ತೀರ್ಪು ಪ್ರಕಟವಾಗುತ್ತಿದ್ದಂತೆ ಮೂವರು ಮಕ್ಕಳ ಜೊತೆ ಕೋರ್ಟ್‌ ಹಾಲ್‌ನಲ್ಲೇ ಕಣ್ಣೀರಿಟ್ಟ ಶಾಸಕ ವಿನಯ್‌ ಕುಲಕರ್ಣಿ

Published : Apr 15, 2026, 06:48 PM IST
vinay kulkarni convicted

ಸಾರಾಂಶ

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದ್ದು, 2 ವರ್ಷಕ್ಕಿಂತ ಅಧಿಕ ಶಿಕ್ಷೆಯಾದರೆ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ. 

ಧಾರವಾಡ (ಏ.15): ಯೋಗೇಶ್‌ ಗೌಡ ಹತ್ಯೆ ಕೇಸ್‌ನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಧಾರವಾಡ ಗ್ರಾಮೀಣ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದೆ. ಅದರೊಂದಿಗೆ ವಿನಯ್‌ ಕುಲಕರ್ಣಿಗೆ ನೀಡಲಿರುವ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಅದರ ಮೇಲೆ ಅವರ ಶಾಸಕ ಸ್ಥಾನ ಕೂಡ ನಿರ್ಧಾರವಾಗಲಿದೆ. ಹಾಗೇನಾದರೂ ವಿನಯ್‌ ಕುಲಕರ್ಣಿಗೆ 2 ವರ್ಷಕ್ಕಿಂತ ಅಧಿಕ ಕಾಲದ ಶಿಕ್ಷೆಯಾದಲ್ಲಿ ತಕ್ಷಣವೇ ಅವರ ಶಾಸಕ ಸ್ಥಾನ ಅನರ್ಹವಾಗಲಿದೆ. ಇನ್ನೊಂದೆಡೆ ಅವರಿಗೆ 2 ವರ್ಷಕ್ಕಿಂತ ಅಧಿಕ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ ಎಂದೂ ವರದಿಯಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಯಲದ ನ್ಯಾಯಾಧೀಶ ಸಂತೋಷ್‌ ಗಜಾನನ್‌ ಭಟ್‌, ಕೇಸ್‌ನಲ್ಲಿ ಅಂತಿಮ ತೀರ್ಪು ನೀಡಿ ಶಾಸಕ ವಿನಯ್‌ ಕುಲಕರ್ಣಿ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ ಕುಂತಲ್ಲೇ ಕುಸಿದ ಅವರು ಕಣ್ಣೀರಿಡಲು ಆರಂಭಿಸಿದರು. ಅಂತಿಮ ತೀರ್ಪಿಗೂ ಮುನ್ನ ಕೇಸ್‌ನಲ್ಲಿ ಖುಲಾಸೆಯಾಗುವ ಭರವಸೆಯಲ್ಲಿದ್ದ ವಿನಯ್‌ ಕುಲಕರ್ಣಿ ಇಷ್ಟು ವರ್ಷ ನಡೆಸಿದ ಪ್ರಯತ್ನವೆಲ್ಲಾ ಒಂದೇ ತೀರ್ಪಿನೊಂದಿಗೆ ಮಣ್ಣುಪಾಲಾಯಿತಲ್ಲ ಎನ್ನುವ ದುಃಖ ಅವರಲ್ಲಿ ಕಾಣುತ್ತಿತ್ತು. ಇನ್ನು ವಿನಯ್‌ ಕುಲಕರ್ಣಿ ಕಣ್ಣೀರಿಡುವಾಗ ಅವರನ್ನು ನೋಡುತ್ತಿದ್ದ ಮೂವರು ಮಕ್ಕಳು ಕೂಡ ಕೋರ್ಟ್‌ ಕಾರಿಡಾರ್‌ನಲ್ಲಿ ಕಣ್ಣೀರಿಟ್ಟರು.

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ಭಾಗಿಯಾಗಿರುವ ವಿನಯ್ ಕುಲಕರ್ಣಿ ಸೇರಿ 19 ಮಂದಿ ದೋಷಿಗಳು ಎಂದು ತೀರ್ಪು ನೀಡಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಈ ಕೊಲೆ ಪ್ರಕರಣದ ಎ15 (15ನೇ ಆರೋಪಿ) ಆಗಿದ್ದು, ಹತ್ಯೆಯ ಹಿಂದೆ ನಡೆದ 'ಒಳಸಂಚು' ಸಂಚಿನಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಅಪರಾಧಿಗಳಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣದ ಕುರಿತು ನಾಳೆ (ಏಪ್ರಿಲ್ 16) ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯಲಿದ್ದು, ನಂತರ ಅಂತಿಮ ಶಿಕ್ಷೆ ಪ್ರಕಟವಾಗಲಿದೆ.

ಘಟನೆಯ ಹಿನ್ನೆಲೆ

2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಮಾಲೀಕತ್ವದ ಜಿಮ್‌ನಲ್ಲಿ ಯೋಗೀಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ವಿನಯ್ ಕುಲಕರ್ಣಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ನಂತರ 2019ರಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಹಸ್ತಾಂತರಿಸಿತ್ತು.

ಸಿಬಿಐ ತನಿಖೆ ಚುರುಕುಗೊಳಿಸಿದ ಅಧಿಕಾರಿಗಳು, 2020ರ ನವೆಂಬರ್ 5ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಸುಮಾರು ಒಂಬತ್ತು ತಿಂಗಳು ಜೈಲಿನಲ್ಲಿದ್ದ ಅವರು, 2021ರ ಆಗಸ್ಟ್‌ನಲ್ಲಿ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ಪ್ರಕರಣದ ತನಿಖೆ ಮತ್ತು ವಿಚಾರಣೆ ಮುಂದುವರಿದಂತೆ ವಿನಯ್ ಕುಲಕರ್ಣಿ ಜೈಲಿನಲ್ಲಿರೋದು, ಜಾಮೀನಿನ ಮೂಲಕ ಹೊರಬರೋದು ಸಾಮಾನ್ಯವಾಗಿತ್ತು. ಪ್ರಸ್ತುತ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಇಂದು (ಏಪ್ರಿಲ್ 15) ಪ್ರಕರಣದ ಎಲ್ಲಾ 21 ಆರೋಪಿಗಳು ಕೋರ್ಟ್‌ ಮುಂದೆ ಹಾಜರಿದ್ದರು. ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರು, ಲಭ್ಯವಿರುವ ಸಾಕ್ಷ್ಯಧಾರಗಳ ಆಧಾರದ ಮೇಲೆ 19 ಮಂದಿಯನ್ನು ದೋಷಿಗಳು ಎಂದು ಘೋಷಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿನಯ್ ಕುಲಕರ್ಣಿ ಕೊಲೆಗಾರ: 40 ಎಕರೆ ಜಮೀನು ತಕರಾರು, ರಾಜಕೀಯ ದ್ವೇಷಕ್ಕೆ ಕುಟುಂಬದ ಆಧಾರವನ್ನೇ ಮುಗಿಸಿದ ಕಥೆ!
ಯೋಗೇಶ್ ಗೌಡ ಹತ್ಯೆ ಕೇಸಲ್ಲಿ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದ ಕೋರ್ಟ್; ಧಾರವಾಡದಲ್ಲಿ 'ಖಾಕಿ' ಹೈ ಅಲರ್ಟ್!