೋಜನೆ ಫಲಾನುಭವಿಗಳ ಸಮಾವೇಶ.

ಹಿಂದೆ ದುಡ್ಡೇ ದೊಡ್ಡಪ್ಪ ಅನ್ನುವ ಕಾಲವಿತ್ತು. ಆದರೆ ನಾವು ದುಡಿಮೆಯೇ ದೊಡ್ಡಪ್ಪ ಎಂದು ಸಾಬೀತುಪಡಿಸಿದ್ದೇವೆ. ದುಡಿಮೆಗೆ ಬೆಲೆ ಬರಬೇಕು. ನಾಡನ್ನು ಕಟ್ಟಲು ಕೆಳಹಂತದಲ್ಲಿರುವ ರೈತರು, ಕಾರ್ಮಿಕರು, ದೀನ-ದಲಿತರ ಬೆಂಬಲಕ್ಕೆ ನಿಂತಿದ್ದೇವೆ. ಇವರೆಲ್ಲಾ ಎಚ್ಚೆತ್ತುಕೊಂಡಿದ್ದಾರೆ. ಅವರ ದುಡಿಮೆಗೆ ಸಹಕರಿಸುವುದು ನಮ್ಮ ಕೆಲಸ ಎಂದು ವಿಶ್ಲೇಷಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಇತರರಿದ್ದರು.

ರೈತ ವಿದ್ಯಾನಿಧಿ: ರೈತರ ಮಕ್ಕಳು ಸಹ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ರೈತ ವಿದ್ಯಾ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದ 12 ಲಕ್ಷ ರೈತರ ಮಕ್ಕಳು ಹಾಗೂ ತುಮಕೂರು ಜಿಲ್ಲೆಯ 18 ಸಾವಿರ ರೈತ ಮಕ್ಕಳು ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು. ನಾನು ಮೂಡ ಬಿದರೆಗೆ ಹೋಗಿದ್ದೆ, 18 ವರ್ಷದ ಹೆಣ್ಣು ಮಗಳು ಒಂದು ಪತ್ರವನ್ನು ಕೊಟ್ಟರು. ವಿದ್ಯಾನಿಧಿ ಸಿಕ್ಕಿದೆ, ಕೇಳದೆ ಇಷ್ಟೆಲ್ಲಾ ಕೊಟ್ಟಿದ್ದೀರಾ ಸಂತೋಷ ಆಯ್ತು. ವಿದ್ಯಾನಿಧಿ ನನಗೆ ಎರಡು ಬಾರಿ ಸಿಕ್ಕಿದೆ. ಆದರೆ ಇನ್ನೊಬ್ಬರಿಗೂ ಈ ಯೋಜನೆ ಸಿಗಬೇಕು. ತಮಗೆ ಒಂದು ಸಾಕು ಎಂದು ಪತ್ರ ಬರೆದಿದ್ದರು ಎಂದು ಸ್ಮರಿಸಿದ ಬೊಮ್ಮಾಯಿ, ರೈತರ ಎಲ್ಲಾ ಮಕ್ಕಳಿಗೂ ವಿದ್ಯಾ ನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.

ಜಾತಿ, ಧರ್ಮದ ವಿಷಯದಲ್ಲಿ ಕಾಂಗ್ರೆಸ್‌ ದ್ವೇಷದ ರಾಜಕಾರಣ: ರಮೇಶ್‌ ಜಾರಕಿಹೊಳಿ

ಡಯಾಲಿಸಿಸ್‌: ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸೀಸ್‌ ಸೈಕಲ್‌ ಅನ್ನು ಒಂದು ಲಕ್ಷಕ್ಕೆ ಈ ವರ್ಷ ಬಜೆಟ್‌ನಲ್ಲಿ ಹೆಚ್ಚಿಸಲಾಗಿದೆ. 12 ಹೊಸ ಕೇಂದ್ರಗಳ ಮೂಲಕ ಕಿಮೋ ಥೆರಪಿ ಸೈಕಲ್‌ ಅನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ, ಅಂತೆಯೇ ಕಾಕ್ಲಿಯರ್‌ ಇನ್‌ ಪ್ಲಾಂಟ್‌, ಪೌಷ್ಠಿಕ ಆಹಾರ ಕೊರತೆ ನೀಗಿಸುವ ಕಾರ್ಯಕ್ರಮ, 60 ವರ್ಷ ಮೇಲ್ಪಟ್ಟವರಿಗೆ ಕನ್ನಡಕ ವಿತರಿಸುವ ಕಾರ್ಯಕ್ರಮ, ನಮ್ಮ ಕ್ಲಿನಿಕ್‌ ಮುಂತಾದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು. ಜಮೀನು ಇಲ್ಲದ ಕಡು ಬಡ ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ, ಯುವಶಕ್ತಿಯನ್ನು ಮುಖ್ಯವಾಹಿನಿಗೆ ತರಲು ಉದ್ಯೋಗ ಯೋಜನೆ, ಹಳ್ಳಿಗಾಡಿನ ಮಕ್ಕಳಿಗಾಗಿ 2 ಸಾವಿರ ಶಾಲಾ ಬಸ್‌ಗಳ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

click me!